ಬರೋಡ ಬಗ್ಗುಬಡಿದು ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ಲಗ್ಗೆ
ರಣಜಿ ಟೂರ್ನಿಯಲ್ಲಿ ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಬರೋಡ ವಿರುದ್ಧ ರಾಜ್ಯ ತಂಡ 8 ವಿಕೆಟ್‌ಗಳ ಜಯ ದಾಖಲಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಬೆಂಗಳೂರು(ಫೆ.14): ರಣಜಿ ಟ್ರೋಫಿ ಪಂದ್ಯದಲ್ಲಿ ಬರೋಡ ವಿರುದ್ಧ ಸಂಘಟಿತ ಪ್ರದರ್ಶನ ತೋರಿದ ಕರ್ನಾಟಕ ತಂಡ ಇನ್ನೊಂದು ದಿನ ಬಾಕಿ ಇರುವಾಗಲೇ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
ರಣಜಿ ಟ್ರೋಫಿ: ಕರ್ನಾಟಕಕ್ಕೆ ಗೆಲ್ಲಲು 149 ರನ್‌ಗಳ ಗುರಿ
ಇಲ್ಲಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಗುಂಪುಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಗೆಲ್ಲಲು 149 ರನ್‌ಗಳ ಗುರಿ ಪಡೆದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತಾದರೂ ಆ ಬಳಿಕ 3ನೇ ವಿಕೆಟ್‌ಗೆ ಕರುಣ್ ನಾಯರ್ ಹಾಗೂ ಕೆ. ಸಿದ್ಧಾರ್ಥ್ 92 ರನ್‌ಗಳ ಮುರಿಯದ ಜತೆಯಾಟದ ನೆರವಿನಿಂದ ಭರ್ಜರಿ ಜಯ ದಾಖಲಿಸಿತು. ನಾಯಕ್ ಕರುಣ್ ನಾಯರ್ 126 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 71 ರನ್ ಬಾರಿಸಿದರೆ, ಸಿದ್ಧಾರ್ಥ್ 68 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 29 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ರಣಜಿ ಪಂದ್ಯದಲ್ಲಿ ಹಿಂದಿ ಹೇರಿಕೆ: ಗ್ರಾಚಾರ ಬಿಡಿಸಿದ ಕನ್ನಡಿಗರು
2ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 205 ರನ್ ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಬರೋಡ ತಂಡ 296 ರನ್‌ಗಳಿಗೆ ಸರ್ವಪತನ ಕಂಡಿತು. ಅಭಿಮನ್ಯು ರಜಪೂತ್ 52 ಹಾಗೂ ಪಾರ್ಥ್ ಕೊಹ್ಲಿ 42 ರನ್ ಬಾರಿಸುವ ಮೂಲಕ ಕರ್ನಾಟಕ ವಿರುದ್ಧ ಪ್ರತಿರೋಧ ತೋರಿದರು. ಇದರ ಹೊರತಾಗಿಯೂ ಪ್ರಸಿದ್ಧ್ ಕೃಷ್ಣ ಮಾರಕ ದಾಳಿಗೆ ತತ್ತರಿಸಿ ಹೋಯಿತು.
ಮೊದಲ ಇನಿಂಗ್ಸ್‌ನಲ್ಲಿ 47 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 71 ರನ್ ಬಾರಿಸಿದ ನಾಯಕ ಕರುಣ್ ನಾಯರ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಗುಂಪು ಹಂತದಲ್ಲಿ 4 ಗೆಲುವು ಹಾಗೂ 4 ಡ್ರಾದೊಂದಿಗೆ ಒಟ್ಟು 31 ಅಂಕಗಳೊಂದಿಗೆ ಎ ಮತ್ತು ಬಿ ಗುಂಪಿನಲ್ಲಿ ಮೂರನೇ ಸ್ಥಾನಕ್ಕೇರಿದೆ. ಇನ್ನು ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡವು ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ.