ವೆಂಕಟೇಶ್‌ ಪ್ರಸಾದ್‌, ರಾಜೇಶ್‌ ಚೌವ್ಹಾಣ್‌ ,  ಎಲ್‌.ಶಿವರಾಮಕೃಷ್ಣನ್‌ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕ್ರಿಕೆಟಿಗರನ್ನು ಹಿಂದಿಕ್ಕಿ ಕನ್ನಡಿಗ ಸುನಿಲ್ ಜೋಶಿ  ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಆಯ್ಕೆಯಾಗಲು ಕಾರಣ ಬಹಿರಂಗವಾಗಿದೆ. 

ಮುಂಬೈ(ಮಾ.05): ಭಾರತದ ಮಾಜಿ ಸ್ಪಿನ್ನರ್‌, ಕರ್ನಾಟಕ ರಣಜಿ ತಂಡದ ಮಾಜಿ ನಾಯಕ ಸುನಿಲ್‌ ಜೋಶಿ, ಭಾರತ ಕ್ರಿಕೆಟ್‌ ತಂಡದ ಪ್ರಧಾನ ಆಯ್ಕೆಗಾರರಾಗಿ ನೇಮಕಗೊಂಡಿದ್ದಾರೆ. ಬುಧವಾರ ಮದನ್‌ ಲಾಲ್‌, ಆರ್‌.ಪಿ.ಸಿಂಗ್‌ ಹಾಗೂ ಸುಲಕ್ಷಣಾ ನಾಯ್‌್ಕ ಅವರನ್ನೊಳಗೊಂಡ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ನಡೆಸಿದ ಸಂದರ್ಶನದ ಬಳಿಕ, ಜೋಶಿ ನೇಮಕದ ವಿಷಯವನ್ನು ಕಾರ್ಯದರ್ಶಿ ಜಯ್‌ ಶಾ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.

ಇದನ್ನೂ ಓದಿ: ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌: ಸೆಮೀಸ್ ಆಡದೇ ಭಾರತ ವನಿತೆಯರು ಫೈನಲ್‌ಗೆ ಲಗ್ಗೆ

ಕನ್ನಡಿಗ ಸುನಿಲ್ ಜೋಶಿ ಆಯ್ಕೆಗೆ ಹಲವು ಕಾರಣಗಳಿವೆ. ಮುಖ್ಯ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. 

  • ದೇಸಿ, ಅಂತಾರಾಷ್ಟ್ರೀಯ, ಐಪಿಎಲ್‌ನಲ್ಲಿ ಆಡಿದ ಅನುಭವವಿದೆ.
  • ಅಸ್ಸಾಂ, ಹೈದರಾಬಾದ್‌, ಜಮ್ಮು-ಕಾಶ್ಮೀರ, ಉ.ಪ್ರದೇಶ ತಂಡಗಳ ಕೋಚ್‌ ಆಗಿದ್ದರು.
  • 2015ರಲ್ಲಿ ಒಮಾನ್‌, 2019ರಲ್ಲಿ ಅಮೆರಿಕ ತಂಡದ ಸ್ಪಿನ್‌ ಕೋಚ್‌ ಆಗಿ ಕೆಲಸ.
  •  2017ರಲ್ಲಿ ಬಾಂಗ್ಲಾ ತಂಡದ ಸ್ಪಿನ್‌ ಬೌಲಿಂಗ್‌ ಸಲಹೆಗಾರರಾಗಿ ಕಾರ್ಯನಿರ್ವಹಣೆ
  • ವೀಕ್ಷಕ ವಿವರಣೆಗಾರರಾಗಿಯೂ ಅನುಭವ

4 ವರ್ಷಗಳ ಅವಧಿ ಮುಗಿದ ನಂತರವೂ ಗುತ್ತಿಗೆ ವಿಸ್ತರಣೆ ಆದ ಕಾರಣ ಎಂ.ಎಸ್‌.ಕೆ.ಪ್ರಸಾದ್‌ (ದಕ್ಷಿಣ ವಲಯ), ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಸ್ಥಾನವನ್ನು ಜೋಶಿ ತುಂಬಲಿದ್ದಾರೆ. ಜೋಶಿ ನೇತೃತ್ವದ ಆಯ್ಕೆ ಸಮಿತಿಯ ಕಾರ್ಯಾವಧಿ ಒಂದು ವರ್ಷ ಆಗಿದ್ದು, ಸಮಿತಿಯ ಕಾರ್ಯವೈಖರಿ ನೋಡಿಕೊಂಡು ಗುತ್ತಿಗೆ ವಿಸ್ತರಣೆ ಮಾಡುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಜಯ್‌ ಶಾ ತಿಳಿಸಿದ್ದಾರೆ.

IPL ಟೂರ್ನಿಗೆ ತಯಾರಿ ಆರಂಭಿಸಿದ 8 ತಂಡಕ್ಕೆ ಶಾಕ್, BCCI ವಿರುದ್ದ ಅಸಮಾಧಾನ!.

