ರವಿಚಂದ್ರನ್ ಅಶ್ವಿನ್ ಅವರು ಟಿಎನ್‌ಪಿಎಲ್ ಪಂದ್ಯದಲ್ಲಿ ಅಂಪೈರ್ ತೀರ್ಪನ್ನು ಪ್ರಶ್ನಿಸಿ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಪಂದ್ಯದ ಸಂಭಾವನೆಯ 30% ದಂಡ ವಿಧಿಸಲಾಗಿದೆ. ಎಲ್‌ಬಿಡಬ್ಲ್ಯೂ ತೀರ್ಪನ್ನು ಒಪ್ಪಿಕೊಳ್ಳದ ಅಶ್ವಿನ್, ಮೈದಾನ ತೊರೆಯಲು ಹಿಂದೇಟು ಹಾಕಿದ್ದರು ಮತ್ತು ಆಕ್ರೋಶ ವ್ಯಕ್ತಪಡಿಸಿದ್ದರು.

ಚೆನ್ನೈ: ಭಾರತ ಕ್ರಿಕೆಟ್ ಕಂಡ ದಿಗ್ಗಜ ಆಫ್‌ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರೂ, ಟಿ20 ಲೀಗ್‌ನಲ್ಲಿ ಮುಂದುವರೆದಿದ್ದಾರೆ. ಸದ್ಯ ಅಶ್ವಿನ್, ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದಿಂಡಿಗಲ್ ಡ್ರ್ಯಾಗನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ದಿಂಡಿಗಲ್ ಡ್ರ್ಯಾಗನ್ಸ್ ಹಾಗೂ ಐಡ್ರೀಮ್ ತಿರುಪ್ಪುರ್ ತಮಿಝಾನಿಸ್ ತಂಡಗಳ ನಡುವಿನ ಪಂದ್ಯದಲ್ಲಿ ಅಂಪೈರ್ ತೀರ್ಪಿಗೆ ತೀವ್ರ ಆಕ್ರೋಶ ಹೊರಹಾಕಿ ಅನುಚಿತವಾಗಿ ವರ್ತಿಸಿದ ತಪ್ಪಿಗೆ ಇದೀಗ ಭಾರೀ ಬೆಲೆ ತೆತ್ತಿದ್ದಾರೆ.

ದಿಂಡಿಗಲ್ ಡ್ರ್ಯಾಗನ್ಸ್ ಹಾಗೂ ಐಡ್ರೀಮ್ ತಿರುಪ್ಪುರ್ ತಮಿಝಾನಿಸ್ ನಡುವಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರವಿಚಂದ್ರನ್ ಅಶ್ವಿನ್ ಅವರನ್ನು ಎದುರಾಳಿ ತಂಡದ ಆರ್‌ ಸಾಯಿ ಕಿಶೋರ್ ಎಲ್‌ಬಿ ಬಲೆಗೆ ಕೆಡವಿದರು. ಕೇವಲ 10 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಶ್ವಿನ್ 18 ರನ್ ಗಳಿಸಿ ದೊಡ್ಡ ಇನ್ನಿಂಗ್ಸ್‌ ಕಟ್ಟುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಹಾಕುತ್ತಿದ್ದರು. ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ನೀಡಿದರೂ, ಅಶ್ವಿನ್ ಮೈದಾನ ತೊರೆಯಲು ಹಿಂದೇಟು ಹಾಕಿದ್ದರು. ಇದಾದ ಬಳಿಕವೂ ಅಂಪೈರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಆಕ್ರೋಶ್ ಹೊರಹಾಕಿದ್ದರು.

