2025ರ ಐಪಿಎಲ್ ಟೂರ್ನಿಯು ಬಿಸಿಸಿಐಗೆ ಹಾಗೂ ಭಾಗವಹಿಸಿದ ಎಲ್ಲಾ 10 ತಂಡಗಳಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಬ್ರಾಡ್‌ಕಾಸ್ಟಿಂಗ್ ಹಕ್ಕುಗಳು, ಎಂಡೋರ್ಸ್‌ಮೆಂಟ್‌ಗಳು ಮತ್ತು ಇತರ ಆದಾಯದ ಮೂಲಗಳಿಂದ ಬಿಸಿಸಿಐಗೆ ಭಾರೀ ಲಾಭ ದೊರೆತಿದೆ.

ಮುಂಬೈ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ವಾರವಾಗುತ್ತಾ ಬಂದಿದೆ. ಜೂನ್ 03ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಪಂಜಾಬ್ ಕಿಂಗ್ಸ್ ಎದುರು 6 ರನ್ ಅಂತರದ ರೋಚಕ ಜಯ ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಎರಡು ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ಮನರಂಜಿಸಿದ್ದ ಐಪಿಎಲ್ ಟೂರ್ನಿಯು, ಬಿಸಿಸಿಐಗೆ ಹಾಗೂ ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲಾ 10 ತಂಡಗಳಿಗೆ ಹಣದ ಮಳೆಯನ್ನೇ ಸುರಿಸಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎಂದೇ ಕರೆಸಿಕೊಳ್ಳುವ ಐಪಿಎಲ್‌ ಟೂರ್ನಿಯಿಂದ ಬಿಸಿಸಿಐ ಭರ್ಜರಿ ಲಾಭ ಗಳಿಸಿದೆ.

ಐಪಿಎಲ್‌ನಿಂದ ಬಿಸಿಸಿಐಗೆ ಸಿಗುವ ದೊಡ್ಡ ಲಾಭವೆಂದರೆ ಅದು ಬ್ರಾಡ್‌ಕಾಸ್ಟಿಂಗ್ ಫೀ ಮೂಲಕ. ಐಪಿಎಲ್‌ ಬ್ರಾಡ್‌ಕಾಸ್ಟಿಂಗ್‌ನಿಂದ 2025ರ ಐಪಿಎಲ್‌ನಲ್ಲಿ ಬಿಸಿಸಿಐಗೆ ಬರೋಬ್ಬರಿ 9,678 ಕೋಟಿ ರುಪಾಯಿ ಲಾಭ ಸಿಕ್ಕಿದೆ. ಅಂದರೆ ಒಂದು ಪಂದ್ಯದಿಂದ ಬಿಸಿಸಿಐಗೆ ಬರೋಬ್ಬರಿ 130.7 ಕೋಟಿ ರುಪಾಯಿ ಲಾಭ ಸಿಕ್ಕಿದೆ. ಈ ಐಪಿಎಲ್ ಟೂರ್ನಿಯ ಟೆಲಿಕಾಸ್ಟ್ ಹಕ್ಕನ್ನು ಸ್ಟಾರ್‌ ಸ್ಪೋರ್ಟ್‌ ಪಡೆದುಕೊಂಡಿತ್ತು. ಇನ್ನು ಡಿಜಿಟಲ್ ಪ್ರಸಾರದ ಹಕ್ಕನ್ನು ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ವಯಕಾಮ್ ಪಡೆದುಕೊಂಡಿತ್ತು.

ಎಂಡೋರ್ಸ್‌ಮೆಂಟ್ ಸಂಖ್ಯೆಯಲ್ಲೂ ಹೆಚ್ಚಳ:

ಎಕನೋಮಿಕ್ಸ್‌ ಟೈಮ್ಸ್ ವರದಿಯ ಪ್ರಕಾರ, 2025ರ ಐಪಿಎಲ್ ಟೂರ್ನಿಯ ಎಂಡೋರ್ಸ್‌ಮೆಂಟ್‌ನಲ್ಲಿ 27% ಹೆಚ್ಚಳವಾಗಿದ್ದು, ಸದ್ಯ 105% ಗೆ ತಲುಪಿದೆ. ಕಳೆದ ವರ್ಷ ಟಾಟಾ ಗ್ರೂಪ್ 2500 ಕೋಟಿ ರುಪಾಯಿ ನೀಡಿ 2024ರಿಂದ 2028ರ ಅವಧಿಗೆ ಅಂದರೆ 5 ವರ್ಷಗಳ ಅವಧಿಗೆ ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ಪಡೆದುಕೊಂಡಿತ್ತು. ಇದರರ್ಥ ಪ್ರತಿವರ್ಷ ಬಿಸಿಸಿಐಗೆ ಟೈಟಲ್ ಸ್ಪಾನ್ಸರ್‌ಶಿಪ್‌ನಿಂದಲೇ 500 ಕೋಟಿ ರುಪಾಯಿ ಸಿಗುತ್ತದೆ. ಇದಷ್ಟೇ ಅಲ್ಲದೇ ರೆವಿನ್ಯೂ ಹಂಚಿಕೆ ರೂಪದಲ್ಲಿ ಹಲವು ಕಂಪನಿಗಳಿಂದ ಬಿಸಿಸಿಐಗೆ ಹಣದ ಮಳೆಯೇ ಸುರಿಯುತ್ತಿದೆ.

