ಮುಂದಿನ 3 ವಾರಗಳಲ್ಲಿ ಏಷ್ಯಾದ ಕ್ರಿಕೆಟಿಂಗ್ ರಾಷ್ಟ್ರಗಳ ನಡುವಿನ ವೈರತ್ವ ನವೀಕರಣಗೊಳ್ಳಲಿದ್ದು, ಕೆಲ ಹೊಸ ಹೀರೋಗಳು ಉದಯಿಸುವ ನಿರೀಕ್ಷೆ ಇದೆ. ಏಷ್ಯಾಕಪ್‌ ಗೆಲ್ಲುವುದು ತಂಡಗಳ ಗುರಿಯಾದರೂ, ಎಲ್ಲರ ದೃಷ್ಟಿಯು ವಿಶ್ವಕಪ್ ಮೇಲೆ ನೆಟ್ಟಿದೆ.

ಮುಲ್ತಾನ್‌/ಕೊಲಂಬೊ(ಆ.30): ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಮುಂದಿನ 3 ವಾರಗಳಲ್ಲಿ 3 ಪಂದ್ಯಗಳು ನಡೆಯಬಹುದು ಎನ್ನುವ ನಿರೀಕ್ಷೆಯೊಂದಿಗೆ 16ನೇ ಆವೃತ್ತಿಯ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಬುಧವಾರ ಚಾಲನೆ ದೊರೆಯಲಿದೆ.

ಈ ವರ್ಷ ಏಕದಿನ ವಿಶ್ವಕಪ್‌ ಇರುವ ಕಾರಣ, ಟೂರ್ನಿಯನ್ನು ಏಕದಿನ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ಆತಿಥ್ಯ ಹಕ್ಕು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಬಳಿ ಇದ್ದರೂ, ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ ಹಿನ್ನೆಲೆಯಲ್ಲಿ 13 ಪಂದ್ಯಗಳ ಟೂರ್ನಿಯ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ, ಇನ್ನುಳಿದ 4 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಲಾಗುತ್ತಿದೆ. ಸೆ.17ರಂದು ಫೈನಲ್‌ ಪಂದ್ಯ ನಡೆಯಲಿದೆ. ಬುಧವಾರ ಉದ್ಘಾಟನಾ ಪಂದ್ಯವು ಮುಲ್ತಾನ್‌ನಲ್ಲಿ ನಡೆಯಲಿದ್ದು, ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಸೆಣಸಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆ.2ರಂದು ಪಾಕಿಸ್ತಾನ ವಿರುದ್ಧ ಪಲ್ಲಕೆಲ್ಲೆಯಲ್ಲಿ ಆಡಲಿದೆ.

ಹುಬ್ಬಳ್ಳಿ ಟೈಗರ್ಸ್‌ ಮಡಿಲಿಗೆ ಮಹಾರಾಜ ಟ್ರೋಫಿ

6 ತಂಡಗಳ ಪೈಕಿ ನೇಪಾಳ ಹೊರತುಪಡಿಸಿ ಇನ್ನುಳಿದ 5 ತಂಡಗಳು ಮುಂಬರುವ ಏಕದಿನ ವಿಶ್ವಕಪ್‌ ಸಿದ್ಧತೆಗೆ ಈ ಟೂರ್ನಿಯನ್ನು ವೇದಿಕೆ ಮಾಡಿಕೊಳ್ಳಲಿವೆ.

