ರಣಜಿ ಟ್ರೋಫಿ: ಬಂಗಾಳ ವಿರುದ್ಧ ತವರಿನಲ್ಲೇ ಸಂಕಷ್ಟದಲ್ಲಿ ಕರ್ನಾಟಕ!

ರಣಜಿ ಟ್ರೋಫಿ ಟೂರ್ನಿಯಲ್ಲಿ ಆತಿಥೇಯ ಕರ್ನಾಟಕ ತಂಡವು ತವರಿನಲ್ಲಿಯೇ ಬಂಗಾಳ ಎದುರು ಸಂಕಷ್ಟಕ್ಕೆ ಸಿಲುಕಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Ranji Trophy Karnataka Cricket Team in trouble at home against Bengal kvn

• ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು: ಬಂಗಾಳ ವಿರುದ್ಧ ರಣಜಿ ಟ್ರೋಫಿ ಕ್ರಿಕೆಟ್‌ನ ತವರಿನ ಪಂದ್ಯದಲ್ಲೇ ಕರ್ನಾಟಕ ಸಂಕಷ್ಟಕ್ಕೊಳಗಾಗಿದೆ. ಈ ಬಾರಿ ಟೂರ್ನಿಯಲ್ಲಿ ನೀರಸ ಆರಂಭ ಪಡೆದಿರುವ ರಾಜ್ಯ ತಂಡ ಬಂಗಾಳ ವಿರುದ್ಧ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದರೂ,ತೀವ್ರ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಹಿನ್ನಡೆ ಅನುಭವಿಸಿದೆ.

ಬಂಗಾಳ ಮೊದಲ ಇನ್ನಿಂಗ್ಸ್‌ನಲ್ಲಿ 301 ರನ್‌ಗೆ ಆಲೌಟಾಗಿದ್ದು, ಕರ್ನಾಟಕ 2ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 155 ರನ್ ಕಲೆಹಾಕಿದೆ. ತಂಡ ಇನ್ನೂ 146 ರನ್ ಹಿನ್ನಡೆಯಲ್ಲಿದ್ದು, 3ನೇ ದಿನವಾದ ಶುಕ್ರವಾರ ಅಭೂಪೂರ್ವ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ. 

ಕೌಶಿಕ್ ಮ್ಯಾಜಿಕ್: ಮೊದಲ ದಿನ 5 ವಿಕೆಟ್‌ಗೆ 249 ರನ್ ಕಲೆಹಾಕಿದ್ದ ಬಂಗಾಳ ಗುರುವಾರ ಮೊದಲ ಅವಧಿಯಲ್ಲೇ ಅಲೌಟ್ ಆಯಿತು. ದಿನದಾಟದ 2ನೇ ಓವರ್‌ನಲ್ಲೇ ಶಾಬಾಜ್ ಅಹ್ಮದ್ (59)ರನ್ನು ಕೌಶಿಕ್ ಪೆವಿಲಿಯನ್‌ಗೆ ಅಟ್ಟಿದರು. ವೃದ್ಧಿಮಾನ್ ಸಾಹ 6 ರನ್ ಗಳಿಸಿದ್ದಾಗ ಅಭಿಲಾಶ್ ಶೆಟ್ಟಿ ಎಸೆತದಲ್ಲಿ ಸ್ಮರಣೆಗೆ ಕ್ಯಾಚಿತ್ತರು. ತಂಡದ ಕೊನೆ 3 ವಿಕೆಟ್ 15 ರನ್ ಅಂತರದಲ್ಲಿ ಉರುಳಿತು. ಕೌಶಿಕ್ 5 ವಿಕೆಟ್ ಗೊಂಚಲು ಪಡೆದರೆ, ಶ್ರೇಯಸ್ ಗೋಪಾಲ್ 3, ಅಭಿಲಾಶ್ 2 ವಿಕೆಟ್ ಕಿತ್ತರು.

ಮತ್ತಷ್ಟು ಬಲಿಷ್ಠ ಟೀಮ್ ಕಟ್ಟಲು ಆರೆಂಜ್ ಆರ್ಮಿ ರೆಡಿ: ಈ 5 ಆಟಗಾರರ ಮೇಲೆ ಕಣ್ಣಿಟ್ಟಿರುವ ಸನ್‌ರೈಸರ್ಸ್‌ ಹೈದರಾಬಾದ್!

