ರಣಜಿಯಲ್ಲಿ ಕರ್ನಾಟಕ vs ಬಂಗಾಳ ಸಮಬಲದ ಹೋರಾಟ

ಕರ್ನಾಟಕ ಹಾಗೂ ಬಂಗಾಳ ನಡುವಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮೊದಲ ದಿನವೇ ಸಮಬಲದ ಹೋರಾಟ ಮೂಡಿಬಂದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Ranji Trophy Karnataka vs Bengal equal fight in day 1 kvn

- ನಾಸಿರ್‌ ಸಜಿಪ, ಕನ್ನಡಪ್ರಭ

ಬೆಂಗಳೂರು: ವಾಸುಕಿ ಕೌಶಿಕ್‌ ನಿಖರ ದಾಳಿ ನಡುವೆಯೂ ಬಂಗಾಳ ತಂಡಕ್ಕೆ ನಾಯಕ ಅನುಸ್ತುಪ್‌ ಮಜುಂದಾರ್‌ ಆಸರೆಯಾಗಿದ್ದು, ಆತಿಥೇಯ ಕರ್ನಾಟಕ ವಿರುದ್ಧ ಉತ್ತಮ ಆರಂಭ ಪಡೆದಿದೆ. ಬುಧವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬಂಗಾಳ ಮೊದಲ ದಿನದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 249 ರನ್‌ ಕಲೆಹಾಕಿದೆ.

ಮಂದ ಬೆಳಕಿನ ಕಾರಣ ಪಂದ್ಯ ಬೇಗನೇ ಸ್ಥಗಿತಗೊಂಡಿದ್ದು, ಮೊದಲ ದಿನ ಕೇವಲ 78 ಓವರ್‌ ನಡೆಯಿತು. ಕೊನೆ ಅವಧಿಯಲ್ಲಿ ಪ್ರಮುಖ 2 ವಿಕೆಟ್‌ ಕಿತ್ತ ಕರ್ನಾಟಕ ಪಂದ್ಯದ ಮೇಲೆ ಹಿಡಿತ ಕೈ ತಪ್ಪದಂತೆ ನೋಡಿಕೊಂಡಿದ್ದು, 2ನೇ ದಿನ ಬಂಗಾಳವನ್ನು ಬೇಗನೇ ಆಲೌಟ್‌ ಮಾಡುವ ನಿರೀಕ್ಷೆಯಲ್ಲಿದೆ.

ರೋಹಿತ್, ಕೊಹ್ಲಿ, ಅಶ್ವಿನ್ ಟೆಸ್ಟ್‌ ನಿವೃತ್ತಿಗೆ ಇದು ಸರಿಯಾದ ಸಮಯ?

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ನಾಯಕ ಮಯಾಂಕ್‌ ಅಗರ್‌ವಾಲ್‌ ನಿರ್ಧಾರಕ್ಕೆ ಆರಂಭದಲ್ಲೇ ಯಶಸ್ಸು ಸಿಕ್ಕಿತು. ಕೇವಲ 21 ರನ್‌ ಗಳಿಸುವಷ್ಟರಲ್ಲೇ ತಂಡದ ಪ್ರಮುಖ ಇಬ್ಬರು ಬ್ಯಾಟರ್‌ಗಳು ಪೆವಿಲಿಯನ್‌ ಸೇರಿದ್ದರು. ಶುವಂ ದೇ ಖಾತೆ ತೆರೆಯುವ ಮೊದಲೇ ಕೌಶಿಕ್‌ ಎಸೆತದಲ್ಲಿ ಮನೀಶ್‌ ಪಾಂಡೆಗೆ ಕ್ಯಾಚ್‌ ನೀಡಿದರೆ, ಸುದೀಪ್‌ ಕುಮಾರ್‌ 5 ರನ್‌ ಗಳಿಸಿದ್ದಾಗ ಕೌಶಿಕ್‌ ಬೌಲಿಂಗ್‌ನಲ್ಲಿ ನಿಕಿನ್‌ ಜೋಸ್‌ ಪಡೆದ ಕ್ಯಾಚ್‌ಗೆ ಬಲಿಯಾದರು.

ಆದರೆ ಬಂಗಾಳವನ್ನು ಕಾಪಾಡಿದ್ದು ನಾಯಕ ಅನುಸ್ತುಪ್‌ ಹಾಗೂ ಸುದೀಪ್‌ ಚಟರ್ಜಿ. 3ನೇ ವಿಕೆಟ್‌ಗೆ ಈ ಜೋಡಿ 100 ರನ್‌ ಜೊತೆಯಾಟವಾಡಿದರು. ಕರ್ನಾಟಕ ಬೌಲರ್‌ಗಳ ತಾಳ್ಮೆ ಪರಿಶೀಲಿಸುವ ರೀತಿ ಬ್ಯಾಟ್‌ ಬೀಸಿದ ಈ ಜೋಡಿಯನ್ನು ಬೇರ್ಪಡಿಸಿದ್ದು ಕೌಶಿಕ್‌. ಸುದೀಪ್‌ 55 ರನ್‌ ಗಳಿಸಿದ್ದಾಗ ವಿಕೆಟ್‌ ಕೀಪರ್‌ ಸುಜಯ್‌ ಸತೇರಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಈ ಹಂತದಲ್ಲಿ ಅನುಸ್ತುಪ್‌ಗೆ ಜೊತೆಯಾದ ಆಲ್ರೌಂಡರ್‌ ಶಾಬಾಜ್‌ ನದೀಂ ಬಂಗಾಳವನ್ನು ಮೇಲೆತ್ತಿದರು. 4ನೇ ವಿಕೆಟ್‌ಗೆ ಇಬ್ಬರ ನಡುವೆ 80 ರನ್‌ ಮೂಡಿಬಂತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19ನೇ ಶತಕ ಸಿಡಿಸಿ ಸಂಭ್ರಮಿಸಿದ ಕೆಲವೇ ಕ್ಷಣಗಳಲ್ಲಿ ಅನುಸ್ತುಪ್‌, ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. 164 ಎಸೆತಗಳಲ್ಲಿ 101 ರನ್‌ ಸಿಡಿಸಿದ ಅನುಸ್ತುಪ್‌ ಅಂಪೈರ್‌ ನಿರ್ಧಾರಕ್ಕೆ ಅತೃಪ್ತಿ ವ್ಯಕ್ತಪಡಿಸುತ್ತಲೇ ಮೈದಾನ ತೊರೆದರು. ಬಳಿಕ ಕ್ರೀಸ್‌ಗೆ ಬಂದ ಅವಿಲಿನ್‌ ಘೋಷ್‌ 27 ಎಸೆತಗಳಲ್ಲಿ 22 ರನ್‌ ಸಿಡಿಸಿ ಔಟಾದರು. 54 ರನ್‌ ಗಳಿಸಿರುವ ಶಾಬಾಜ್‌ ನದೀಂ ಹಾಗೂ ವೃತ್ತಿಬದುಕಿನ ಕೊನೆ ಟೂರ್ನಿ ಆಡುತ್ತಿರುವ ವೃದ್ಧಿಮಾನ್‌ ಸಾಹ(ಔಟಾಗದೆ 6) 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಐಪಿಎಲ್‌ ಹರಾಜಿಗೆ 1,574 ಆಟಗಾರರ ನೋಂದಣಿ! ಮೆಗಾ ಹರಾಜಿನ ಡೇಟ್ ಫೈನಲ್!

ಚೊಚ್ಚಲ ಪಂದ್ಯವಾಡಿದ ಅಭಿಲಾಷ್‌ ಶೆಟ್ಟಿ, ಅವಿಲಿನ್‌ರನ್ನು ಔಟ್ ಮಾಡಿದರು. ಕರ್ನಾಟಕದ ಪರ ವಾಸುಕಿ ಕೌಶಿಕ್‌ಗೆ 3 ವಿಕೆಟ್‌ ಪಡೆದರು.

ಸ್ಕೋರ್‌: ಬಂಗಾಳ 78 ಓವರಲ್ಲಿ 249/5(ಮೊದಲ ದಿನದಂತ್ಯಕ್ಕೆ)

(ಅನುಸ್ತುಪ್‌ 101, ಸುದೀಪ್‌ 55, ಶಾಬಾಜ್ 54*, ಕೌಶಿಕ್‌ 3-29, ಅಭಿಲಾಶ್‌ 1-52, ಶ್ರೇಯಸ್‌ 1-66)
 

Latest Videos
Follow Us:
Download App:
  • android
  • ios