ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ 76 ರನ್ ಗಳಿಸಿದರು. ಪಂದ್ಯದ ನಂತರ, ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ವದಂತಿಗಳಿಗೆ ತೆರೆ ಎಳೆದರು. ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರೋಹಿತ್ ಹಾಗೂ ಗಿಲ್ ಶತಕದ ಜೊತೆಯಾಟ ಆಡಿದರು.
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್ ಪಂದ್ಯ ನಡೆಯಿತು. ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಊಹಾಪೋಹಗಳಿಗೆ ಬ್ರೇಕ್ ಹಾಕಿದರು.
ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ವತಃ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ನಿವೃತ್ತಿಯಾಗಲ್ಲ ಎಂದಿದ್ದಾರೆ. ಟೂರ್ನಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಕದಿನ ಕ್ರಿಕೆಟ್‌ನಿಂದ ಸದ್ಯಕ್ಕೆ ನಿವೃತ್ತಿಯಾಗಲ್ಲ. ದಯವಿಟ್ಟು ವದಂತಿಗಳನ್ನು ಹರಡಬೇಡಿ. ಭವಿಷ್ಯದ ಬಗ್ಗೆ ಭವಿಷ್ಯದಲ್ಲೇ ನಿರ್ಧರಿಸುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಚಿಕ್ಕ ಮಕ್ಕಳಂತೆ ಕುಣಿದ ಸುನೀಲ್ ಗವಾಸ್ಕರ್, ವೈರಲ್ ಆದ ವಿಡಿಯೋ!
ಚಾಂಪಿಯನ್ಸ್ ಟ್ರೋಫಿ ಫೈನಲ್ ಮುಂಚೆ ರೋಹಿತ್ ನಿವೃತ್ತಿ ವದಂತಿ
ಫೈನಲ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಗಿದ ಬಳಿಕ ಏಕದಿನ ಕ್ರಿಕೆಟ್‌ಗೆ ಗುಡ್ ಬೈ ಹೇಳಬಹುದು ಎಂಬ ವದಂತಿ ಹಬ್ಬಿತ್ತು. ಭಾರತದ ಗೆಲುವಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ರೋಹಿತ್ ಅವರ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಲಾಯಿತು. ಮೊದಲು ಈ ಪ್ರಶ್ನೆಯನ್ನು ನಗುತ್ತಾ ತಪ್ಪಿಸಿದ ರೋಹಿತ್, "ಯಾವುದೇ ಭವಿಷ್ಯದ ಯೋಜನೆಗಳಿಲ್ಲ. ಏನು ನಡೆಯುತ್ತಿದೆಯೋ ಅದು ನಡೆಯುತ್ತದೆ. ನಾನು ಈ ಫಾರ್ಮ್ಯಾಟ್‌ನಿಂದ ನಿವೃತ್ತಿ ಹೊಂದುವುದಿಲ್ಲ. ಮುಂದೆ ಯಾವುದೇ ವದಂತಿಗಳು ಹರಡದಂತೆ ನೋಡಿಕೊಳ್ಳಬೇಕು ಅಷ್ಟೇ" ಎಂದರು. ಈ ಮೂಲಕ ಹಿಟ್‌ಮ್ಯಾನ್ ತಾವು ಏಕದಿನ ಮಾದರಿಯಲ್ಲಿ ಇನ್ನೂ ಕೆಲವು ಸಮಯ ಮುಂದುವರೆಯುವುದಾಗಿ ಖಚಿತಪಡಿಸಿದ್ದಾರೆ.
"ಐಸಿಸಿ ಟ್ರೋಫಿ ಗೆಲ್ಲುವುದು ತಂಡದ ದೊಡ್ಡ ಸಾಧನೆ. ಒಂದು ಪಂದ್ಯವನ್ನೂ ಸೋಲದಿರುವುದು ಬೋನಸ್ ಇದ್ದಂತೆ. ಒಂದು ಟೂರ್ನಿಯ ನಂತರ ಮತ್ತೊಂದು ಟೂರ್ನಿಯಲ್ಲಿ ಸೋಲದೆ ಗೆದ್ದ ತಂಡಗಳನ್ನು ನಾನು ಬಹಳ ಕಡಿಮೆ ನೋಡಿದ್ದೇನೆ. ದುಬೈಗೆ ಬಂದ ನಂತರ ಚೆನ್ನಾಗಿ ತಯಾರಿ ನಡೆಸಿದೆವು. ಪರಿಸ್ಥಿತಿಗಳನ್ನು ನಮಗೆ ಅನುಕೂಲಕರವಾಗಿ ಬಳಸಿಕೊಂಡು ಪ್ರಶಸ್ತಿ ಗೆದ್ದೆವು." ಎಂದು ರೋಹಿತ್ ಶರ್ಮಾ ಪ್ರಶಸ್ತಿ ಗೆದ್ದ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ, 10 ತಿಂಗಳಲ್ಲಿ 2 ಐಸಿಸಿ ಟ್ರೋಫಿ ಗೆದ್ದ ರೋಹಿತ್ ಶರ್ಮಾ ಪಡೆ!
ಫೈನಲ್‌ನಲ್ಲಿ ರೋಹಿತ್ ಶರ್ಮಾ 76 ರನ್
ಗೆಲುವಿಗೆ ಭಾರತಕ್ಕೆ 252 ರನ್ ಗಳಿಸುವ ಅಗತ್ಯವಿತ್ತು. ರೋಹಿತ್ ಶರ್ಮಾ ಸ್ಪೋಟಕ ಬ್ಯಾಟಿಂಗ್‌ನೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. ಅವರು 83 ಎಸೆತಗಳಲ್ಲಿ 76 ರನ್ ಗಳಿಸಿದರು. ಇದರಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು. ಕೈಲ್ ಜೇಮಿಸನ್ ಎಸೆದ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ತಮ್ಮ ಟ್ರೇಡ್‌ಮಾರ್ಕ್ ಪುಲ್ ಶಾಟ್ ಮೂಲಕ ಸಿಕ್ಸರ್ ಬಾರಿಸುವ ಮೂಲಕ ಇನ್ನಿಂಗ್ಸ್ ಆರಂಭಿಸಿದರು. ರೋಹಿತ್ 41 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಇದು ಅವರ ಮೊದಲ 50+ ಸ್ಕೋರ್ ಆಗಿತ್ತು.
ಇದನ್ನೂ ಓದಿ: ಬೆಂಗಳೂರು ಮೂಲದ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಯಾರು? ಪ್ರೇಮಿಲಾ ಹಿನ್ನೆಲೆ ಏನು?
ರೋಹಿತ್-ಗಿಲ್ 7ನೇ ಶತಕದ ಜೊತೆಯಾಟ: ಎಲ್ಲ 7ರಲ್ಲೂ ಗೆಲುವು!
ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 7 ಬಾರಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ್ದಾರೆ. ಈ ಎಲ್ಲಾ 7 ಪಂದ್ಯಗಳಲ್ಲೂ ಭಾರತ ಗೆದ್ದಿದೆ ಎನ್ನುವುದು ವಿಶೇಷ. ಭಾನುವಾರ ಫೈನಲ್‌ನಲ್ಲಿ ಇವರಿಬ್ಬರಿಂದ ಮೂಡಿಬಂದ 105 ರನ್ ಜೊತೆಯಾಟ ಭಾರತದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟಿತು. ಆ ಬಳಿಕ ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ ಜವಾಬ್ದಾರಿಯುತ ಆಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