ಮಯಾಂಕ್, ಮನೀಶ್ ನಿರಾಸೆ: ಬಳಿಕ ಇನ್ನಿಂಗ್ಸ್ ಆರಂಭಿಸಿದ ಆರಂಭಿಕ ಆಘಾತಕ್ಕೆ ಒಳಗಾಯಿತು. ನಿಕಿನ್ ಜೋಸ್ ಹಣೆಗೆ ಗಾಯವಾಗಿರುವ ಕಾರಣ ಸುಪ್ತಾವಸ್ಥೆ ಬದಲಿ ಆಟಗಾರನಾಗಿ ಕಿಶನ್ ಬೆದರೆ ಆರಂಭಿಕನಾಗಿ ಮಯಾಂಕ್‌ ಅಗರ್‌ವಾಲ್ ಜೊತೆ ಕಣಕ್ಕಿಳಿದು, 23 ರನ್ ಗಳಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರ ನಡುವೆ 34 ರನ್ ಮೂಡಿಬಂತು. ಬಳಿಕ ಕೇವಲ 29 ರನ್ ಅಂತರದಲ್ಲಿ ರಾಜ್ಯ ತಂಡ ನಾಲ್ವರು ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿತು. 

ಸುಜಯ್ ಸತೇರಿ 10, ಮಯಾಂಕ್ ಅಗರ್‌ವಾಲ್ 17 ರನ್‌ಗೆ ವಿಕೆಟ್ ಒಪ್ಪಿಸಿದರು. ಮಯಾಂಕ್ ಔಟಾದ ಮುಂದಿನ ಓವರ್‌ನಲ್ಲೇ ಉಪನಾಯಕ ಮನೀಶ್ ಪಾಂಡೆ, ರನ್ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ವೇಗವಾಗಿ ಬ್ಯಾಟ್ ಬೀಸುತ್ತಿದ್ದ ಸ್ಮರಣ್ ಇನ್ನಿಂಗ್ಸ್ 26 ರನ್‌ಗೆ ಕೊನೆಯಾಯಿತು.

100 ರನ್‌ಗೂ ಮೊದಲೇ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾದ ರಾಜ್ಯಕ್ಕೆ ಅಭಿನವ್ ಮನೋಹರ್ - ಶ್ರೇಯಸ್ ಗೋಪಾಲ್ ಆಸರೆಯಾದರು. ಮುರಿಯದ 6ನೇ ವಿಕೆಟ್‌ಗೆ ಈ ಜೋಡಿ 58 ರನ್ ಸೇರಿಸಿತು. ಅಭಿನವ್‌ ಔಟಾಗದೆ 50 (73 ಎಸೆತ), ಶ್ರೇಯಸ್ ಔಟಾಗದೆ 23 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ರಾಜ್ಯ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಬೇಕಿದ್ದರೆ ಅಭಿನವ್, ಶ್ರೇಯಸ್‌ರಿಂದ ಬೃಹತ್ ಜೊತೆಯಾಟ ಅಗತ್ಯವಿದೆ.

ರಣಜಿಯಲ್ಲಿ ಕರ್ನಾಟಕ vs ಬಂಗಾಳ ಸಮಬಲದ ಹೋರಾಟ

ಸ್ಕೋರ್: ಬಂಗಾಳ 301/10 (ಶಾಬಾಜ್ 59, 5-38, ಶ್ರೇಯಸ್ 3-87, ಅಭಿಲಾಶ್ 2-62), ಕರ್ನಾಟಕ 155/5 (2ನೇ ದಿನದಂತ್ಯಕ್ಕೆ) (ಅಭಿನವ್ 50 *, ಸ್ಮರಣ್ 26, ಶ್ರೇಯಸ್ 23 * ವಿವೇಕ್ 2-44, ಸೂರಜ್ ಜೈಸ್ವಾಲ್ 2-53)

ಶ್ರೇಯಸ್‌ ಅಯ್ಯರ್ ಸತತ 2ನೇ ಶತಕ: ಔಟಾಗದೆ 152

ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿರುವ ತಾರಾ ಆಟಗಾರ ಶ್ರೇಯಸ್‌ ಅಯ್ಯರ್‌, ರಣಜಿ ಕ್ರಿಕೆಟ್‌ನಲ್ಲಿ ಸತತ 2ನೇ ಶತಕ ಬಾರಿಸಿದರು. ಕಳೆದ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ 142 ರನ್‌ ಸಿಡಿಸಿದ್ದ ಮುಂಬೈ ತಂಡದ ಶ್ರೇಯಸ್‌, ಬುಧವಾರ ಒಡಿಶಾ ವಿರುದ್ಧ ಔಟಾಗದೆ 152 ರನ್‌ ಬಾರಿಸಿದರು. 164 ಎಸೆತಗಳನ್ನು ಎದುರಿಸಿದ ಅವರು 18 ಬೌಂಡರಿ, 4 ಸಿಕ್ಸರ್‌ಗಳನ್ನೂ ಸಿಡಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶ್ರೇಯಸ್‌ರ 15ನೇ ಶತಕ. ಮುಂಬೈ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ಗೆ 385 ರನ್‌ ಕಲೆಹಾಕಿದೆ.

Latest Videos
Follow Us:
Download App:
  • android
  • ios