2025-26ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತನ್ನ ಮೊದಲ ಗೆಲುವು ದಾಖಲಿಸಿದ್ದು, ಕೇರಳ ವಿರುದ್ಧ ಇನ್ನಿಂಗ್ಸ್ ಮತ್ತು 164 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಕರುಣ್ ನಾಯರ್ ಅವರ ದ್ವಿಶತಕ ಮತ್ತು ಮೊಹ್ಸಿನ್ ಖಾನ್ ಅವರ 6 ವಿಕೆಟ್‌ಗಳ ಪ್ರದರ್ಶನದಿಂದಾಗಿ, ಕರ್ನಾಟಕಕ್ಕೆ ಸುಲಭ ಗೆಲುವು ಸಿಕ್ಕಿದೆ.
ತಿರುವನಂತಪುರಂ: ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಕರ್ನಾಟಕ 2025-26ನೇ ಸಾಲಿನಲ್ಲಿ ಮೊದಲ ಗೆಲುವು ದಾಖಲಿಸಿದೆ. ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ತಾನಾಡಿದ ಮೂರನೇ ಪಂದ್ಯದಲ್ಲಿ ಮೊದಲ ಗೆಲುವು ದಾಖಲಿಸಿದೆ
ಹೌದು, 348 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟು ಫಾಲೋ-ಆನ್‌ಗೆ ಒಳಗಾದ ಕೇರಳ, ನಾಲ್ಕನೇ ದಿನದ ಎರಡನೇ ಇನ್ನಿಂಗ್ಸ್‌ನಲ್ಲಿ 184 ರನ್‌ಗಳಿಗೆ ಆಲೌಟ್ ಆಗಿ, ಇನ್ನಿಂಗ್ಸ್ ಮತ್ತು 164 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು. 11ನೇ ಆಟಗಾರನಾಗಿ ಬಂದು 39 ರನ್ ಗಳಿಸಿ ಅಜೇಯರಾಗಿ ಉಳಿದ ಏಡನ್ ಆಪಲ್ ಟಾಮ್ ಕೇರಳದ ಟಾಪ್ ಸ್ಕೋರರ್ ಎನಿಸಿದರು. ಆರಂಭಿಕ ಆಟಗಾರ ಕೃಷ್ಣಪ್ರಸಾದ್ 33 ರನ್ ಗಳಿಸಿದರೆ, ಅಹ್ಮದ್ ಇಮ್ರಾನ್ 23, ಬಾಬಾ ಅಪರಾಜಿತ್ 19 ಮತ್ತು ಸಚಿನ್ ಬೇಬಿ 12 ರನ್ ಗಳಿಸಿ ಔಟಾದರು.
ನಾಯಕ ಮೊಹಮ್ಮದ್ ಅಜರುದ್ದೀನ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 15 ರನ್ ಗಳಿಸಲಷ್ಟೇ ಶಕ್ತರಾದರು. ಕರ್ನಾಟಕ ಪರ ಮೊಹ್ಸಿನ್ ಖಾನ್ 6 ವಿಕೆಟ್ ಪಡೆದರೆ, ವಿದ್ಯುತ್ ಕಾವೇರಪ್ಪ ಎರಡು ವಿಕೆಟ್ ಕಿತ್ತರು. ಈ ಗೆಲುವಿನೊಂದಿಗೆ ಎಲೈಟ್ ಗ್ರೂಪ್ 'ಬಿ'ಯಲ್ಲಿ ಕರ್ನಾಟಕ 11 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದರೆ, ಎರಡು ಅಂಕಗಳನ್ನು ಹೊಂದಿರುವ ಕೇರಳ ಏಳನೇ ಸ್ಥಾನದಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಪರ ದ್ವಿಶತಕ ಸಿಡಿಸಿದ ಕರುಣ್ ನಾಯರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕೇರಳ ಆರಂಭಿಕ ಕುಸಿತ
ವಿಕೆಟ್ ನಷ್ಟವಿಲ್ಲದೆ 10 ರನ್‌ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ಕೇರಳಕ್ಕೆ, ಸ್ಕೋರ್ 19 ರನ್ ತಲುಪಿದಾಗ ಮೊದಲ ಆಘಾತ ಎದುರಾಯಿತು. ಮೂರನೇ ದಿನ ನೈಟ್ ವಾಚ್‌ಮನ್ ಆಗಿ ಕ್ರೀಸ್‌ಗೆ ಬಂದಿದ್ದ ನಿಧೀಶ್ ಎಂಡಿ (9) ಅವರನ್ನು ವಿದ್ಯುತ್ ಕಾವೇರಪ್ಪ ಔಟ್ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ಅಕ್ಷಯ್ ಚಂದ್ರನ್ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿ ಕಾವೇರಪ್ಪ ಕೇರಳಕ್ಕೆ ಡಬಲ್ ಶಾಕ್ ನೀಡಿದರು. ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಕೃಷ್ಣಪ್ರಸಾದ್ ಹೋರಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ 15 ರನ್ ಗಳಿಸಿದ್ದ ಅಜರುದ್ದೀನ್ ಅವರನ್ನು ಶಿಖರ್ ಶೆಟ್ಟಿ ಪೆವಿಲಿಯನ್‌ಗೆ ಕಳುಹಿಸಿದರು. ಇದರಿಂದ ಕೇರಳ 40-3ಕ್ಕೆ ಕುಸಿಯಿತು. ಅಹ್ಮದ್ ಇಮ್ರಾನ್ ಮತ್ತು ಕೃಷ್ಣಪ್ರಸಾದ್ ನಾಲ್ಕನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟವಾಡಿ ಕೇರಳಕ್ಕೆ ಭರವಸೆ ಮೂಡಿಸಿದರೂ, ಕೃಷ್ಣ ಪ್ರಸಾದ್ (33) ಮತ್ತು ಅಹ್ಮದ್ ಇಮ್ರಾನ್ (23) ಅವರನ್ನು ಔಟ್ ಮಾಡಿದ ಮೊಹ್ಸಿನ್ ಖಾನ್ ಡಬಲ್ ಆಘಾತ ನೀಡಿದರು. ಇದರಿಂದ ಕೇರಳ 106-5ಕ್ಕೆ ಕುಸಿಯಿತು.
