Asia Cup 2023: ಏಷ್ಯಾಕಪ್ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಬಲಿಷ್ಠ ಆಫ್ಘಾನಿಸ್ತಾನ ತಂಡ ಪ್ರಕಟ
ಹುಸಮತುಲ್ಲಾ ಶಾಹಿದಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯು ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ನಡೆಯುವುದರಿಂದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಏಷ್ಯಾಕಪ್ ಟೂರ್ನಿಗೆ ಆಫ್ಘಾನಿಸ್ತಾನ ತಂಡದಲ್ಲಿ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹಮ್ಮದ್ ಹಾಗೂ ಶೌರಫುದ್ದೀನ್ ಅಶ್ರಫ್ ಹೀಗೆ ನಾಲ್ವರು ಸ್ಪಿನ್ನರ್‌ಗಳಿಗೆ ಮಣೆ ಹಾಕಲಾಗಿದೆ.
ಕಾಬೂಲ್(ಆ.28): ಮುಂಬರುವ ಆಗಸ್ಟ್ 30ರಿಂದ ಆರಂಭವಾಗಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಬಲಾಢ್ಯ ಆಫ್ಘಾನಿಸ್ತಾನ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಅನುಭವಿ ಆಲ್ರೌಂಡರ್ ಕರೀಂ ಜನ್ನತ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 25 ವರ್ಷದ ಕರೀಂ ಜನ್ನತ್, ಇತ್ತೀಚೆಗಷ್ಟೇ ನ್ಯಾಷನಲ್ ಟಿ20 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಆಯ್ಕೆ ಸಮಿತಿ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 2017ರ ಫೆಬ್ರವರಿಯಲ್ಲಿ ಜಿಂಬಾಬ್ವೆ ವಿರುದ್ದ ಹರಾರೆಯಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕರೀಂ, ಇದಾದ ಬಳಿಕ ಒಂದೇ ಒಂದು ಏಕದಿನ ಪಂದ್ಯವನ್ನಾಡಲು ಸಾಧ್ಯವಾಗಿರಲಿಲ್ಲ.
ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಮಿಂಚಲು ಸಾಧ್ಯವಾಗದಿದ್ದರೂ, ಕರೀಂ ಜನ್ನತ್, ಆಫ್ಘಾನ್ ಟಿ20 ತಂಡದಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಕರೀಂ ಜನ್ನತ್ ಇದುವರೆಗೂ ಆಫ್ಘಾನಿಸ್ತಾನ ತಂಡದ ಪರ ಏಕೈಕ ಟೆಸ್ಟ್ ಹಾಗೂ 49 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು 42 ಲಿಸ್ಟ್ 'ಎ' ಪಂದ್ಯಗಳನ್ನಾಡಿರುವ ಕರೀಂ ಜನ್ನತ್ 1664 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಒಮ್ಮೆ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
ಇನ್ನುಳಿದಂತೆ ಏಷ್ಯಾಕಪ್ ಟೂರ್ನಿಗೆ ಆಫ್ಘಾನ್ ತಂಡದ ಬಗ್ಗೆ ಹೇಳುವುದಾದರೇ, ಹುಸಮತುಲ್ಲಾ ಶಾಹಿದಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯು ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ನಡೆಯುವುದರಿಂದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಏಷ್ಯಾಕಪ್ ಟೂರ್ನಿಗೆ ಆಫ್ಘಾನಿಸ್ತಾನ ತಂಡದಲ್ಲಿ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹಮ್ಮದ್ ಹಾಗೂ ಶೌರಫುದ್ದೀನ್ ಅಶ್ರಫ್ ಹೀಗೆ ನಾಲ್ವರು ಸ್ಪಿನ್ನರ್‌ಗಳಿಗೆ ಮಣೆ ಹಾಕಲಾಗಿದೆ.
ಒಂದು ದಿನ ಮುಂಚಿತವಾಗಿಯೇ ಏಕದಿನ ವಿಶ್ವಕಪ್ ಉದ್ಘಾಟನಾ ಸಮಾರಂಭ..!
ಇತ್ತೀಚೆಗಷ್ಟೇ ಮುಕ್ತಾಯದ ಪಾಕಿಸ್ತಾನ ಎದುರಿನ ಸರಣಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದ ರೆಹಮನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್, ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಯಾವ ರೀತಿ ಬ್ಯಾಟಿಂಗ್ ಪ್ರದರ್ಶನ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಆಫ್ಘಾನಿಸ್ತಾನ ತಂಡವು ಸೆಪ್ಟೆಂಬರ್ 03ರಂದು ಬಾಂಗ್ಲಾದೇಶ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೆ ಲಾಹೋರ್‌ನ ಗಢಾಪಿ ಸ್ಟೇಡಿಯಂ ಆತಿಥ್ಯ ವಹಿಸಿದೆ.
ಏಷ್ಯಾಕಪ್ ಟೂರ್ನಿಗೆ ಆಫ್ಘಾನಿಸ್ತಾನ ತಂಡ ಹೀಗಿದೆ ನೋಡಿ:
ಹಸ್ಮತುಲ್ಲಾ ಶಾಹಿದಿ(ನಾಯಕ), ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ನಜೀಬುಲ್ಲಾ ಜದ್ರಾನ್, ರಶೀದ್ ಖಾನ್, ಇಕ್ರಾಂ ಅಲಿ ಖಿಲ್, ಕರೀಂ ಜನ್ನತ್, ಗುಲ್ಬದ್ದೀನ್ ನೈಬ್, ಮೊಹಮ್ಮದ್ ನಬಿ, ಮಜೀಬ್ ಉರ್ ರೆಹಮಾನ್, ಫಝಲ್‌ಹಕ್ ಫಾರೂಕಿ, ಶೌರಪುದ್ದೀನ್ ಅಶ್ರಫ್, ನೂರ್ ಅಹಮದ್, ಅಬ್ದುಲ್ ರೆಹಮಾನ್, ಮೊಹಮ್ಮದ್ ಸಲೀಂ.