ಬೆಂಗಳೂರು[ನ.04]: ಭಾರತ ತಂಡವು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಶರಣಾಗಿದೆ. ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್’ಗಳ ಸ್ಮರಣೀಯ ಗೆಲುವು ದಾಖಲಿಸಿದೆ.

ರಾಜಧಾನಿಯಲ್ಲಿ ನಡೆಯಲಿಲ್ಲ ಆಟ; ಬಾಂಗ್ಲಾದೇಶ ವಿರುದ್ದ ಸೋಲು ಕಂಡ ಭಾರತ!

ಪಂದ್ಯದ ಆರಂಭದಿಂದಲೂ ಭಾರತದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದ ಬಾಂಗ್ಲಾ ಪಡೆ, ಟೀಂ ಇಂಡಿಯಾವನ್ನು 148 ರನ್’ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ಆರಂಭಿಕ ಆಘಾತದ ಹೊರತಾಗಿಯೂ ಬಾಂಗ್ಲಾದೇಶ ರೋಚಕ ಗೆಲುವು ದಾಖಲಿಸಿತು.

ಫಾರ್ಮ್’ಗೆ ಬರಲು KL ರಾಹುಲ್’ಗೆ ಇನ್ನೆಷ್ಟು ಇನಿಂಗ್ಸ್ ಬೇಕು..?

ಪಂತ್ DRS ಎಡವಟ್ಟು: ಪಂದ್ಯದ 10ನೇ ಓವರ್ ಬೌಲಿಂಗ್ ಮಾಡಿದ ಯಜುವೇಂದ್ರ ಚಹಲ್, ಎರಡನೇ ಹಾಗೂ 5ನೇ ಎಸೆತ ಎದುರು ಮುಷ್ಫೀಕರ್ ರಹೀಮ್ ಎಲ್’ಬಿ ಆಗಿದ್ದರು, ಆದರೆ ಅಂಪೈರ್ ಔಟ್ ನೀಡಿರಲಿಲ್ಲ, ಇನ್ನು ವಿಕೆಟ್ ಕೀಪರ್ ರಿಷಭ್ ಪಂತ್ DRS ತೆಗೆದುಕೊಳ್ಳಲು ನಾಯಕ ರೋಹಿತ್’ಗೆ ಸಲಹೆ ನೀಡಲಿಲ್ಲ. ಆದರೆ ಚಹಲ್ ಎಸೆದ ಕೊನೆಯ ಎಸೆತವನ್ನು ಕ್ಯಾಚ್ ಎಂದು ಮನವಿ ಮಾಡಿದ್ದು ಮಾತ್ರವಲ್ಲದೇ, ಸುಖಾಸುಮ್ಮನೆ DRS ತೆಗೆದುಕೊಂಡರು. ಆದರೆ, ಆ ತೀರ್ಮಾನ ತಪ್ಪಾಗಿತ್ತು. ಆಗ ನಾಯಕ ಮೈದಾನದಲ್ಲೇ ಬೇಸರ ವ್ಯಕ್ತಪಡಿಸಿದ್ದರು. ಮುಷ್ಫೀಕರ್ ಅಜೇಯ 60 ರನ್ ಬಾರಿಸುವ ಮೂಲಕ ನೋಡನೋಡುತ್ತಿದ್ದಂತೆ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿಬಿಟ್ಟರು. ಇನ್ನು ಕ್ರಿಕೆಟ್ ಅಭಿಮಾನಿಗಳು ಧೋನಿ ಅನುಪಸ್ಥಿತಿಯನ್ನು ನೆನಪಿಸಿಕೊಂಡರು.

ರೋಹಿತ್ ಹೇಳಿದ್ದೇನು..?

ಪಂದ್ಯ ಮುಕ್ತಾಯದ ಬಳಿಕ ಈ ಬಗ್ಗೆ ಮಾತನಾಡಿದ ರೋಹಿತ್, ನಾವು ಸರಿಯಾದ ದಿಕ್ಕಿನಲ್ಲಿಲ್ಲದಿದ್ದರೆ, ವಿಕೆಟ್ ಕೀಪರ್ ಹಾಗೂ ಬೌಲರ್ ಮಾತನ್ನು ನಂಬಬೇಕಾಗುತ್ತದೆ. ರಿಷಭ್ ಇನ್ನು ಯುವ ಕ್ರಿಕೆಟಿಗ, ಆತ ಇನ್ನೂ 10-12 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಈ ವಿಚಾರಗಳನ್ನೆಲ್ಲಾ ಅರ್ಥ ಮಾಡಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾದೇಶ 1-0 ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಪಂದ್ಯವು ರಾಜ್’ಕೋಟ್’ನಲ್ಲಿ ನಡೆಯಲಿದ್ದು, ರೋಹಿತ್ ಪಡೆ ತಿರುಗೇಟು ನೀಡಲು ಎದುರು ನೋಡುತ್ತಿದೆ.