ಭಾರತ-ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್‌ ಡ್ರಾನಲ್ಲಿ ಅಂತ್ಯಮಳೆಗೆ ಆಹುತಿಯಾದ ಐದನೇ ದಿನದಾಟ1-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

ಪೋರ್ಟ್‌ ಆಫ್‌ ಸ್ಪೇನ್‌(ಜು.25): ಭಾರತ-ವಿಂಡೀಸ್‌ ನಡುವಿನ 2ನೇ ಟೆಸ್ಟ್‌ನ 5ನೇ ದಿನದಾಟಕ್ಕೆ ಮಳೆ ಅಡ್ಡಿಪಡಿಸಿತು. ಭಾರೀ ಮಳೆಯಿಂದಾಗಿ ದಿನದಾಟದ ಮೊದಲ ಅವಧಿ ವ್ಯರ್ಥವಾಯಿತು. ಭೋಜನ ವಿರಾಮದ ವರೆಗೂ ಭಾರತೀಯ ಆಟಗಾರರು ಮೈದಾನಕ್ಕೇ ಆಗಮಿಸದೆ ಹೋಟೆಲ್‌ನಲ್ಲೇ ಉಳಿದರು. ಇದಾದ ಬಳಿಕವೂ ನಿರಂತರವಾಗಿ ಮಳೆ ಸುರಿದಿದ್ದರಿಂದ ಎರಡನೇ ಟೆಸ್ಟ್ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಈ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯ 1-0 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಗೆಲ್ಲಲು 365 ರನ್‌ ಗುರಿ ಪಡೆದ ಆತಿಥೇಯ ವಿಂಡೀಸ್‌, 4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 76 ರನ್‌ ಗಳಿಸಿತ್ತು. ಕೊನೆಯ ದಿನ ವಿಂಡೀಸ್‌ ಇನ್ನೂ 289 ರನ್‌ ಗಳಿಸಬೇಕಿತ್ತು. ಭಾರತಕ್ಕೆ ಗೆಲ್ಲಲು 8 ವಿಕೆಟ್‌ ಅಗತ್ಯವಿತ್ತು. ಭಾರತ 4ನೇ ದಿನವಾದ ಭಾನುವಾರ 2ನೇ ಇನ್ನಿಂಗ್ಸ್‌ನಲ್ಲಿ ಸ್ಫೋಟಕ ಆಟವಾಡಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಮಳೆಯನ್ನು ಗಮನದಲ್ಲಿಟ್ಟುಕೊಂಡೇ ಭಾರತೀಯರು 7.5ರ ರನ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದರು.

Ind vs WI 2nd Test: ಟೀಂ ಇಂಡಿಯಾದ ತಾಳ್ಮೆ ಪರೀಕ್ಷಿಸಿದ ವಿಂಡೀಸ್‌..!

ಕೇವಲ 24 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 181 ರನ್‌ ಕಲೆಹಾಕಿ ಭಾರತ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಇಶಾನ್‌ ಕಿಶನ್‌ ಚೊಚ್ಚಲ ಟೆಸ್ಟ್‌ ಅರ್ಧಶತಕ ಬಾರಿಸಿದರು. 34 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ನೊಂದಿಗೆ 52 ರನ್‌ ಗಳಿಸಿದರು. ಇಶಾನ್‌ರ ಅರ್ಧಶತಕ ಪೂರ್ತಿಗೊಳ್ಳುತ್ತಿದ್ದಂತೆ ನಾಯಕ ರೋಹಿತ್‌ ಇನ್ನಿಂಗ್ಸ್‌ ಡಿಕ್ಲೇರ್‌ ಘೋಷಿಸಿದರು.

2ನೇ ಇನ್ನಿಂಗ್ಸ್‌ ಆರಂಭಿಸಿದ ವಿಂಡೀಸ್‌ 44 ರನ್‌ ಗಳಿಸುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡಿತು. ನಾಯಕ ಕ್ರೇಗ್‌ ಬ್ರಾಥ್‌ವೇಟ್‌(28) ಹಾಗೂ ಕಿರ್ಕ್‌ ಮೆಕೆನ್ಜಿ(0) ಇಬ್ಬರನ್ನೂ ಅಶ್ವಿನ್‌ ಪೆವಿಲಿಯನ್‌ಗಟ್ಟಿದರು. ತೇಜನಾರಾಯಣ ಚಂದ್ರಪಾಲ್‌ ಹಾಗೂ ಜರ್ಮೈನ್‌ ಬ್ಲ್ಯಾಕ್‌ವುಡ್‌ ಕೊನೆಯ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದರು.

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ: ಅಭಿನವ್‌, ಮಯಾಂಕ್‌ಗೆ ಬಂಪರ್‌! ಯಾವ ಆಟಗಾರರು ಯಾವ ತಂಡಕ್ಕೆ?

ಸ್ಕೋರ್‌: ಭಾರತ 438 ಹಾಗೂ 181/2 ಡಿ., (ರೋಹಿತ್‌ 57, ಕಿಶನ್‌ 52*, ಗೇಬ್ರಿಯಲ್‌ 1-33), 
ವಿಂಡೀಸ್‌ 255 ಹಾಗೂ 76/2(ಬ್ರಾಥ್‌ವೇಟ್‌ 28, ಅಶ್ವಿನ್‌ 2-33)

ಪಂತ್‌ ಬ್ಯಾಟ್‌ ಬಳಸಿ ಕಿಶನ್‌ ಅರ್ಧಶತಕ!

ಇಶಾನ್‌ ಕಿಶನ್‌ ತಮ್ಮ ಆಪ್ತ ಸ್ನೇಹಿತ ರಿಷಭ್‌ ಪಂತ್‌ರ ಬ್ಯಾಟ್‌ ಬಳಸಿ ಟೆಸ್ಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು. ಬಳಿಕ ಪಂತ್‌ರಿಂದ ಪಡೆದ ಬ್ಯಾಟಿಂಗ್‌ ಸಲಹೆಗಳ ಬಗ್ಗೆ ಕಿಶನ್‌ ಖುಷಿಯಿಂದ ಹೇಳಿಕೊಂಡರು.

500 ವಿಕೆಟ್‌

ಅಶ್ವಿನ್‌ ಹಾಗೂ ಜಡೇಜಾ ಒಟ್ಟಿಗೆ ಟೆಸ್ಟ್‌ನಲ್ಲಿ 500 ವಿಕೆಟ್‌ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ 2ನೇ ಜೋಡಿ. ಕುಂಬ್ಳೆ-ಹರ್ಭಜನ್‌ ಜೊತೆಯಲ್ಲಿ ಆಡಿದಾಗ ಒಟ್ಟು 501 ವಿಕೆಟ್‌ ಪಡೆದಿದ್ದರು.