ವಿಶಾಖಪಟ್ಟಣಂ(ಡಿ.19): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಶತಕ  ಹಾಗೂ ಟೀಂ ಇಂಡಿಯಾ ಬೌಲರ್‌ಗಳ ಅದ್ಭುತ ದಾಳಿಗೆ ವಿಂಡೀಸ್ ತತ್ತರಿಸಿತು.43.3  ಓವರ್‌ಗಳಲ್ಲಿ 280 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ 107 ರನ್‌ಗಳ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸೋ ಮೂಲಕ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿತು. 

ಗೆಲುವಿಗೆ 388 ರನ್ ಬೃಹತ್ ಟಾರ್ಗೆಟ್ ಪಡೆದ  ವಿಂಡೀಸ್, ಉತ್ತಮ ಆರಂಭ ಪಡೆಯಿತು. ಇವಿನ್ ಲಿವಿಸ್ ಹಾಗೂ ಶೈ ಹೋಪ್ ಮೊದಲ ವಿಕೆಟ್‌ಗೆ 61 ರನ್ ಜೊತೆಯಾಟ ನೀಡಿದರು. ಇವಿನ್ ಲಿವಿಸ್ 30 ರನ್ ಸಿಡಿಸಿ ನಿರ್ಗಮಿಸಿದರು. ಶಿಮ್ರೊನ್ ಹೆಟ್ಮೆಯರ್ ಕೇವಲ 4 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಇದು ವಿಂಡೀಸ್ ತಂಡಕ್ಕೆ ತೀವ್ರ ಹಿನ್ನಡೆ ತಂದಿತು.

ರೋಸ್ಟನ್ ಚೇಸ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. 86 ರನ್‌ಗೆ 3 ವಿಕೆಟ್ ಕಳೆದುಕೊಂಡ ವೆಸ್ಟ್ ಇಂಡೀಸ್‌ಗೆ ಹೋಪ್ ಹಾಗೂ ನಿಕೋಲಸ್ ಪೂರನ್ ಆಸರೆಯಾದರು. ಇವರಿಬ್ಬರ ಜೊತೆಯಾಟದಿಂದ ಭಾರತ 2ನೇ ಪಂದ್ಯದ ಮೇಲೂ ಹಿಡಿತ ಸಾಧಿಸುವ ಸೂಚನೆ ನೀಡಿತು. ಆದರೆ ಮೊಹಮ್ಮದ್ ಶಮಿ ಸತತ 2 ವಿಕೆಟ್ ಕಬಳಿಸಿ ವಿಂಡೀಸ್ ಪತನಕ್ಕೆ ಕಾರಣರಾದರು.

ನಿಕೋಲಸ್ ಪೂರ್ 47 ಎಸೆತದಲ್ಲಿ 75 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ನಾಯಕ ಕೀರನ್ ಪೊಲಾರ್ಡ್ ವಿಕೆಟ್ ಕೈಚೆಲ್ಲಿದರು. 78 ರನ್ ಸಿಡಿಸಿ ಮುನ್ನಗ್ಗುತ್ತಿದ್ದ ಶೈ ಹೋಪ್, ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಜಾಸನ್ ಹೋಲ್ಡರ್ ಹಾಗೂ ಅಲ್ಜಾರಿ ಜೋಸೆಫ್ ನೆರವಾಗಲಿಲ್ಲ.

ಕೀಮೋ ಪೌಲ್ ಹಾಗೂ ಖರಿ ಪೀರೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮಿಂಚಿದರು. ಪೀರೆ 21 ರನ್ ಸಿಡಿಸಿ ಔಟಾದರು. ಆದರೆ ಪೌಲ್ ಅಬ್ಬರ ಮುಂದುವರಿಸಿದರು. ಪೌಲ್ 46 ರನ್ ಸಿಡಿಸಿ ಔಟಾಗೋ ಮೂಲಕ ವಿಂಡೀಸ್ 43.3 ಓವರ್‌ಗಳಲ್ಲಿ 280 ರನ್‌ಗೆ ಆಲೌಟ್ ಆಯಿತು. ಭಾರತ 107 ರನ್ ಗೆಲುವು ಸಾಧಿಸಿತು. ಇದೀಗ 1-1 ಅಂತರದಿಂದ ಸಮಬಲಗೊಂಡಿದೆ. ಹೀಗಾಗಿ ಡಿಸೆಂಬರ್ 22 ರಂದು ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಪೈನಲ್ ಸ್ವರೂಪ ಪಡೆದುಕೊಂಡಿದೆ.