ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್‌ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಫಿನ್‌ ಆ್ಯಲೆನ್‌ ಕೇವಲ 33 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿ, ಟಿ20 ವಿಶ್ವಕಪ್‌ನ ಅತಿ ವೇಗದ ಶತಕದ ದಾಖಲೆ ಬರೆದು ತಂಡದ ಗೆಲುವಿನ ರೂವಾರಿಯಾದರು.

ಕೋಲ್ಕತಾ: ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ 2ನೇ ಬಾರಿ ಫೈನಲ್‌ಗೇರಿದೆ. ಪ್ರಶಸ್ತಿ ಸನಿಹದಲ್ಲಿ ಎಡವಿ ಬೀಳುವ ಮೂಲಕ ‘ಚೋಕರ್ಸ್‌’ ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡದ ಸತತ 2ನೇ ಫೈನಲ್‌ ಕನಸು ಭಗ್ನಗೊಂಡಿತು. ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ದ.ಆಫ್ರಿಕಾ ವಿರುದ್ಧ ಕಿವೀಸ್‌ 9 ವಿಕೆಟ್‌ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ದ.ಆಫ್ರಿಕಾ ಆರಂಭಿಕ ಕುಸಿತದ ಹೊರತಾಗಿಯೂ 8 ವಿಕೆಟ್‌ಗೆ 169 ರನ್‌ ಗಳಿಸಿತು. 12ಕ್ಕೆ 2, 77ಕ್ಕೆ 5 ವಿಕೆಟ್‌ ಬಿದ್ದರೂ, ಬ್ರೆವಿಸ್‌ 34, ಸ್ಟಬ್ಸ್‌ 29, ಮಾರ್ಕೊ ಯಾನ್ಸನ್‌ 30 ಎಸೆತಕ್ಕೆ ಔಟಾಗದೆ 55 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.

ಹರಿಣಗಳೆದುರು ಸ್ಪೋಟಕ ಆರಂಭ ಪಡೆದ ಕಿವೀಸ್

ಆದರೆ ದ.ಆಫ್ರಿಕಾ ಕಷ್ಟಪಟ್ಟು ಸೇರಿಸಿದ ಮೊತ್ತವನ್ನು ಕಿವೀಸ್‌ ಸಲೀಸಾಗಿ ಬೆನ್ನತ್ತಿ ಗೆದ್ದಿತು. ಆರಂಭಿಕರಾದ ಫಿನ್‌ ಆ್ಯಲೆನ್‌-ಟಿಮ್‌ ಸೀಫರ್ಟ್‌ ಸ್ಫೋಟಕ ಆಟವಾಡಿ 9.1 ಓವರ್‌ಗಳಲ್ಲಿ 117 ರನ್‌ ಜೊತೆಯಾಟವಾಡಿದರು. ಸೀಫರ್ಟ್‌ 33 ಎಸೆತಕ್ಕೆ 58 ರನ್‌ ಗಳಿಸಿ ಔಟಾದರೂ, ಆ್ಯಲೆನ್‌ 33 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 100 ರನ್‌ ಪೂರ್ಣಗೊಳಿಸಿ ತಂಡವನ್ನು ಗೆಲ್ಲಿಸಿದರು.

ಭಾನುವಾರ ಅಹಮದಾಬಾದ್‌ನಲ್ಲಿ ಫೈನಲ್‌ ನಡೆಯಲಿದ್ದು, ಕಿವೀಸ್‌ ತಂಡ ಭಾರತ ಅಥವಾ ಇಂಗ್ಲೆಂಡ್‌ ವಿರುದ್ಧ ಆಡಲಿದೆ.

ಸ್ಕೋರ್: ದ.ಆಫ್ರಿಕಾ 20 ಓವರಲ್ಲಿ 169/8 (ಯಾನ್ಸನ್‌ 55*, ಬ್ರೆವಿಸ್‌ 34, ಮೆಕಾಂಚಿ 2-9), ನ್ಯೂಜಿಲೆಂಡ್‌ 12.5 ಓವರಲ್ಲಿ 173/1 (ಆ್ಯಲೆನ್‌ 100*, ಸೀಫರ್ಟ್‌ 58, ರಬಾಡ 1-28)

ಪಂದ್ಯಶ್ರೇಷ್ಠ: ಫಿನ್‌ ಆ್ಯಲೆನ್‌

33 ಎಸೆತದಲ್ಲಿ ಆ್ಯಲೆನ್‌ 100: ವಿಶ್ವಕಪ್‌ ದಾಖಲೆ

ಆ್ಯಲೆನ್‌ 33 ಎಸೆತಕ್ಕೆ ಶತಕ ಪೂರ್ಣಗೊಳಿಸಿದರು. ಇದು ಟಿ20 ವಿಶ್ವಕಪ್‌ನಲ್ಲೇ ಅತಿ ವೇಗದ ಶತಕ. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ಕ್ರಿಸ್‌ ಗೇಲ್‌ 47 ಎಸೆತಕ್ಕೆ ಶತಕ ಬಾರಿಸಿದ್ದು ಈವರೆಗೆ ದಾಖಲೆಯಾಗಿತ್ತು. ಇನ್ನು, ಅಂ.ರಾ. ಟಿ20ಯಲ್ಲಿ ಕಿವೀಸ್‌ ಪರ ಈವರೆಗೂ ಅತಿ ವೇಗದ ಶತಕದ ದಾಖಲೆ ಇದ್ದಿದ್ದು ಗ್ಲೆನ್‌ ಫಿಲಿಪ್ಸ್‌ ಹೆಸರಿನಲ್ಲಿ. ಅವರು 2020ರಲ್ಲಿ ವಿಂಡೀಸ್‌ ವಿರುದ್ಧ 46 ಎಸೆತಕ್ಕೆ ಶತಕ ಸಿಡಿಸಿದ್ದರು.

--

33 ಎಸೆತಆ್ಯಲೆನ್‌ ಅಂ.ರಾ. ಟಿ20ಯಲ್ಲಿ 3ನೇ ಅತಿ ವೇಗದ ಶತಕದ ದಾಖಲೆ ಬರೆದರು. ಎಸ್ಟೋನಿಯಾದ ಸಾಹಿಲ್‌ ಸೈಪ್ರಸ್‌ ವಿರುದ್ಧ 27, ಟರ್ಕಿಯ ಫಹದ್‌ ಬಲ್ಗೇರಿಯಾ ವಿರುದ್ಧ 29 ಎಸತಕ್ಕೆ ಶತಕ ಬಾರಿಸಿದ್ದಾರೆ.