ಕೇಂದ್ರ ವಲಯದ ಅಭ್ಯರ್ಥಿಯಾಗಿದ್ದ ಮಾಜಿ ವೇಗಿ ಹರ್ವಿಂದರ್‌ ಸಿಂಗ್‌ರನ್ನು ಐವರು ಸದಸ್ಯರ ಆಯ್ಕೆ ಸಮಿತಿಗೆ ನೇಮಕ ಮಾಡಲಾಯಿತು. ಗಗನ್‌ ಖೋಡಾರಿಂದ ತೆರವಾಗಿದ್ದ ಸ್ಥಾನವನ್ನು ಹರ್ವಿಂದರ್‌ ತುಂಬಲಿದ್ದಾರೆ. ಈ ಇಬ್ಬರು ಈಗಾಗಲೇ ಆಯ್ಕೆ ಸಮಿತಿಯಲ್ಲಿರುವ ಜತಿನ್‌ ಪರಂಜ್ಪೆ (ಪಶ್ಚಿಮ ವಲಯ), ದೇವಾಂಗ್‌ ಗಾಂಧಿ (ಪೂರ್ವ ವಲಯ) ಹಾಗೂ ಸರಣ್‌ದೀಪ್‌ ಸಿಂಗ್‌ (ಉತ್ತರ ವಲಯ) ಜತೆ ಕಾರ್ಯನಿರ್ವಹಿಸಲಿದ್ದಾರೆ.

‘ಆಯ್ಕೆ ಸಮಿತಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಜೋಶಿ ಹಾಗೂ ಹರ್ವಿಂದರ್‌ರ ನಿಲುವುಗಳು ಸ್ಪಷ್ಟವಿದೆ ಎಂದು ಎನಿಸಿತು’ ಎಂದು ಸಿಎಸಿ ಮುಖ್ಯಸ್ಥ ಮದನ್‌ ಲಾಲ್‌ ಪತ್ರಿಕ್ರಿಯಿಸಿದ್ದಾರೆ. ಜೋಶಿ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿರುವ ಲಾಲ್‌, ‘ಅವರ ನೇರನುಡಿ ನಮಗೆ ಹಿಡಿಸಿತು. ಅವರಿಗೆ ಅನುಭವೂ ಇದೆ’ ಎಂದಿದ್ದಾರೆ.

ಪತ್ರಕರ್ತನ ಮೇಲೆ ಕಿಡಿಕಾರಿದ ವಿರಾಟ್ ಕೊಹ್ಲಿ..!.

ಸಿಎಸಿ ಮಂಗಳವಾರ ಐವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿತ್ತು. ಜೋಶಿ, ಹರ್ವಿಂದರ್‌, ವೆಂಕಟೇಶ್‌ ಪ್ರಸಾದ್‌, ರಾಜೇಶ್‌ ಚೌವ್ಹಾಣ್‌ ಹಾಗೂ ಎಲ್‌.ಶಿವರಾಮಕೃಷ್ಣನ್‌, ಆಯ್ಕೆಗಾರರ ಸ್ಥಾನಗಳಿಗೆ ಪೈಪೋಟಿಯಲ್ಲಿದ್ದರು. ಒಟ್ಟು 40 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಭಾರತದ ಮಾಜಿ ಆಟಗಾರರಾದ ಅಜಿತ್‌ ಅಗರ್ಕರ್‌ ಹಾಗೂ ನಯಾನ್‌ ಮೋಂಗ್ಯ ಸಹ ಇದ್ದರು. ಆದರೆ ಅವರಿಬ್ಬರನ್ನು ಅಂತಿಮ ಪಟ್ಟಿಗೆ ಪರಿಗಣಿಸಲಾಗಿರಲಿಲ್ಲ.

ರಾಷ್ಟ್ರೀಯ ಆಯ್ಕೆಗಾರನಾದ ಕರ್ನಾಟಕದ 3ನೇ ಕ್ರಿಕೆಟಿಗ
ಭಾರತ ತಂಡದ ಆಯ್ಕೆಗಾರರಾಗಿ ಕಾರ್ಯನಿರ್ವಹಿಸಲಿರುವ ಕರ್ನಾಟಕದ ಮೂರನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಸುನಿಲ್‌ ಜೋಶಿ ಪಾತ್ರರಾಗಲಿದ್ದಾರೆ. ಈ ಮೊದಲು ದಿಗ್ಗಜ ಬ್ಯಾಟ್ಸ್‌ಮನ್‌ ಜಿ.ಆರ್‌.ವಿಶ್ವನಾಥ್‌ ಹಾಗೂ ಬ್ರಿಜೇಶ್‌ ಪಟೇಲ್‌ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದರು.

ಕರ್ನಾಟಕ ತಂಡದ ಯಶಸ್ವಿ ಬೌಲರ್‌!
1992-93ರಿಂದ 2010-11ರ ವರೆಗೂ ಕರ್ನಾಟಕ ಪರ ರಣಜಿ ಟ್ರೋಫಿಯಲ್ಲಿ 117 ಪಂದ್ಯಗಳನ್ನು ಆಡಿದ್ದ ಸುನಿಲ್‌ ಜೋಶಿ, 479 ವಿಕೆಟ್‌ ಕಬಳಿಸಿದ್ದರು. ಕರ್ನಾಟಕ ಪರ ಅತಿಹೆಚ್ಚು ವಿಕೆಟ್‌ಗಳನ್ನು ಕಿತ್ತ ಬೌಲರ್‌ಗಳ ಪೈಕಿ ಜೋಶಿ ಮೊದಲ ಸ್ಥಾನದಲ್ಲಿದ್ದಾರೆ. 1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜೋಶಿ, ಭಾರತ ಪರ 15 ಟೆಸ್ಟ್‌, 69 ಏಕದಿನ ಪಂದ್ಯಗಳನ್ನು ಆಡಿದ್ದರು. ದ.ಆಫ್ರಿಕಾ ವಿರುದ್ಧ 1999ರಲ್ಲಿ ನೈರೋಬಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ 6 ರನ್‌ಗೆ 5 ವಿಕೆಟ್‌ ಕಬಳಿಸಿದ್ದು, ಜೋಶಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿನ ಶ್ರೇಷ್ಠ ಸಾಧನೆ.