ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡವು ಚಂಡೀಗಢ ವಿರುದ್ಧ ಇನ್ನಿಂಗ್ಸ್ ಹಾಗೂ 185 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್ ಮತ್ತು ಶಿಖರ್ ಶೆಟ್ಟಿ ಅವರ ಮಾರಕ ದಾಳಿಯ ನೆರವಿನಿಂದ, ರಾಜ್ಯ ತಂಡವು 7 ಅಂಕಗಳನ್ನು ಗಳಿಸಿ 'ಬಿ' ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.

ಹುಬ್ಬಳ್ಳಿ: 8 ಬಾರಿ ಚಾಂಪಿಯನ್‌ ಕರ್ನಾಟಕ ತಂಡ ಈ ಬಾರಿ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ 2ನೇ ಬಾರಿ ಇನ್ನಿಂಗ್ಸ್‌ ಅಂತರದ ಗೆಲುವು ಸಾಧಿಸಿ ಬೋನಸ್‌ ಅಂಕ ಪಡೆದಿದೆ. ಮಂಗಳವಾರ ಚಂಡೀಗಢ ವಿರುದ್ಧ ರಾಜ್ಯ ತಂಡ ಇನ್ನಿಂಗ್ಸ್‌ ಹಾಗೂ 185 ರನ್‌ ಭರ್ಜರಿ ಜಯಗಳಿಸಿ, 7 ಅಂಕ ತನ್ನದಾಗಿಸಿಕೊಂಡಿತು.

ಇದರೊಂದಿಗೆ ರಾಜ್ಯ ತಂಡ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ್ದು, ನಾಕೌಟ್‌ ಪ್ರವೇಶಿಸುವ ಹಾದಿ ಸುಗಮಗೊಳಿಸಿದೆ. ತಂಡ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು, 3 ಡ್ರಾದೊಂದಿದೆ 21 ಅಂಕ ಸಂಪಾದಿಸಿದೆ. ತಂಡಕ್ಕೆ ಇನ್ನೂ 2 ಪಂದ್ಯಗಳು ಬಾಕಿಯಿವೆ.

ರಾಜ್ಯ ತಂಡದ ಸ್ಪಿನ್‌ ಮೋಡಿ:

ರಾಜ್ಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 547 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದ್ದರೆ, ಅದಕ್ಕೆ ಉತ್ತರವಾಗಿ ಚಂಡೀಗಢ 2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 72 ರನ್‌ ಗಳಿಸಿತ್ತು. ಮಂಗಳವಾರ ನಾಯಕ ಮನನ್‌ ವೋಹ್ರಾ(ಔಟಾಗದೆ 106) ಶತಕ ಗಳಿಸಿದ್ದು ಬಿಟ್ಟರೆ ಚಂಡೀಗಢದ ಇತರ ಬ್ಯಾಟರ್‌ಗಳು ಶ್ರೇಯಸ್‌ ಗೋಪಾಲ್‌ ಹಾಗೂ ಶಿಖರ್‌ ಶೆಟ್ಟಿ ಸ್ಪಿನ್‌ ಮೋಡಿಗೆ ಬೆರಗಾದರು. ತಂಡ ಕೇವಲ 222 ರನ್‌ಗೆ ಆಲೌಟಾಗಿ, 325 ರನ್‌ಗಳ ಭಾರೀ ಹಿನ್ನಡೆ ಅನುಭವಿಸಿತು. ಅಮೋಘ ದಾಳಿ ನಡೆಸಿದ ಶ್ರೇಯಸ್ 7 ವಿಕೆಟ್ ಪಡೆದರೆ, ಶಿಖರ್‌ 2, ಮೊಹ್ಸಿನ್‌ ಖಾನ್‌ 1 ವಿಕೆಟ್‌ ಪಡೆದರು.

ದೊಡ್ಡ ಮುನ್ನಡೆ ಪಡೆದ ರಾಜ್ಯ ತಂಡ, ಚಂಡೀಗಢ ಮೇಲೆ ಫಾಲೋ-ಆನ್‌ ಹೇರಿ 2ನೇ ಇನ್ನಿಂಗ್ಸ್‌ನ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮತ್ತೆ ರಾಜ್ಯದ ಸ್ಪಿನ್ನರ್‌ಗಳನ್ನು ಎದುರಿಸಲು ಪರದಾಡಿದ ಚಂಡೀಗಢ ಕೇವಲ 140ಕ್ಕೆ ಆಲೌಟಾಯಿತು. ಶಿಖರ್‌ ಚೊಚ್ಚಲ 5 ವಿಕೆಟ್ ಗೊಂಚಲು ಪಡೆದರೆ, ಶ್ರೇಯಸ್‌ 3 ವಿಕೆಟ್‌ ಕಿತ್ತರು. ಪಂದ್ಯದಲ್ಲಿ ಶ್ರೇಯಸ್‌ ಒಟ್ಟು 10, ಶಿಖರ್‌ 5 ವಿಕೆಟ್‌ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಔಟಾಗದೆ 227 ರನ್ ಸಿಡಿಸಿದ್ದ ಆರ್‌.ಸ್ಮರಣ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್: ಕರ್ನಾಟಕ 8 ವಿಕೆಟ್‌ಗೆ 547(ಡಿಕ್ಲೇರ್), ಚಂಡೀಗಢ ಮೊದಲ ಇನ್ನಿಂಗ್ಸ್‌ 222/10 (ಮನನ್‌ ವೋಹ್ರಾ ಔಟಾಗದೆ 106, ಶ್ರೇಯಸ್‌ 7-73, ಶಿಖರ್‌ 2-43), 2ನೇ ಇನ್ನಿಂಗ್ಸ್‌ 140/10 (ಶಿವಂ ಭಾಂಬ್ರಿ 43, ಶಿಖರ್‌ 5-61, ಶ್ರೇಯಸ್‌ 3-45)

ಪಂದ್ಯಶ್ರೇಷ್ಠ: ರವಿಚಂದ್ರನ್‌ ಸ್ಮರಣ್‌

ಮುಂದಿನ ಪಂದ್ಯಕ್ಕೆ 2 ತಿಂಗಳು ಬಿಡುವು!

ರಾಜ್ಯ ತಂಡ ಗುಂಪು ಹಂತದ ಇನ್ನೆರಡು ಪಂದ್ಯಗಳನ್ನು 2 ತಿಂಗಳ ಬಳಿಕ ಆಡಲಿದೆ. ನ.26ಕ್ಕೆ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ಆರಂಭಗೊಳ್ಳಲಿದ್ದು, ಡಿ.18ಕ್ಕೆ ಕೊನೆಗೊಳ್ಳಲಿದೆ. ಬಳಿಕ ಡಿ.24ರಿಂದ 2026ರ ಜ.18ರ ವರೆಗೆ ವಿಜಯ್‌ ಹಜಾರೆ ಏಕದಿನ ಟೂರ್ನಿ ನಡೆಯಲಿದೆ. ಹೀಗಾಗಿ ರಣಜಿಗೆ 2 ತಿಂಗಳ ಬಿಡುವು ಇರಲಿದೆ. ಜ.22ರಿಂದ ಮತ್ತೆ ರಣಜಿ ಪುನಾರಂಭಗೊಳ್ಳಲಿದೆ. ರಾಜ್ಯ ತಂಡ ಜ.22ರಿಂದ ಮಧ್ಯಪ್ರದೇಶ, ಜ.29ರಿಂದ ಪಂಜಾಬ್‌ ವಿರುದ್ಧ ಸೆಣಸಲಿದೆ.