ರಾಜಧಾನಿಯಲ್ಲಿ ನಡೆಯಲಿಲ್ಲ ಆಟ; ಬಾಂಗ್ಲಾದೇಶ ವಿರುದ್ದ ಸೋಲು ಕಂಡ ಭಾರತ!
ಬಾಂಗ್ಲಾದೇಶ ಗೆಲುವಿನ ವಿಶ್ವಾಸದಲ್ಲಿದ್ದ ರೋಹಿತ್ ಸೈನ್ಯಕ್ಕೆ ಆಘಾತವಾಗಿದೆ. ಮೊದಲ ಟಿ20 ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಮುಶ್ಫಿಕರ್ ಅರ್ಧಶತಕದಿಂದ ಬಾಂಗ್ಲಾದೇಶ 7 ವಿಕೆಟ್ ಗೆಲುವು ಸಾಧಿಸಿ, ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ.
ನವದೆಹಲಿ(ನ.03): ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಶುಭಾರಂಭ ಮಾಡಲು ಟೀಂ ಇಂಡಿಯಾ ವಿಫಲವಾಗಿದೆ. ದೆಹಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಸೈನ್ಯ ಮುಗ್ಗರಿಸಿದೆ. ಭಾರತದ ಸುಲಭ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಇನ್ನು 3 ಎಸೆತ ಬಾಕಿ ಇರುವಂತೆ 7 ವಿಕೆಟ್ ಗೆಲುವು ಸಾಧಿಸಿತು. ಇದರೊಂದಿಗೆ 3 ಪಂದ್ಯದ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.
ಇದನ್ನೂ ಓದಿ: ಕೊಹ್ಲಿ ದಾಖಲೆ ಮುರಿದು ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ!
ಭಾರತ ನೀಡೀದ 149 ರನ್ ಸುಲಭ ಗುರಿ ಬೆನ್ನಟ್ಟಲು ಕಣಕ್ಕಿಳಿದ ಬಾಂಗ್ಲಾದೇಶ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಲಿಟ್ಟನ್ ದಾಸ್ ಕೇವಲ 7 ರನ್ ಸಿಡಿಸಿ ದೀಪಕ್ ಚಹಾರ್‌ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತ ಮೊದಲ ವಿಕೆಟ್ ಸಂಭ್ರಮ ಆಚರಿಸಿತು. ಆದರೆ ಮೊಹಮ್ಮದ್ ನೈಮ್ ಹಾಗೂ ಸೌಮ್ಯ ಸರ್ಕಾರ್ ಜೊತೆಯಾಟ ಭಾರತಕ್ಕೆ ಅಪಾಯದ ಸೂಚನೆ ನೀಡಿತು.
ಮೊಹಮ್ಮದ್ ನೈಮ್ 26 ರನ್ ಸಿಡಿಸಿ, ಯಜುವೇಂದ್ರ ಚೆಹಾಲ್‌ಗೆ ವಿಕೆಟ್ ಒಪ್ಪಿಸಿದರು. 2ನೇ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ ಅಪಾಯಕ್ಕೆ ಸಿಲುಕಲಿಲ್ಲ. ಸೌಮ್ಯ ಸರ್ಕಾರ್ ಹಾಗೂ ಮುಷ್ಫಿಕರ್ ರಹೀಮ್ ಜೊತೆಯಾಟದಿಂದ ಬಾಂಗ್ಲಾ ದಿಟ್ಟ ತಿರುಗೇಟು ನೀಡಿತು. ಈ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು.
ಸೌಮ್ಯ ಸರ್ಕಾರ್ 39 ರನ್ ಸಿಡಿಸಿ ಖಲೀಲ್ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಬಾಂಗ್ಲಾದೇಶ ಗೆಲುವಿಗೆ 18 ಎಸೆತದಲ್ಲಿ 35 ರನ್ ಅವಶ್ಯಕತೆ ಇತ್ತು. ಮುಶ್ಫಿಕರ್ ರಹೀಮ್ ಹಾಗೂ ಮೊಹಮ್ಮದುಲ್ಲಾ ಆಟಕ್ಕೆ ಭಾರತೀಯ ಬೌಲರ್‌ಗಳು ಸುಸ್ತಾದರು. ರಹೀಮ್ ಅಜೇಯ 60 ರನ್ ಸಿಡಿಸಿದರು. ಮೊಹಮ್ಮದುಲ್ಲಾ ಅಜೇಯ 15 ರನ್ ಸಿಡಿಸಿದರು. ಈ ಮೂಲಕ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.