Asianet Suvarna News Asianet Suvarna News

ಮಂಗಳಸೂತ್ರ ಬಗ್ಗೆ ಮೋದಿ ಹೇಳಿಕೆ: ಕೇಂದ್ರ ಚುನಾವಣಾ ಆಯೋಗದಿಂದ ನೋಟಿಸ್‌ ಜಾರಿ

ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್‌ ಹೊರಟಿದ್ದು, ಮಹಿಳೆಯರ ಮಂಗಳಸೂತ್ರವನ್ನೂ ಬಿಡಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸಂಬಂಧ ಕೇಂದ್ರ ಚುನಾವಣಾ ಆಯೋಗ ನೋಟಿಸ್‌ ಜಾರಿಗೊಳಿಸಿದೆ. 

Election Commissions Notice on PM Modi and Rahul Gandhis Election Speeches gvd
Author
First Published Apr 26, 2024, 5:23 AM IST | Last Updated Apr 26, 2024, 5:23 AM IST

ನವದೆಹಲಿ (ಏ.26): ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್‌ ಹೊರಟಿದ್ದು, ಮಹಿಳೆಯರ ಮಂಗಳಸೂತ್ರವನ್ನೂ ಬಿಡಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸಂಬಂಧ ಕೇಂದ್ರ ಚುನಾವಣಾ ಆಯೋಗ ನೋಟಿಸ್‌ ಜಾರಿಗೊಳಿಸಿದೆ. ಏ.29ರೊಳಗೆ ಉತ್ತರಿಸುವಂತೆ ಸೂಚಿಸಿದೆ. ಪ್ರಧಾನಿಯೊಬ್ಬರ ಹೇಳಿಕೆ ವಿರುದ್ಧ ಆಯೋಗ ನೋಟಿಸ್ ಜಾರಿಗೊಳಿಸಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು. 

ಮತ್ತೊಂದೆಡೆ, ದೇಶದ ಇತಿಹಾಸದ ಮೇಲೆ ಮೋದಿ ದಾಳಿ ನಡೆಸುತ್ತಿದ್ದಾರೆ ಎಂಬ ಕಾಂಗ್ರೆಸ್ಸಿಗ ರಾಹುಲ್ ಗಾಂಧಿ ಹೇಳಿಕೆ ಹಾಗೂ ದಲಿತ ಎಂಬ ಕಾರಣಕ್ಕೆ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಲಿಲ್ಲ ಎಂಬ ಹೇಳಿಕೆ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ನೋಟಿಸ್‌ ಜಾರಿಗೊಳಿಸಲಾಗಿದೆ. ರಾಜಸ್ಥಾನದ ಬನ್ಸ್ವಾರಾದಲ್ಲಿ ಮೋದಿ ಏ.21ರಂದು ಮಾಡಿದ ಭಾಷಣದಲ್ಲಿ ‘ಕಾಂಗ್ರೆಸ್‌ ಪಕ್ಷ ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚಲು ಹೊರಟಿದೆ ಮತ್ತು ಆ ಪಕ್ಷ ಮಹಿಳೆಯರ ಮಂಗಳಸೂತ್ರವನ್ನು ಕೂಡ ಬಿಡುವುದಿಲ್ಲ’ ಎಂದು ಹೇಳಿದ್ದರು. 

ಅದರ ವಿರುದ್ಧ ಕಾಂಗ್ರೆಸ್‌, ಎಡಪಕ್ಷಗಳು ಹಾಗೂ ಕೆಲ ನಾಗರಿಕ ಸಂಸ್ಥೆಗಳು ದೂರು ನೀಡಿದ್ದವು. ಅದನ್ನು ಪರಿಗಣಿಸಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಚುನಾವಣಾ ಆಯೋಗ ನೋಟಿಸ್‌ ಜಾರಿಗೊಳಿಸಿದೆ. ಅದೇ ರೀತಿ, ಕೇರಳದ ಕೊಟ್ಟಾಯಂನಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್‌ ಗಾಂಧಿ ಅವರು ‘ದೇಶದ ಪ್ರಧಾನಿ ನಮ್ಮ ಭಾಷೆ, ಇತಿಹಾಸ ಹಾಗೂ ಸಂಪ್ರದಾಯದ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದ್ದರು. 

ಕರ್ನಾಟಕದಲ್ಲಿನ ಮುಸ್ಲಿಂ ಮೀಸಲು ಇಸ್ಲಾಮೀಕರಣದ ಭಾಗ: ಉತ್ತರ ಪ್ರದೇಶ ಸಿಎಂ ಯೋಗಿ ಕಿಡಿ

ಇನ್ನು, ಖರ್ಗೆ ಅವರು ತಮ್ಮನ್ನು ದಲಿತ ಎಂಬ ಕಾರಣಕ್ಕೆ ರಾಮಮಂದಿರದ ಉದ್ಘಾಟನೆಗೆ ಆಹ್ವಾನಿಸಿರಲಿಲ್ಲ ಎಂದು ಹೇಳಿದ್ದರು. ಇವುಗಳ ವಿರುದ್ಧ ಬಿಜೆಪಿ ನೀಡಿದ್ದ ದೂರನ್ನು ಪರಿಗಣಿಸಿ ಖರ್ಗೆ ಅವರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಎರಡೂ ಪಕ್ಷಗಳ ಅಧ್ಯಕ್ಷರಿಗೆ ನೀಡಿರುವ ಈ ನೋಟಿಸ್‌ಗಳಲ್ಲಿ ‘ನಿಮ್ಮ ಪಕ್ಷದ ತಾರಾ ಪ್ರಚಾರಕರು ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಮತ್ತು ಅವರ ಹೇಳಿಕೆಗಳಿಗೆ ವಿವರಣೆ ನೀಡಬೇಕು’ ಎಂದು ಸೂಚಿಸಲಾಗಿದೆ.

Latest Videos
Follow Us:
Download App:
  • android
  • ios