ಬಾಬಾ ಅಪರಾಜಿತ್-ಸಚಿನ್ ಬೇಬಿ ಜೋಡಿಯ ಮೇಲೆ ಕೇರಳದ ಕೊನೆಯ ಭರವಸೆ ಇತ್ತು. ಆದರೆ, ಸ್ಕೋರ್ 130 ಆಗಿದ್ದಾಗ ಸಚಿನ್ ಬೇಬಿ (12) ಅವರನ್ನು ಮೊಹ್ಸಿನ್ ಖಾನ್ ಬೌಲ್ಡ್ ಮಾಡುವುದರೊಂದಿಗೆ ಆ ಭರವಸೆಯೂ ಕೊನೆಗೊಂಡಿತು. ಮೊದಲ ಇನ್ನಿಂಗ್ಸ್‌ನ ಟಾಪ್ ಸ್ಕೋರರ್ ಬಾಬಾ ಅಪರಾಜಿತ್ (19) ಅವರನ್ನು ಮೊಹ್ಸಿನ್ ಖಾನ್ ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ನಂತರ ಶಾನ್ ರೋಜರ್ ಅವರನ್ನು ಬೌಲ್ಡ್ ಮಾಡಿದ ಮೊಹ್ಸಿನ್ ಖಾನ್ ಐದು ವಿಕೆಟ್ ಗೊಂಚಲು ಪೂರೈಸಿದರು. ವೈಶಾಖ್ ಚಂದ್ರನ್ (4) ಅವರನ್ನು ಶ್ರೇಯಸ್ ಗೋಪಾಲ್ ಔಟ್ ಮಾಡಿದರೆ, ಕನ್ಕಷನ್ ಸಬ್ ಆಗಿ ಬಂದ ಏಡನ್ ಆಪಲ್ ಟಾಮ್, ಹರಿಕೃಷ್ಣನ್ (16) ಜೊತೆಗೂಡಿ ಹೋರಾಡಿದರೂ, ಕೇರಳದ ಸೋಲಿನ ಅಂತರವನ್ನು ಕಡಿಮೆ ಮಾಡಲು ಮಾತ್ರ ಸಾಧ್ಯವಾಯಿತು. ಕೊನೆಯ ವಿಕೆಟ್‌ಗೆ ಹರಿಕೃಷ್ಣನ್ ಮತ್ತು ಏಡನ್ ಆಪಲ್ ಟಾಮ್ 44 ರನ್ ಸೇರಿಸಿದರು.
ಅಗ್ರಸ್ಥಾನಕ್ಕೇರಿದ ಕರ್ನಾಟಕ
ಇನ್ನಿಂಗ್ಸ್ ಜಯ ಸಾಧಿಸಿದ ಕರ್ನಾಟಕಕ್ಕೆ ಬೋನಸ್ ಪಾಯಿಂಟ್ ಸೇರಿ 7 ಅಂಕಗಳು ಸಿಕ್ಕರೆ, ಕೇರಳಕ್ಕೆ ಯಾವುದೇ ಅಂಕ ಸಿಗಲಿಲ್ಲ. ಋತುವಿನ ಮೊದಲ ಎರಡು ಪಂದ್ಯಗಳಲ್ಲಿ ಮುನ್ನಡೆ ಬಿಟ್ಟುಕೊಟ್ಟು ಡ್ರಾ ಮಾಡಿಕೊಂಡಿದ್ದ ಕೇರಳಕ್ಕೆ ಇದುವರೆಗೆ ಕೇವಲ ಎರಡು ಅಂಕಗಳಿವೆ. ಎಂಟು ತಂಡಗಳಿರುವ ಎಲೈಟ್ ಗ್ರೂಪ್ 'ಬಿ'ಯಲ್ಲಿ ಹಾಲಿ ರನ್ನರ್ ಅಪ್ ಕೇರಳ ಸದ್ಯ ಏಳನೇ ಸ್ಥಾನದಲ್ಲಿದೆ.
ಸ್ಕೋರ್: ಕರ್ನಾಟಕ 586-5, ಕೇರಳ 238, 184.