7 ಬಾರಿ ಚಾಂಪಿಯನ್‌ ಭಾರತಕ್ಕೆ ಈ ಟೂರ್ನಿಯನ್ನು ಗೆದ್ದು 8ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯುವುದಷ್ಟೇ ಗುರಿಯಾಗಿರಲು ಸಾಧ್ಯವಿಲ್ಲ. ವಿಶ್ವಕಪ್‌ ಮುಂದಿದ್ದರೂ ಇನ್ನೂ ಕೆಲ ಪ್ರಮುಖ ಪ್ರಶ್ನೆಗಳಿಗೆ ಟೀಂ ಇಂಡಿಯಾ ಉತ್ತರಗಳನ್ನು ಹುಡುಕಿಕೊಳ್ಳಬೇಕಿದೆ. ಪ್ರಮುಖವಾಗಿ ಕೆ.ಎಲ್‌.ರಾಹುಲ್‌ ಇನ್ನೂ ಸಂಪೂರ್ಣ ಫಿಟ್‌ ಆಗಿಲ್ಲ. ಅವರ ಮೇಲೆ ವಿಶ್ವಾಸವಿಟ್ಟು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಏಷ್ಯಾಕಪ್‌ ವೇಳೆ ಅವರ ಫಿಟ್ನೆಸ್‌ನತ್ತ ತಂಡದ ಆಳಡಿತ ಸೂಕ್ಷ್ಮ ಕಣ್ಣಿಡಲಿದೆ. ಶ್ರೇಯಸ್‌ ಅಯ್ಯರ್‌ ಮೊದಲ ಪಂದ್ಯದಿಂದಲೇ 4ನೇ ಕ್ರಮಾಂಕದಲ್ಲಿ ಆಡುವುದು ಖಚಿತವಾಗಿದ್ದು, ಅವರ ಮೇಲೂ ತಂಡ ಗಮನ ಹರಿಸಲಿದೆ. ನಿರಂತರವಾಗಿ 4ನೇ ಕ್ರಮಾಂಕದ ಸಮಸ್ಯೆ ಎದುರಿಸುತ್ತಿರುವ ಭಾರತ ತಂಡಕ್ಕೆ ಶ್ರೇಯಸ್‌ ಪರಿಹಾರ ಒದಗಿಸಲಿದ್ದಾರಾ ಎನ್ನುವ ಕುತೂಹಲಕ್ಕೂ ಉತ್ತರ ಸಿಗಬಹುದು.

ಇನ್ನು, ಗಾಯದಿಂದ ಚೇತರಿಸಿಕೊಂಡು ಐರ್ಲೆಂಡ್‌ ವಿರುದ್ಧ ಟಿ20ಯಲ್ಲಿ ಆಡಿದ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಹಾಗೂ ಪ್ರಸಿದ್ಧ್‌ ಕೃಷ್ಣ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದರೂ, ಟಿ20 ಕ್ರಿಕೆಟ್‌ಗೂ ಏಕದಿನಕ್ಕೂ ಬಹಳಷ್ಟು ವ್ಯತ್ಯಾಸವಿರುವ ಕಾರಣ, ಇಬ್ಬರು ಕಠಿಣ ಸವಾಲಿಗೆ ಸಿದ್ಧರಾಗಿದ್ದಾರೆಯೇ ಎನ್ನುವುದೂ ತಿಳಿಯಲಿದೆ.

ಒಂದು ದಿನ ಮುಂಚಿತವಾಗಿಯೇ ಏಕದಿನ ವಿಶ್ವಕಪ್‌ ಉದ್ಘಾಟನಾ ಸಮಾರಂಭ..!

ಭಾರತ ಮಾತ್ರವಲ್ಲದೇ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳೂ ವಿಶ್ವಕಪ್‌ ಸಮೀಪಿಸುತ್ತಿದ್ದರೂ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಟೂರ್ನಿಯಲ್ಲಿ ಪರಿಹಾರ ಕಂಡುಕೊಳ್ಳಲು ಕಾಯುತ್ತಿವೆ.

