ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಅಶ್ವಿನ್‌ಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಆಸಕ್ತಿ ಇಲ್ಲ ಎಂದಿರುವ ಅವರು, ಪ್ರತಿಭಾವಂತ ಆಟಗಾರರ ಆಯ್ಕೆ ಕಷ್ಟಕರ ಎಂದು ಹೇಳಿದ್ದಾರೆ. ಒತ್ತಡ ನಿಭಾಯಿಸುವ ಆಟಗಾರರಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದ್ದಾರೆ.

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಕಳೆದ ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮಧ್ಯದಲ್ಲೇ ನಿವೃತ್ತಿ ಘೋಷಿಸಿದ್ದು ಎಲ್ಲರಿಗೂ ಶಾಕ್ ಕೊಟ್ಟಿತ್ತು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಆಡಲು ಅವಕಾಶ ಸಿಗದ ಕಾರಣ ನಿವೃತ್ತಿ ಪಡೆದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. 

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ದಿಗ್ಗಜ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ನಿವೃತ್ತಿ ನಂತರ ಅಶ್ವಿನ್ ಏನ್ ಮಾಡ್ತಾರೆ? ಐಪಿಎಲ್ ತಂಡಕ್ಕೆ ಕೋಚ್ ಆಗ್ತಾರಾ? ಪೂರ್ಣಾವಧಿ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗ್ತಾರಾ? ಅಂತೆಲ್ಲಾ ಅನೇಕ ಮಾತುಗಳು ಕೇಳಿಬರ್ತಿವೆ. ಇದೆಲ್ಲದರ ನಡುವೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ಅಧ್ಯಕ್ಷರಾಗೊಲ್ಲ ಅಂತ ಅಶ್ವಿನ್ ಹೇಳಿದ್ದಾರೆ. 

ಭಾರತ-ಇಂಗ್ಲೆಂಡ್ ಟಿ20: ಪುಣೆಯಲ್ಲಿಂದು ಟೀಂ ಇಂಡಿಯಾಗೆ ಸರಣಿ ಗೆಲ್ಲುವ ಟಾರ್ಗೆಟ್

ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ 15 ಜನರ ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಸೇರಿಸಿಲ್ಲ. ಇದಕ್ಕಾಗಿ ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರನ್ನು ಅಭಿಮಾನಿಗಳು ಟೀಕಿಸುತ್ತಿದ್ದಾರೆ.

ಇದರ ಬಗ್ಗೆ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ರವಿಚಂದ್ರನ್ ಅಶ್ವಿನ್, 'ನಾನು ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಲೀ ಅಥವಾ ಆಯ್ಕೆ ಸಮಿತಿ ಸದಸ್ಯರಾಗಲೀ ಅಥವಾ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯಲ್ಲಿರಲೀ ಇರೋದಕ್ಕೆ ಇಷ್ಟಪಡಲ್ಲ. ಯಾಕಂದ್ರೆ ಭಾರತದಲ್ಲಿ ಟ್ಯಾಲೆಂಟೆಡ್ ಆಟಗಾರರು ಜಾಸ್ತಿ ಇರೋದ್ರಿಂದ ಆಯ್ಕೆ ಸಮಿತಿ ಅಧ್ಯಕ್ಷರ ಕೆಲಸ ತುಂಬಾ ಕಷ್ಟ. ಮುಂಬರುವ ಐಪಿಎಲ್ ಸೀಸನ್ ನಲ್ಲಿ, ಶುಭ್‌ಮನ್ ಗಿಲ್ ಮತ್ತು ಋತುರಾಜ್ ಗಾಯಕ್ವಾಡ್‌ ಇಬ್ಬರೂ ರನ್ ಗಳಿಸಿದ್ರೆ, ಅದು ಆಯ್ಕೆದಾರರಿಗೆ ದೊಡ್ಡ ಸಮಸ್ಯೆಯಾಗುತ್ತೆ. ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಾಗಿ, ಇಂತಹ ಪ್ರತಿಭಾವಂತ ಆಟಗಾರರು ಸಿಕ್ಕಿರೋದು ನಮಗೆ ಹೆಮ್ಮೆಯ ವಿಷಯ'' ಎಂದು ಅಶ್ವಿನ್ ಮನಬಿಚ್ಚಿ ಮಾತನಾಡಿದ್ದಾರೆ.

ಚೋಲೆ ಬಟೋರೆ, ಬಟರ್ ಚಿಕನ್ ಅಲ್ಲ, ಕೊಹ್ಲಿಗೆ ಈ ಸಲ ಲಂಚ್‌ನಲ್ಲಿ ಸಿಗುತ್ತೆ ಫೇವರೇಟ್ ಫುಡ್

ಮುಂದುವರೆದು ಮಾತನಾಡಿದ ರವಿಚಂದ್ರನ್ ಅಶ್ವಿನ್, 'ಒತ್ತಡದಲ್ಲಿ ಚೆನ್ನಾಗಿ ಆಡುವ ಆಟಗಾರರಿಗೆ ನಾವು ಕೆಲವು ಮಹತ್ವಗಳನ್ನು ಕೊಡಬೇಕು. ಯಾಕಂದ್ರೆ, ಈಗಿನ ಕ್ರಿಕೆಟ್ ನಲ್ಲಿ ಚೆಂಡನ್ನು ಚೆನ್ನಾಗಿ ನಿಯಂತ್ರಿಸುವ ಆಟಗಾರರು ತುಂಬಾ ಜನ ಇದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಚೆಂಡು ಎಸೆಯುವ ಸಾಮರ್ಥ್ಯ ಇರುವ ಆಟಗಾರರಿಗೆ ದೊಡ್ಡ ಪಂದ್ಯಗಳಲ್ಲಿ ಆಡಲು ಅವಕಾಶ ಕೊಡಬೇಕು' ಅಂತ ಅಶ್ವಿನ್ ಹೇಳಿದ್ದಾರೆ. 

ಚೆನ್ನೈ ಮೂಲದ 38 ವರ್ಷದ ರವಿಚಂದ್ರನ್ ಅಶ್ವಿನ್ 14 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಮೂರು ಮಾದರಿಯಿಂದ 765 ವಿಕೆಟ್ ಕಬಳಿಸಿದ್ದಾರೆ. ಈ ಪೈಕಿ 106 ಟೆಸ್ಟ್ ಪಂದ್ಯಗಳನ್ನಾಡಿ 537 ವಿಕೆಟ್ ಕಬಳಿಸುವ ಮೂಲಕ ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪೈಕಿ 7ನೇ ಸ್ಥಾನದಲ್ಲಿದ್ದಾರೆ. ಇದಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ 6 ಶತಕಗಳನ್ನು ಸಿಡಿಸಿದ್ದಾರೆ.