ಬಿಸಿಸಿಐ ಪಾಲಾದ ದೊಡ್ಡ ಆದಾಯ:

ವರದಿಗಳ ಪ್ರಕಾರ, ಬಿಸಿಸಿಐಗೆ ಪ್ರತಿ ಟೀಂನ ಸೆಂಟ್ರಲ್ ಹಾಗೂ ಸ್ಪಾನ್ಸರ್‌ಶಿಪ್ ಮತ್ತು ಟಿಕೆಟ್‌ ರೆವಿನ್ಯೂದಿಂದ 20% ಲಾಭ ಸಿಗುತ್ತದೆ.ಇದಷ್ಟೇ ಅಲ್ಲದೇ ಲೈಸೆನ್ಸಿಂಗ್‌ ರಾಜಸ್ವದಿಂದ 12% ಲಾಭ ಸಿಗುತ್ತದೆ. ಬಿಸಿಸಿಐಗೆ ಪ್ರತಿ ತಂಡಕ್ಕೆ ಸ್ಥಿರ ಕೇಂದ್ರ ಆದಾಯವನ್ನು ಒದಗಿಸುತ್ತದೆ. ಲೀಗ್ ಹಂತದಲ್ಲಿನ ಪ್ರದರ್ಶನವನ್ನು ಆಧರಿಸಿ ವೇರಿಯೇಬಲ್ ರೆವಿನ್ಯೂ ನೀಡುತ್ತದೆ. 2024ರ ಹಣಕಾಸು ವರ್ಷದಲ್ಲಿ ಬಿಸಿಸಿಐಗೆ 20,686 ಕೋಟಿ ರುಪಾಯಿ ಸಂಪಾದನೆ ಮಾಡಿದೆ. ಇನ್ನು ಇದಕ್ಕೂ ಮೊದಲು 2023ರ ಹಣಕಾಸು ವರ್ಷದಲ್ಲಿ ಬಿಸಿಸಿಐ ಬರೋಬ್ಬರಿ 16,493 ಕೋಟಿ ರುಪಾಯಿ ಗಳಿಸಿತ್ತು.

ಇನ್ನು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ವಿಚಾರಕ್ಕೆ ಬರುವುದಾದರೇ ಅದ್ದೂರಿಯಾಗಿ ಆಯೋಜನೆಗೊಂಡಿದ್ದ ಟೂರ್ನಿಯು ನಿರ್ಣಾಯಕ ಘಟ್ಟ ತಲುಪುವ ಹೊಸ್ತಿಲಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಗಡಿ ಉದ್ವಿಗ್ನತೆ ಉಂಟಾಗಿತ್ತು. ಈ ವೇಳೆ ಬಿಸಿಸಿಐ ಟೂರ್ನಿಯನ್ನು ಒಂದು ವಾರ ತಾತ್ಕಲಿಕವಾಗಿ ಸ್ಥಗಿತಗೊಂಡಿತ್ತು. ನಂತರ ವಾತಾವರಣ ತಿಳಿಗೊಂಡ ಬಳಿಕ ಮತ್ತೆ ಐಪಿಎಲ್ ಟೂರ್ನಿಗೆ ಚಾಲನೆ ನೀಡಲಾಯಿತು. ವಿದೇಶಿ ಆಟಗಾರರನ್ನು ವಾಪಾಸ್ ಭಾರತಕ್ಕೆ ಕರೆಸುವಲ್ಲಿ ಬಿಸಿಸಿಐ ಯಶಸ್ವಿಯಾಗಿತ್ತು. ಇದಷ್ಟೇ ಅಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಕೆಲವೇ ದಿನಗಳು ಬಾಕಿ ಉಳಿದಿದ್ದರೂ ಜೋಶ್ ಹೇಜಲ್‌ವುಡ್ ಸೇರಿದಂತೆ ಪ್ರಮುಖ ಆಟಗಾರರು ಐಪಿಎಲ್‌ ಆಡಲು ಭಾರತಕ್ಕೆ ಬಂದಿದ್ದು, ಜಾಗತಿಕ ಮಟ್ಟದಲ್ಲಿ ಬಿಸಿಸಿಐ ಪವರ್ ಪ್ರತಿನಿಧಿಸುತ್ತದೆ.