ಬೆಂಗಳೂರು(ಫೆ.19): ಭಾರತದ ದಿಗ್ಗಜ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌ ದ್ರಾವಿಡ್‌, ಅಂಡರ್‌ 14 ವಯೋಮಿತಿಯ ಕ್ರಿಕೆಟ್‌ನಲ್ಲಿ 2 ತಿಂಗಳಲ್ಲಿ 2 ದ್ವಿಶತಕ ಸಿಡಿಸಿದ್ದಾರೆ. 

ಭರ್ಜರಿ ದ್ವಿಶತಕ ಬಾರಿಸಿದ ದ್ರಾವಿಡ್‌ ಪುತ್ರ ಸಮಿತ್‌

ಈ ಮೂಲಕ ತಂದೆಯ ಹಾದಿಯಲ್ಲಿಯೇ ಸಾಗುವ ಮೂಲಕ ಸಮಿತ್‌, ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅಂಡರ್‌ 14 ಬಿಟಿಆರ್‌ ಶೀಲ್ಡ್‌, ದ್ವಿತೀಯ ದರ್ಜೆ ಕ್ರಿಕೆಟ್‌ ಟೂರ್ನಿಯಲ್ಲಿ ಕಳೆದ ಶನಿವಾರ ನಡೆದ ಪಂದ್ಯದಲ್ಲಿ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆಯ ಸಮಿತ್‌, ಶ್ರೀ ಕುಮಾರನ್ಸ್‌ ಶಾಲೆ ವಿರುದ್ಧ 146 ಎಸೆತಗಳಲ್ಲಿ 33 ಬೌಂಡರಿಗಳ ನೆರವಿನಿಂದ ದ್ವಿಶತಕ ಸಿಡಿಸಿದರು. ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆ 50 ಓವರಲ್ಲಿ 3 ವಿಕೆಟ್‌ಗೆ 377 ರನ್‌ ಕಲೆಹಾಕಿತು. ಬೌಲಿಂಗ್‌ನಲ್ಲೂ ಮಿಂಚಿದ ಸಮಿತ್‌ 2 ವಿಕೆಟ್‌ ಕಿತ್ತರು. ಮಲ್ಯ ಅದಿತಿ ಶಾಲೆ 267 ರನ್‌ಗಳಿಂದ ಜಯಿಸಿತು. 

ಅಂಡರ್‌-14 ಕ್ರಿಕೆಟ್‌: ಕರ್ನಾಟಕಕ್ಕೆ ನೆರವಾದ ಸಮಿತ್‌ ದ್ರಾವಿಡ್‌ ಅಜೇಯ ಶತಕ!

2019ರ ಡಿ.20 ರಂದು ನಡೆದಿದ್ದ ಅಂಡರ್‌ 14 ಅಂತರ ವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಉಪಾಧ್ಯಕ್ಷರ ಇಲೆವೆನ್‌ ಪರ ಆಡಿದ್ದ ಸಮಿತ್‌ ಧಾರಾವಾಡ ವಲಯದ ವಿರುದ್ಧ 201 ರನ್‌ ಗಳಿಸಿದ್ದರು. ಮಾತ್ರವಲ್ಲ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ತೋರುವ ಮೂಲಕ ಆಲ್ರೌಂಡ್ ಆಟದ ಮೂಲಕ ಮಿಂಚಿದ್ದರು.