Scroll to load tweet…

ರವಿಚಂದ್ರನ್ ಅಶ್ವಿನ್ ಅವರ ಈ ಅನುಚಿತ ವರ್ತನೆಗೆ ಇದೀಗ ಭಾರೀ ಬೆಲೆ ತೆರುವಂತೆ ಮಾಡಿದೆ. ಮೈದಾನದಲ್ಲಿ ಅಂಪೈರ್ ತೀರ್ಮಾನ ಪ್ರಶ್ನಿಸಿ ಅನುಚಿತವಾಗಿ ವರ್ತಿಸಿದ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್‌ಗೆ ಪಂದ್ಯದ ಸಂಭಾವನೆಯ 30% ದಂಡ ವಿಧಿಸಲಾಗಿದೆ. "ರವಿಚಂದ್ರನ್ ಅಶ್ವಿನ್, ಅಂಪೈರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದಕ್ಕಾಗಿ ಪಂದ್ಯದ ಸಂಭಾವನೆಯ 10% ಹಾಗೂ ಉಪಕರಣಗಳನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ 20% ದಂಡ ವಿಧಿಸಲಾಗಿದೆ" ಎಂದು ತಮಿಳುನಾಡು ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಿಂಗ್ಸ್‌ನ 11ನೇ ಓವರ್ ಐದನೇ ಎಸೆತವನ್ನು ರವಿಚಂದ್ರನ್ ಅಶ್ವಿನ್ ಪ್ಯಾಡಲ್ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ ಸಾಯಿ ಕಿಶೋರ್ ಎಸೆದ ಚೆಂಡು ಅಶ್ವಿನ್ ಅವರ ಪ್ಯಾಡ್‌ಗೆ ಬಡಿದಿತ್ತು. ಅಂಪೈರ್ ವೆಂಕಟೇಶನ್ ಕ್ರಿತಿಕಾ ಔಟ್ ಎನ್ನುವ ತೀರ್ಪು ನೀಡಿದ್ದರು. ಆದರೆ ಚೆಂಡು ಲೆಗ್‌ಸೈಡ್‌ ಆಫ್‌ಸ್ಟಂಬ್ ಆಚೆ ಪಿಚ್ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ಇದಕ್ಕೂ ಮೊದಲೇ ತಂಡದ ಆರಂಭಿಕ ಬ್ಯಾಟರ್ ಶಿವಂ ಸಿಂಗ್ ಡಿಆರ್‌ಎಸ್ ಬಳಸಿಕೊಂಡಿದ್ದರಿಂದ ಅಶ್ವಿನ್ ಡಿಆರ್‌ಎಸ್ ಬಳಸಿಕೊಳ್ಳಲು ಅವಕಾಶ ಇರಲಿಲ್ಲ. ಹೀಗಿದ್ದೂ ಅಂಪೈರ್ ಜತೆ ವಾಗ್ವಾದ ನಡೆಸಿದ್ದಕ್ಕಾಗಿ ಅಶ್ವಿನ್‌ಗೆ ದಂಡ ವಿಧಿಸಲಾಗಿದೆ.

ಇನ್ನು ಈ ಪಂದ್ಯದ ವಿಚಾರಕ್ಕೆ ಬರುವುದಾದರೇ, ಮೊದಲು ಬ್ಯಾಟ್ ಮಾಡಿದ ದಿಂಡಿಗಲ್ ಡ್ರ್ಯಾಗನ್ಸ್ ತಂಡವು ಶಿವಂ ಸಿಂಗ್(30) ದಿಟ್ಟ ಬ್ಯಾಟಿಂಗ್ ಹೊರತಾಗಿಯೂ 16.2 ಓವರ್‌ಗಳಲ್ಲಿ ಕೇವಲ 93 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಐಡ್ರೀಮ್ ತಿರುಪ್ಪುರ್ ತಮಿಝಾನಿಸ್ ತಂಡವು 11.5 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಅನಾಯಾಸವಾಗಿ ಗೆಲುವಿನ ನಗೆ ಬೀರಿತು.

ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೆಲ ತಿಂಗಳ ಹಿಂದಷ್ಟೇ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯದಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇನ್ನು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಅಶ್ವಿನ್, ತಮ್ಮ ಮೊನಚಾದ ದಾಳಿ ನಡೆಸಲು ವಿಫಲವಾಗಿದ್ದರು. ಅಶ್ವಿನ್ ನೇತೃತ್ವದ ದಿಂಡಿಗಲ್ ಡ್ರ್ಯಾಗನ್ಸ್ ತಂಡವು ಸದ್ಯ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.