ರಣಜಿ ಟ್ರೋಫಿ ಟೂರ್ನಿಯ ಎರಡನೇ ಪಂದ್ಯದ ಮೊದಲ ದಿನ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ಸಮಬಲದ ಹೋರಾಟ ನಡೆಸಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಹುಬ್ಬಳ್ಳಿ[ಡಿ.18]: ಕಳೆದ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಆರ್ಯನ್ ಜುಯಲ್‌ರ ಆಕರ್ಷಕ ಶತಕದ ನೆರವಿನಿಂದ, ಮಂಗಳವಾರ ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭಗೊಂಡ ಕರ್ನಾಟಕ ವಿರುದ್ಧದ ‘ಬಿ’ ಗುಂಪಿನ ರಣಜಿ ಟ್ರೋಫಿ ಪಂದ್ಯದಲ್ಲಿ, ಉತ್ತರ ಪ್ರದೇಶ ಉತ್ತಮ ಮೊತ್ತದತ್ತ ಸಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರವಾಸಿ ತಂಡ ಮೊದಲ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತು.
ತಾರಾ ಆಟಗಾರರ ಅನುಪಸ್ಥಿತಿಯೊಂದಿಗೆ ಕಣಕ್ಕಿಳಿದಿರುವ ಕರ್ನಾಟಕಕ್ಕೆ, ನಿರೀಕ್ಷಿತ ಆರಂಭ ದೊರೆಯಲಿಲ್ಲ. ಆರ್ಯನ್ ಹಾಗೂ ಅಲ್ಮಸ್ ಶೌಕತ್(22) ಮೊದಲ ವಿಕೆಟ್‌ಗೆ 56 ರನ್ ಜೊತೆಯಾಟವಾಡಿದರು. ಮೊದಲ ಅವಧಿಯಲ್ಲಿ ಉತ್ತರ ಪ್ರದೇಶ ಕೇವಲ ಒಂದು ವಿಕೆಟ್ ಕಳೆದುಕೊಂಡಿತು. ಭೋಜನ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು. 2ನೇ ಅವಧಿಯಲ್ಲಿ ಕರ್ನಾಟಕ ಬಹುಬೇಗನೆ ಯಶಸ್ಸು ಸಾಧಿಸಿತು. ಮಾಧವ್ ಕೌಶಿಕ್ (15) ಹಾಗೂ ಅಕ್ಷದೀಪ್ ನಾಥ್ (09) ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ ಆರ್ಯನ್ ಹಾಗೂ ಮೊಹಮದ್ ಸೈಫ್ ಚಹಾ ವಿರಾಮದ ವರೆಗೂ ವಿಕೆಟ್ ಬೀಳದಂತೆ ಎಚ್ಚರ ವಹಿಸಿದರು.
ರಣಜಿ ಟ್ರೋಫಿ: ಟಾಸ್ ಗೆದ್ದ ಉತ್ತರ ಪ್ರದೇಶ ಬ್ಯಾಟಿಂಗ್ ಆಯ್ಕೆ
ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ಆರ್ಯನ್, ಶತಕ ಪೂರೈಸಿ ಸಂಭ್ರಮಿಸಿದರು. ದಿನದಾಟದ ಕೊನೆ ಗಂಟೆಯಲ್ಲಿ ದಾಳಿಗಿಳಿದ ಅಭಿಮನ್ಯು ಮಿಥುನ್, ಒಂದೇ ಓವರಲ್ಲಿ 2 ವಿಕೆಟ್ ಕಬಳಿಸಿ ಕರ್ನಾಟಕ ಹಿಡಿತ ಮರಳಿ ಪಡೆಯಲು ನೆರವಾದರು. ಇನ್ನಿಂಗ್ಸ್‌ನ 84ನೇ ಓವರಲ್ಲಿ ಆರ್ಯನ್ (109 ರನ್, 251 ಎಸೆತ, 11 ಬೌಂಡರಿ) ಹಾಗೂ ರಿಂಕು ಸಿಂಗ್ (04) ಔಟಾದರು. ಸೈಫ್ 56 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಮಿಥುನ್ 3, ರೋನಿತ್ ಮೋರೆ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಕಬಳಿಸಿದರು. 2ನೇ ದಿನವಾದ ಬುಧವಾರ, 300 ರನ್‌ಗಳೊಳಗೆ ಉತ್ತರ ಪ್ರದೇಶವನ್ನು ಕಟ್ಟಿಹಾಕಲು ಕರ್ನಾಟಕ ತಂಡ ಕಾತರಿಸುತ್ತಿದೆ.
ಸ್ಕೋರ್:
ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ 232/5
(ಆರ್ಯನ್ 109, ಸೈಫ್ 56*, ಮಿಥುನ್ 3-45)
