ಕೋಲ್ಕತಾ(ಡಿ.03): ಐಪಿಎಲ್ ಟೂರ್ನಿಯ ಹರಾಜಿಗೆ ಫ್ರಾಂಚೈಸಿಗಳು ತಲೆಕೆಡಿಸಿಕೊಂಡಿದೆ. ಡಿಸೆಂಬರ್ 19 ರಂದು ಕೋಲ್ಕತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸಲು 8 ಫ್ರಾಂಚೈಸಿಗಳು ಸಜ್ಜಾಗಿದೆ. ಇದರ ಬೆನ್ನಲ್ಲೇ ಐಪಿಎಲ್ ಹರಾಜಿನಿಂದ ಕೆಲ ಸ್ಟಾರ್ ಆಟಗಾರರು ಹಿಂದೆ ಸರಿದಿದ್ದಾರೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: RCB ತಂಡಕ್ಕೆ ಹೊಸ ಆರಂಭಿಕ; ಕೊಹ್ಲಿ ಜೊತೆ ಶುರುವಾಗಲಿದೆ ಕನ್ನಡಿಗನ ಆರ್ಭಟ!

2015ರಲ್ಲಿ ಆರ್‌ಸಿಬಿ ಪರ ಆಡಿದ್ದ ಮಿಚೆಲ್ ಸ್ಟಾರ್ಕ್ ಬಳಿಕ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. 2018ರಲ್ಲಿ 9.4 ಕೋಟಿ ರೂಪಾಯಿ ನೀಡಿ ಮಿಚೆಲ್ ಸ್ಟಾರ್ಕ್‌ನ್ನು ಕೆಕೆಆರ್ ತಂಡ ಖರೀದಿಸಿತ್ತು. ಆದರೆ ಇಂಜುರಿ ಕಾರಣದಿಂದ ಸ್ಟಾರ್ಕ್ ಒಂದು ಪಂದ್ಯಕ್ಕೂ ಲಭ್ಯವಿರಲಿಲ್ಲ. ಇದೀಗ 2020ರ ಐಪಿಎಲ್ ಟೂರ್ನಿಯಿಂದಲೂ ಮಿಚೆಲ್ ಸ್ಟಾರ್ಕ್ ಹೊರಗುಳಿಯಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: IPL 2020 ಹರಾಜಿಗೂ ಮುನ್ನ RCB ತಂಡ ಹೀಗಿದೆ...

971 ಆಟಗಾರರು ಐಪಿಎಲ್ ಹರಾಜಿನಲ್ಲಿದ್ದಾರೆ. ಇದರಲ್ಲಿ ಮಿಚೆಲ್ ಸ್ಟಾರ್ಕ್, ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ ಸೇರಿದಂತೆ ಕೆಲ ಆಟಗಾರರು ಹಿಂದೆ ಸರಿದಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್, ಕ್ರಿಸ್ ಲಿನ್ ಸೇರಿದಂತೆ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಬಾರಿಯ ಐಪಿಎಲ್ ಹರಾಜಿನಲ್ಲಿರುವ ಪ್ರಮುಖ ಆಟಗಾರರು. ಮ್ಯಾಕ್ಸ್‌ವೆಲ್, ಕ್ರಿಸ್ ಲಿನ್ ಮೂಲ ಬೆಲೆ 2 ಕೋಟಿ ರೂಪಾಯಿ.

2 ಕೋಟಿ ಮೂಲ ಬೆಲೆಯ ಆಟಗಾರರ ಪೈಕಿ, ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಆಲ್ರೌಂಡರ್ ಮಿಚೆಲ್ ಮಾರ್ಶ್, ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್, ಶ್ರೀಲಂಕಾ ಬ್ಯಾಟ್ಸ್‌ಮನ್ ಎಂಜಲೋ ಮ್ಯಾಥ್ಯೂಸ್ ಸೇರಿದಂತೆ ಕೆಲ ಆಟಗಾರರು ಪ್ರಮುಖವಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.