ಏಕದಿನ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ತಂಡವಾಗಿ ಕಾಲಿಡಲಿರುವ ಪಾಕಿಸ್ತಾನ ಸ್ಥಿರ ಆಟವಾಡುವತ್ತ ಹೆಚ್ಚು ಗಮನ ಹರಿಸಲಿದ್ದು, ತನ್ನ ಬ್ಯಾಟಿಂಗ್‌ ತಾರೆಯರಾದ ಬಾಬರ್‌ ಆಜಂ, ಮೊಹಮದ್‌ ರಿಜ್ವಾನ್‌ ಜೊತೆ ತಾರಾ ವೇಗಿಗಳ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. ಲಂಕಾಕ್ಕೆ ಟೂರ್ನಿ ಆರಂಭಕ್ಕೂ ಮೊದಲೇ ಗಾಯಾಳುಗಳ ಸಮಸ್ಯೆ ಎದುರಾಗಿದ್ದು, ತಂಡ ಸಂಕಷ್ಟದಲ್ಲಿದೆ. ಬಾಂಗ್ಲಾದೇಶ ಶಕೀಬ್‌ ಅಲ್‌ ಹಸನ್‌ರ ನಾಯಕತ್ವದಲ್ಲಿ ಹೊಸ ಆರಂಭಕ್ಕಾಗಿ ಕಾತರಿಸುತ್ತಿದ್ದೆ, ಅಫ್ಘಾನಿಸ್ತಾನ ತನ್ನ ಅಸಲಿ ಸಾಮರ್ಥ್ಯವನ್ನು ಕಾರ್ಯರೂಪಕ್ಕೆ ತಂದು ತಾನಿನ್ನು ಕ್ರಿಕೆಟ್‌ ಶಿಶುವಲ್ಲ ಎನ್ನುವುದನ್ನು ಸಾಬೀತುಪಡಿಸಲು ಹೊರಟಿದೆ.

ಮುಂದಿನ 3 ವಾರಗಳಲ್ಲಿ ಏಷ್ಯಾದ ಕ್ರಿಕೆಟಿಂಗ್ ರಾಷ್ಟ್ರಗಳ ನಡುವಿನ ವೈರತ್ವ ನವೀಕರಣಗೊಳ್ಳಲಿದ್ದು, ಕೆಲ ಹೊಸ ಹೀರೋಗಳು ಉದಯಿಸುವ ನಿರೀಕ್ಷೆ ಇದೆ. ಏಷ್ಯಾಕಪ್‌ ಗೆಲ್ಲುವುದು ತಂಡಗಳ ಗುರಿಯಾದರೂ, ಎಲ್ಲರ ದೃಷ್ಟಿಯು ವಿಶ್ವಕಪ್ ಮೇಲೆ ನೆಟ್ಟಿದೆ.

Asia Cup 2023: ಏಷ್ಯಾಕಪ್ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಬಲಿಷ್ಠ ಆಫ್ಘಾನಿಸ್ತಾನ ತಂಡ ಪ್ರಕಟ

ಟೂರ್ನಿ ಮಾದರಿ ಹೇಗೆ?

ಭಾರತ, ಪಾಕಿಸ್ತಾನ ಹಾಗೂ ನೇಪಾಳ ‘ಎ’ ಗುಂಪಿನಲ್ಲಿದ್ದು, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ‘ಬಿ’ ಗುಂಪಿನಲ್ಲಿವೆ. ಗುಂಪು ಹಂತದಲ್ಲಿ ಪ್ರತಿ ತಂಡವು ಉಳಿದ 2 ತಂಡಗಳ ವಿರುದ್ಧ ತಲಾ ಒಮ್ಮೆ ಆಡಲಿದ್ದು, ಅಗ್ರ-2 ಸ್ಥಾನ ಪಡೆವ ತಂಡಗಳು ಸೂಪರ್‌-4 ಪ್ರವೇಶಿಸಲಿವೆ. ಸೂಪರ್‌-4 ಹಂತದಲ್ಲಿ ಪ್ರತಿ ತಂಡವು ಉಳಿದ 3 ತಂಡಗಳ ವಿರುದ್ಧ ತಲಾ ಒಮ್ಮೆ ಆಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆವ ತಂಡಗಳು ಫೈನಲ್‌ಗೇರಲಿವೆ.

ಇಂದಿನ ಪಂದ್ಯ: ಪಾಕಿಸ್ತಾನ-ನೇಪಾಳ, ಮಧ್ಯಾಹ್ನ 3ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌(ಉಚಿತ)