ಮುಗಿಯಿತಾ ಟೀಂ ಇಂಡಿಯಾ ಈ ಸ್ಟಾರ್ ಆಟಗಾರನ ಕ್ರಿಕೆಟ್ ವೃತ್ತಿಬದುಕು..?
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಇದೀಗ ಏಕದಿನ ಕ್ರಿಕೆಟ್ ಬದುಕು ಅಂತ್ಯವಾಯಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ: ಭಾರತದ ತಾರಾ ಆಲ್ರೌಂಡ್ ರವೀಂದ್ರ ಜಡೇಜಾ ಮುಂಬರುವ ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗಿಲ್ಲ. ಇದರೊಂದಿಗೆ ಅವರ ಏಕದಿನ ಕ್ರಿಕೆಟ್ ಬದುಕು ಬಹುತೇಕ ಮುಕ್ತಾಯಗೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಬದಲಾಗಿ ಅಕ್ಷರ್ ಪಟೇಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಜಡೇಜಾ 197 ಏಕದಿನ ಪಂದ್ಯಗಳನ್ನಾಡಿದ್ದು, 2756 ರನ್ ಕಲೆಹಾಕಿದ್ದಾರೆ. 220 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಏಕದಿನದಲ್ಲಿ ಅವರ ದಾಖಲೆ ಉತ್ತಮವಾಗಿದ್ದರೂ 2025ರ ಚಾಂಪಿಯನ್ಸ್ ಟ್ರೋಫಿ, 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಅಕ್ಷರ್‌ಗೆ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಹಾರ್ದಿಕ್ ಪಾಂಡ್ಯಗೆ ಟಿ20 ನಾಯಕತ್ವ ಕೈ ತಪ್ಪಿದ್ದೇಕೆ? ಸೂರ್ಯಕುಮಾರ್ ಕ್ಯಾಪ್ಟನ್ ಆಗಿದ್ದು ಹೇಗೆ?
ಜೊತೆಗೆ ವಾಷಿಂಗ್ಟನ್ ಸುಂದರ್‌ರನ್ನು ಕೂಡಾ 2ನೇ ಆಯ್ಕೆಯ ಸ್ಪಿನ್ ಆಲ್ರೌಂಡರ್ ಆಗಿ ಬೆಳೆಸಲು ಬಿಸಿಸಿಐ ಚಿಂತನೆ ನಡೆಸುತ್ತಿರುವ ಕಾರಣ ಜಡೇಜಾರ ಏಕದಿನ ಬದುಕು ಅಂತ್ಯವಾಗಿದೆ ಎಂದೇ ಹೇಳಲಾಗುತ್ತಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾರನ್ನು ಬಿಸಿಸಿಐ ಮುಂದುವರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 35 ವರ್ಷದ ಜಡೇಜಾ ಟಿ20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದರು.
ಮಾತು ಕೇಳದ ಇಶಾನ್ ಕಿಶನ್‌ಗೆ ಬಿಸಿಸಿಐ ಚಾಟಿ!
ನವದೆಹಲಿ: ರಾಷ್ಟ್ರೀಯ ತಂಡದಿಂದ ಹೊರಗಿದ್ದಾಗ ದೇಸಿ ಕ್ರಿಕೆಟ್‌ನಲ್ಲಿ ಆಡದೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಇಶಾನ್ ಕಿಶನ್ ವಿಚಾರದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಮತ್ತೆ ಕಠಿಣ ನಿಲುವು ತಾಳಿದೆ. ತನ್ನ ಮಾತು ಕೇಳದ ಕಾರಣಕ್ಕೆ ಇಶಾನ್‌ರನ್ನು ಜಿಂಬಾಬ್ವೆ, ಶ್ರೀಲಂಕಾ ವಿರುದ್ಧ ಸರಣಿಗೂ ಆಯ್ಕೆ ಮಾಡಲು ಆಯ್ಕೆ ಸಮಿತಿ ಮನಸ್ಸು ಮಾಡಿಲ್ಲ. ಈ ಮೂಲಕ ‘ದೇಸಿ ಕ್ರಿಕೆಟ್ ಆಡಿ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ’ ಎಂಬ ಸಂದೇಶ ರವಾನಿಸಿದೆ.
ಇಶಾನ್ ಕಳೆದ ವರ್ಷ ನವೆಂಬರ್‌ನಲ್ಲಿ ಭಾರತ ಪರ ಕೊನೆ ಟಿ20 ಪಂದ್ಯವಾಡಿದ್ದರು. ಬಳಿಕ ತಂಡದಿಂದ ಹೊರಬಿದ್ದಿರುವ ಇಶಾನ್, ದೇಸಿ ಕ್ರಿಕೆಟ್‌ನಲ್ಲಿ ಆಡಿರಲಿಲ್ಲ. ದೇಸಿ ಕ್ರಿಕೆಟ್ ಆಡುವಂತೆ ಬಿಸಿಸಿಐ ಸೂಚಿಸಿದ್ದರೂ, ಅದನ್ನು ಇಶಾನ್ ಕಡೆಗಣಿಸಿದ್ದರು. ಹೀಗಾಗಿ ಯಾವುದೇ ಸರಣಿಗೂ ಅವರನ್ನು ಆಯ್ಕೆ ಮಾಡಿಲ್ಲ. ಇದರೊಂದಿಗೆ ಇಶಾನ್ ಇನ್ನು ಭಾರತ ತಂಡಕ್ಕೆ ವಾಪಸಾಗಬೇಕಿದ್ದರೆ ದೇಸಿ ಟೂರ್ನಿಗಳಲ್ಲಿ ಆಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಬಾಲಿವುಡ್ ಬಿಗ್ ಸ್ಟಾರ್ಸ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ..! ಕಿಂಗ್ ಕೊಹ್ಲಿಗೆ ಮತ್ತೊಂದು ಗರಿ
ಭಾರತ ತಂಡದಲ್ಲಿ ಈಗಾಗಲೇ ರಿಷಭ್ ಪಂತ್, ಕೆ.ಎಲ್.ರಾಹುಲ್ ಜೊತೆ ಸಂಜು ಸ್ಯಾಮ್ಸನ್ ಕೂಡಾ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಕಾರಣ ಇಶಾನ್ ಕಮ್‌ಬ್ಯಾಕ್ ಹಾದಿ ಕೂಡಾ ಕಠಿಣವಾಗಿದೆ.