ಆರ್‌ಸಿಬಿಗೆ ತವರಿನ ಪಂದ್ಯಗಳು ನಿದ್ದೆ ಬಾರದ ರಾತ್ರಿಗಳಾಗುತ್ತಿದೆ. ತವರಿನ ಕಳೆದೆರಡು ಪಂದ್ಯ ಸೋತಿರುವ ಆರ್‌ಸಿಬಿ ಈ ಬಾರಿ ಅತೀವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿದೆ. ಆದರೆ 6 ವಿಕೆಟ್ ಕಳೆದುಕೊಂಡು ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ.
ಬೆಂಗಳೂರು(ಏ.18) ಯಾವ ಗ್ರೌಂಡ್ ಆದರೂ ಸರಿ ಆರ್‌ಸಿಬಿ ಅಬ್ಬರಿಸಿ ಬೊಬ್ಬಿರಿಯುತ್ತೆ. ಆದರೆ 2025ರ ಐಪಿಎಲ್ ಟೂರ್ನಿಯಲ್ಲಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣ ಮಾತ್ರ ಭೀತಿ ಹೆಚ್ಚಿಸುತ್ತಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಗೆ ಮೊದಲು ಮಳೆರಾಯ ಅಡ್ಡಿಪಡಸಿದ್ದ, ಬಳಿಕ ಟಾಸ್ ಸೋತು ಹಿನ್ನಡೆ ಅನುಭವಿಸಿತ್ತು. ಇದೀಗ ಬ್ಯಾಟಿಂಗ್ ಕೂಡ ಕೈಕೊಟ್ಟಿದೆ. ಓವರ್ 14 ಮಾತ್ರ, ಆದರೆ ಅದಕ್ಕಿಂತ ಮೊದಲೇ ಆರ್‌ಸಿಬಿ ಬ್ಯಾಟಿಂಗ್ ಅಂತ್ಯಗೊಳ್ಳುವ ಸೂಚನೆಗಳು ನೀಡಿದೆ. 8ನೇ ಓವರ್‌ಗೆ ಆರ್‌ಸಿಬಿ 6 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿದೆ. 41 ರನ್‌ಗೆ ಪ್ರಮುಖ 6 ವಿಕೆಟ್ ಉರುಳಿ ಬಿದ್ದಿದೆ.
ಕಳೆದುಕೊಂಡ 6 ವಿಕೆಟ್ ಪೈಕಿ ನಾಯಕ ರಜತ್ ಪಾಟಿದಾರ್ ಸಿಡಿಸಿದ 23 ರನ್ ಗರಿಷ್ಠ. ಇನ್ನುಳಿದವರು ಒಂದಂಕೆಯಲ್ಲೇ ಇದ್ದಾರೆ. ಫಿಲಿಪ್ ಸಾಲ್ಟ್ 4, ವಿರಾಟ್ ಕೊಹ್ಲಿ 1, ರಜತ್ ಪಾಟೀದಾರ್ 23, ಲಿಯಾಮ್ ಲಿವಿಂಗ್‌ಸ್ಟೋನ್ 4, ಜಿತೇಶ್ ಶರ್ಮಾ 2, ಕ್ರುನಾಲ್ ಪಾಂಡ್ಯ 1. ಹೀಗೆ ಆರ್‌ಸಿಬಿ ಬ್ಯಾಟಿಂಗ್ ಸಾಗಿದೆ.
ಮಳೆಯಿಂದ 14 ಓವರ್ ಪಂದ್ಯ, ತವರಿನಲ್ಲಿ ಮತ್ತೆ ಟಾಸ್ ಸೋತ ಆರ್‌ಸಿಬಿ
ಆರ್‌ಸಿಬಿ ತವರಿನಲ್ಲಿ ತನ್ನ ಅದೃಷ್ಠ ಬದಲಾಯಿಸುವ ಖಡಕ್ ನಿರ್ಧಾರದೊಂದಿಗೆ ಹೋರಾಟಕ್ಕಿಳಿದಿತ್ತು. ಆದರೆ ತವರಿಗೆ ಬರುವಾಗ ಆರ್‌ಸಿಬಿ ಲಕ್ ಬದಲಾಗುತ್ತಿದೆ. ಎಲ್ಲವೂ ವಿರುದ್ಧವಾಗುತ್ತಿದೆ. ಮಳೆ, ಟಾಸ್, ಬ್ಯಾಟಿಂಗ್ ಎಲ್ಲವೂ ಕೈಕೊಡುತ್ತಿದೆ. ಅಲ್ಪಮೊತ್ತಕ್ಕೆ ಆಲೌಟ್ ಆಗುವ ಲಕ್ಷಣಗಳು ಗೋಚರಿಸುತ್ತಿದೆ. 8 ಓವರ್ ಮುಕ್ತಾಯಗೊಂಡರು ಆರ್‌ಸಿಬಿ 42 ರನ್ ಗಡಿ ದಾಟಿಲ್ಲ.
ಆರ್‌ಸಿಬಿ ಅಂಕಪಟ್ಟಿ
ಐಪಿಎಲ್ 2025ರ ಅಂಕಪಟ್ಟಿಯಲ್ಲಿ ಆರ್‌ಸಿಬಿ 3ನೇ ಸ್ಥಾನದಲ್ಲಿದೆ. ತವರಿನ 2 ಪಂದ್ಯ ಸೋತಿರಬಹುದು. ಆದರೆ ತವರಿನಾಚೆಗೆ ಆಡಿದ ನಾಲ್ಕೂ ಪಂದ್ಯ ಗೆದ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ಕೂಡ 4 ಪಂದ್ಯಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ವಿರುದ್ಧ ಗೆದ್ದರೆ ಪಂಜಾಬ್ ಕಿಂಗ್ಸ್ ಬಡ್ತಿ ಸಿಗಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರಾಜಮಾನವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ 6ರಲ್ಲಿ 5 ಪಂದ್ಯ ಗೆದ್ದುಕೊಂಡಿದೆ. 2ನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ 4 ಪಂದ್ಯ ಗೆದ್ದುಕೊಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಚೇಸಿಂಗ್ ಸುಲಭವಾಗಿದ್ದು, ಇದರ ಲಾಭ ಹಾಗೂ ಕಡಿಮೆ ಸ್ಕೋರ್ ಲಾಭವನ್ನು ಪಂಜಾಬ್ ಕಿಂಗ್ಸ್ ಪಡೆದುಕೊಳ್ಳಲಿದೆ. ಹೀಗಾಗಿ ತವರಿನಲ್ಲಿ ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲಿನ ಭೀತಿ ಕಾಡುತ್ತಿದೆ.
