ಐಪಿಎಲ್ ೧೮ನೇ ಆವೃತ್ತಿ ಇಂದು ಬೆಂಗಳೂರಿನಲ್ಲಿ ಪುನರಾರಂಭವಾಗಲಿದ್ದು, ಆರ್‌ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗಲಿವೆ. ಪ್ಲೇಆಫ್ ಹೊಸ್ತಿಲಲ್ಲಿರುವ ಆರ್‌ಸಿಬಿಗೆ ಗೆಲುವು ಮುಖ್ಯವಾದರೆ, ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆದರೆ, ಮಳೆ ಭೀತಿ ಪಂದ್ಯದ ಮೇಲೆ ಸಂಚಕಾರ ತಂದೊಡ್ಡಿದೆ. ಮಳೆ ಬಂದರೆ ಉಭಯ ತಂಡಗಳು ಅಂಕ ಹಂಚಿಕೊಳ್ಳಲಿವೆ.

ಬೆಂಗಳೂರು: ತಾತ್ಕಾಲಿಕವಾಗಿ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇಂದಿನಿಂದ ಪುನರಾರಂಭವಾಗಲಿದೆ. ಇಂದು ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಹಲವು ಕಾರಣಗಳಿಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಆದರೆ ಇವತ್ತಿನ ಮ್ಯಾಚ್ ನಡಿಯೋದೇ ಡೌಟ್ ಎನ್ನುವಂತಹ ಮಾತುಗಳು ಕೇಳಿ ಬರಲಾರಂಭಿಸಿವೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್‌ ಹೊಸ್ತಿಲಲ್ಲಿದೆ. ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಆಡಿದ 11 ಪಂದ್ಯಗಳ ಪೈಕಿ 8 ಗೆಲುವು ಹಾಗೂ ಮೂರು ಸೋಲು ಸಹಿತ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡದ ಇನ್ನೊಂದು ಗೆಲುವು ಅಧಿಕೃತವಾಗಿ ಬೆಂಗಳೂರು ತಂಡವನ್ನು ಪ್ಲೇ ಆಫ್‌ಗೇರುವಂತೆ ಮಾಡಲಿದೆ.

ಇನ್ನೊಂದೆಡೆ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅಸ್ಥಿರ ಆಟದ ಮೂಲಕ ನಿರಾಸೆ ಮೂಡಿಸಿದ್ದು, ಇದೀಗ ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ಸಜ್ಜಾಗಿದೆ. ಕೆಕೆಆರ್ ತಂಡವು ಸದ್ಯ 12 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 6 ಸೋಲು ಮತ್ತು ಒಂದು ರದ್ದಾದ ಪಂದ್ಯ ಸೇರಿದಂತೆ 11 ಅಂಕಗಳಿಸಿದ್ದು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕೆಕೆಆರ್ ತಂಡದ ಇನ್ನೊಂದು ಸೋಲು ಹಾಲಿ ಚಾಂಪಿಯನ್ ಕೆಕೆಆರ್ ಪ್ಲೇ ಆಫ್‌ ಕನಸ್ಸನ್ನು ನುಚ್ಚುನೂರು ಮಾಡಲಿದೆ. ಹೀಗಾಗಿ ಕೆಕೆಆರ್ ತಂಡವು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ.

ಇಂದಿನ ಪಂದ್ಯಕ್ಕೆ ಮಳೆ ಭೀತಿ:
ಆರ್‌ಸಿಬಿ ಹಾಗೂ ಕೆಕೆಆರ್ ಹೀಗೆ ಎರಡು ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿರುವ ಈ ಪಂದ್ಯಕ್ಕೆ ಮಳೆರಾಯನ ಭೀತಿ ಎದುರಾಗಿದ್ದು, ಇಂದಿನ ಪಂದ್ಯ ನಡೆಯೋದೇ ಡೌಟ್ ಎನ್ನುವಂತಹ ಮಾತುಗಳು ಕೇಳಿ ಬರಲಾರಂಭಿಸಿವೆ. ಯಾಕೆಂದರೆ ಇಂದು ಸಂಜೆ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುವ ಭೀತಿ ಎದುರಾಗಿದೆ.

ಹೌದು, ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯವು ಇಂದು ಸಂಜೆ 7 ಗಂಟೆಯಿಂದ ಆರಂಭವಾಗಲಿದೆ. ಆದರೆ ಇಂದು ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ 71% ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇನ್ನು 8 ಗಂಟೆ ಸುಮಾರಿಗೆ 69%, 9 ಗಂಟೆ ಸುಮಾರಿಗೆ 49% ಹಾಗೂ 10 ಗಂಟೆ ಸುಮಾರಿಗೆ 34% ಮಳೆಯಾಗಲಿದೆ ಎಂದು ಹವಾಮಾನ ವರದಿಯಾಗಿದೆ.

ಬೆಂಗಳೂರಿನಲ್ಲಿ ಅತ್ಯುತ್ತಮ ಸಬ್‌ಏರ್ ಸಿಸ್ಟಂ ವ್ಯವಸ್ಥೆಯಿದ್ದು, ಮಳೆ ನಿಂತ ಕೇವಲ 20-30 ನಿಮಿಷದೊಳಗಾಗಿ ಪಂದ್ಯ ಆರಂಭಿಸಬಹುದಾಗಿದೆ. ಆದರೆ ನಿರಂತರವಾಗಿ ಮಳೆ ಸುರಿದರೆ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಈ ಮೊದಲು ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್‌ ನಡುವಿನ ಪಂದ್ಯಕ್ಕೂ ಮಳೆರಾಯ ಅಡ್ಡಿಪಡಿಸಿದ್ದ. ಆ ಬಳಿಕ ಮಳೆ ನಿಂತ ಮೇಲೆ 14 ಓವರ್‌ಗಳ ಪಂದ್ಯವನ್ನು ಆಡಿಸಲಾಗಿತ್ತು. ಆ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ತಂಡವು 5 ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತ್ತು. 

ಒಂದು ವೇಳೆ ಇಂದಿನ ಪಂದ್ಯಕ್ಕೆ ಮಳೆರಾಯ ಅಡ್ಡಿ ಪಡಿಸಿ ಪಂದ್ಯ ರದ್ದಾದರೇ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿವೆ. ಆಗ ಆರ್‌ಸಿಬಿ ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಗಲಿದೆ. ಅದೇ ರೀತಿ ಕೆಕೆಆರ್ ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬೀಳಲಿದೆ.