ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ ಗುರಿ
ಮಿಥುನ್ ಮಾರಕ ದಾಳಿ ಹಾಗೂ ದೇವದತ್ ಪಡಿಕ್ಕಲ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಉತ್ತರ ಪ್ರದೇಶ ವಿರುದ್ಧ ಇನಿಂಗ್ಸ್ ಮುನ್ನಡೆಯತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಹುಬ್ಬಳ್ಳಿ(ಡಿ.19): ಅಭಿಮನ್ಯು ಮಿಥುನ್ ಅವರ ಮಾರಕ ಬೌಲಿಂಗ್ ದಾಳಿ (60 ಕ್ಕೆ 6) ನೆರವಿನಿಂದ ಉತ್ತರ ಪ್ರದೇಶವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 281 ರನ್‌ಗಳಿಗೆ ಕಟ್ಟಿಹಾಕಿದ ಕರ್ನಾಟಕ, ಉತ್ತಮ ಆರಂಭದ ಹೊರತಾಗಿಯೂ ಇನ್ನಿಂಗ್ಸ್ ಮುನ್ನಡೆಗಾಗಿ ಹೆಚ್ಚಿನ ಪರಿಶ್ರಮ ವಹಿಸುವಂತಾಗಿದೆ. ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ರಣಜಿ ಪಂದ್ಯದ 2ನೇ ದಿನದಂತ್ಯಕ್ಕೆ ಕರ್ನಾಟಕ, 4 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿದ್ದು, ಇನ್ನೂ 113 ರನ್ ಹಿನ್ನಡೆಯಲ್ಲಿದೆ.
ರಣಜಿ ಟ್ರೋಫಿ: ಮೊದಲ ದಿನ ಕರ್ನಾಟಕ-ಉತ್ತರ ಪ್ರದೇಶ ಸಮಬಲದ ಹೋರಾಟ
ದೇವದತ್ ಪಡಿಕ್ಕಲ್ ಹಾಗೂ ಡಿ.ನಿಶ್ಚಲ್ (36), ಮೊದಲ ವಿಕೆಟ್‌ಗೆ 91 ರನ್ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಕರ್ನಾಟಕ ದಿಢೀರ್ ಕುಸಿತ ಕಂಡಿತು. ಪಡಿಕ್ಕಲ್ 74 ರನ್ ಗಳಿಸಿ ಔಟಾದರು. ಆರ್.ಸಮರ್ಥ್ (11) ಹಾಗೂ ಲಯ ಕಳೆದುಕೊಂಡು ಪರದಾಡುತ್ತಿರುವ ನಾಯಕ ಕರುಣ್ ನಾಯರ್ (13) ಬೇಗನೆ ಕ್ರೀಸ್ ತೊರೆದರು. 144 ರನ್‌ಗೆ ರಾಜ್ಯ ತಂಡ 4 ವಿಕೆಟ್ ಕಳೆದುಕೊಂಡಿತು. 23 ರನ್ ಗಳಿಸಿರುವ ಅಭಿಷೇಕ್ ರೆಡ್ಡಿ ಹಾಗೂ 8 ರನ್ ಗಳಿಸಿರುವ ಶ್ರೇಯಸ್ ಗೋಪಾಲ್, 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದು ತಂಡಕ್ಕೆ ಮುನ್ನಡೆ ಒದಗಿಸುವ ವಿಶ್ವಾಸದಲ್ಲಿದ್ದಾರೆ.
2ನೇ ಏಕದಿನದಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ಸರಣಿ ಸಮಬಲ!
ಮಿಥುನ್‌ಗೆ 6 ವಿಕೆಟ್: 5 ವಿಕೆಟ್ ನಷ್ಟಕ್ಕೆ 232 ರನ್‌ಗಳಿಂದ 2ನೇ ದಿನ ಆರಂಭಿಸಿದ ಉತ್ತರ ಪ್ರದೇಶ, ಆ ಮೊತ್ತಕ್ಕೆ 49 ರನ್‌ಗಳನ್ನಷ್ಟೇ ಸೇರಿಸಲು ಶಕ್ತವಾಯಿತು. ಮೊಹಮದ್ ಸೈಫ್ 80 ರನ್‌ಗೆ ತಮ್ಮ ಇನ್ನಿಂಗ್ಸ್ ಮುಕ್ತಾಯಗೊಳಿಸಿದರು. ಉಳಿದಂತೆ ಯಾವ ಆಟಗಾರರು ಹೆಚ್ಚು ಹೊತ್ತು ಹೋರಾಟ ನಡೆಸಲಿಲ್ಲ. 300ಕ್ಕೂ ಕಡಿಮೆ ಮೊತ್ತಕ್ಕೆ ಎದುರಾಳಿಯನ್ನು ಆಲೌಟ್ ಮಾಡುವ ಕರ್ನಾಟಕದ ಆಸೆ ಈಡೇರಿತು. ಅಭಿಮನ್ಯು ಮಿಥುನ್ ಒಟ್ಟು 6 ವಿಕೆಟ್ ಕಬಳಿಸಿದರೆ, ರೋನಿತ್ ಮೋರೆ 2 ವಿಕೆಟ್ ಪಡೆದರು.
ಸ್ಕೋರ್:
ಉತ್ತರ ಪ್ರದೇಶ 281/10 (ಆರ್ಯನ್ 109, ಸೈಫ್ 80, ಮಿಥುನ್ 6-60),
ಕರ್ನಾಟಕ 2ನೇ ದಿನದಂತ್ಯಕ್ಕೆ 168/4(ದೇವದತ್ 74, ನಿಶ್ಚಲ್ 36)