ಬೆಂಗಳೂರು(ಫೆ.18): 2019-20ರ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಕರ್ನಾಟಕ ತಂಡ ಸಜ್ಜಾಗಿದೆ. ಫೆ.20ರಿಂದ ಜಮ್ಮುವಿನ ಗಾಂಧಿ ಕಾಲೇಜು ಮೈದಾನದಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಸೋಮವಾರ ಕರ್ನಾಟಕ ತಂಡ ಪ್ರಕಟಗೊಂಡಿತು. 

ಬರೋಡ ಬಗ್ಗುಬಡಿದು ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ಲಗ್ಗೆ

15 ಸದಸ್ಯರ ತಂಡದಲ್ಲಿ ಮನೀಶ್‌ ಪಾಂಡೆಗೆ ಸ್ಥಾನ ನೀಡಲಾಗಿದೆ. ನ್ಯೂಜಿಲೆಂಡ್‌ ವಿರುದ್ಧ ಟಿ20, ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದ ಮನೀಶ್‌ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ವಾಪಸಾಗಿದ್ದರು. ಅವರ ಸೇರ್ಪಡೆ ತಂಡದ ಬಲ ಹೆಚ್ಚಿಸಲಿದೆ. ಪಾಂಡೆಗೆ ಸ್ಥಾನ ನೀಡಿದ್ದರೂ, ಕರುಣ್‌ ನಾಯರ್‌ರನ್ನೇ ನಾಯಕನನ್ನಾಗಿ ಮುಂದುವರಿಸಲಾಗಿದೆ. ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಡಿ.ನಿಶ್ಚಲ್‌ ಬದಲಿಗೆ ಪಾಂಡೆ, ವೇಗಿ ವಿ.ಕೌಶಿಕ್‌ ಬದಲಿಗೆ ಪ್ರತೀಕ್‌ ಜೈನ್‌, ಪ್ರವೀಣ್‌ ದುಬೆ ಬದಲಿಗೆ ಜೆ.ಸುಚಿತ್‌ಗೆ ಸ್ಥಾನ ಸಿಕ್ಕಿದೆ.

ರಾಹುಲ್‌ ಅಲಭ್ಯ: ನ್ಯೂಜಿಲೆಂಡ್‌ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಕೆ.ಎಲ್‌.ರಾಹುಲ್‌ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ ರಾಹುಲ್‌ ತವರಿಗೆ ವಾಪಸಾಗಿದ್ದಾರೆ. ಜಮ್ಮು-ಕಾಶ್ಮೀರ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ರಾಹುಲ್‌ ಸಹ ಆಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಅವರು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ಅಭ್ಯಾಸ ನಡೆಸುತ್ತಿದ್ದು, ಆಯ್ಕೆಗೆ ಲಭ್ಯರಿರಲಿಲ್ಲ ಎಂದು ಕೆಎಸ್‌ಸಿಎ ತಿಳಿಸಿದೆ.

ರಣಜಿ ಟ್ರೋಫಿ: ಯುವಿ ರೀತಿಯಲ್ಲೇ ಕ್ಯಾನ್ಸರ್ ಗೆದ್ದು ಶತಕ ಸಿಡಿಸಿದ 18ರ ಪೋರ!

ಇಂದು ಜಮ್ಮುಗೆ ತಂಡ: ಮಂಗಳವಾರ ಕರ್ನಾಟಕ ತಂಡ ಜಮ್ಮುವಿಗೆ ತೆರಳಲಿದೆ. ಗುಂಪು ಹಂತದಲ್ಲಿ 8 ಪಂದ್ಯಗಳಿಂದ 31 ಅಂಕ ಗಳಿಸಿದ ಕರ್ನಾಟಕ, ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿತು. ಜಮ್ಮು-ಕಾಶ್ಮೀರ ಆಡಿದ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 39 ಅಂಕಗಳೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ಗೆದ್ದರೆ ಸೆಮಿಫೈನಲ್‌ನಲ್ಲಿ ಸೌರಾಷ್ಟ್ರ ಇಲ್ಲವೇ ಆಂಧ್ರಪ್ರದೇಶವನ್ನು ಎದುರಿಸಬೇಕಾಗುತ್ತದೆ.

ಕರ್ನಾಟಕ ತಂಡ ಹೀಗಿದೆ:

ಕರುಣ್‌ ನಾಯರ್‌ (ನಾಯಕ), ಆರ್‌.ಸಮರ್ಥ್, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ, ಪವನ್‌ ದೇಶಪಾಂಡೆ, ಶರತ್‌ ಶ್ರೀನಿವಾಸ್‌, ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಸಿದ್ಧಾರ್ಥ್ ಕೆ.ವಿ., ಪ್ರಸಿದ್ಧ್ ಕೃಷ್ಣ, ಜೆ.ಸುಚಿತ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಶರತ್‌ ಬಿ.ಆರ್‌.