ಬೌಲರ್‌ಗಳ ಶಿಸ್ತುಬದ್ದ ದಾಳಿಯ ಹೊರತಾಗಿಯೂ ಬ್ಯಾಟರ್‌ಗಳು ಕೈಕೊಟ್ಟಿದ್ದರಿಂದ ಆರ್‌ಸಿಬಿ ತವರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಕೇವಲ 96 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್, 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಟಿಮ್ ಡೇವಿಡ್ ಅಜೇಯ 50 ರನ್ ಸಿಡಿಸಿದರೂ ಆರ್‌ಸಿಬಿ ಸೋಲಿನಿಂದ ಪಾರಾಗಲಿಲ್ಲ.

ಬೆಂಗಳೂರು: ಬೌಲರ್‌ಗಳ ಶಿಸ್ತುಬದ್ದ ದಾಳಿಯ ಹೊರತಾಗಿಯೂ, ಬ್ಯಾಟರ್‌ಗಳು ಕೈಕೊಟ್ಟಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. 14 ಓವರ್‌ನಲ್ಲಿ ಗೆಲ್ಲಲು ಕೇವಲ 96 ರನ್ ಗುರಿ ಪಡೆದ ಪಂಜಾಬ್ ಕಿಂಗ್ಸ್‌ ಇನ್ನೂ 11 ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟರೇ, ಆರ್‌ಸಿಬಿ ನಾಲ್ಕನೇ ಸ್ಥಾನಕ್ಕೆ ಜಾರಿದೆ.

ಗೆಲ್ಲಲು ಕೇವಲ 96 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್‌ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. 22 ರನ್ ಗಳಿದ್ದಾಗ ಪ್ರಭ್‌ಸಿಮ್ರನ್ ಸಿಂಗ್ ವೇಗಿ ಭುವಿಗೆ ವಿಕೆಟ್ ಒಪ್ಪಿಸಿದರೆ, ತಂಡ 32 ರನ್ ಗಳಿಸಿದ್ದಾಗ ಮತ್ತೋರ್ವ ಆರಂಭಿಕ ಬ್ಯಾಟರ್ ಪ್ರಿಯಾನ್ಶ್‌ ಆರ್ಯಾ ಅವರನ್ನು ಜೋಶ್ ಹೇಜಲ್‌ವುಡ್‌ ಬಲಿ ಪಡೆದರು. ಇನ್ನು ಶ್ರೇಯಸ್ ಅಯ್ಯರ್ 7 ರನ್ ಗಳಿಸಿದಾಗ ಆರ್‌ಸಿಬಿ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯಿತು. ಇದರ ಬೆನ್ನಲ್ಲೆ ಜೋಶ್ ಇಂಗ್ಲಿಶ್ ಕೂಡಾ(14) ಹೇಜಲ್‌ವುಡ್‌ಗೆ ಮೂರನೇ ಬಲಿಯಾದರು. ಆದರೆ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ನೆಹಾಲ್ ವದೇರಾ 19 ಎಸೆತಗಳನ್ನು ಎದುರಿಸಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಸಹಿತ ಅಜೇಯ 33 ರನ್ ಸಿಡಿಸುವ ಮೂಲಕ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು. 

ಮಳೆಯಿಂದ 14 ಓವರ್ ಪಂದ್ಯ, ತವರಿನಲ್ಲಿ ಮತ್ತೆ ಟಾಸ್ ಸೋತ ಆರ್‌ಸಿಬಿ

Scroll to load tweet…

ಇದಕ್ಕೂ ಮೊದಲು ಪಂದ್ಯ ಆರಂಭಕ್ಕೆ ಮಳೆರಾಯ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ತಲಾ 14 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ತಡ ಮಾಡದೇ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಲ್ಕು ಓವರ್‌ಗಳ ಪವರ್ ಪ್ಲೇ ಬೌಲಿಂಗ್ ಸದುಪಯೋಗ ಪಡಿಸಿಕೊಳ್ಳುವಲ್ಲಿ ಪಂಜಾಬ್ ಬೌಲರ್‌ಗಳು ಯಶಸ್ವಿಯಾದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಫಿಲ್ ಸಾಲ್ಟ್ ಅವರನ್ನು ಮೊದಲ ಓವರ್‌ನಲ್ಲೇ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡಾ ಕೇವಲ ಒಂದು ರನ್ ಗಳಿಸಿ ಅರ್ಶದೀಪ್‌ಗೆ ವಿಕೆಟ್ ಒಪ್ಪಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ 4 ರನ್‌ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. 26 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ(2), ಕೃನಾಲ್ ಪಾಂಡ್ಯ(1) ಹಾಗೂ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಕನ್ನಡಿಗ ಮನೋಜ್ ಭಾಂಡಗೆ (1) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ನಾಯಕ ರಜತ್ ಪಾಟೀದಾರ್ 18 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಸಿಕ್ಸರ್ ಸಹಿತ 23 ರನ್ ಗಳಿಸಿ ಚಹಲ್‌ಗೆ ವಿಕೆಟ್ ಒಪ್ಪಿಸಿದರು.

ತವರಿನಲ್ಲೇನೋ ಸಮಸ್ಯೆ ಇದೆ, ಮಳೆಯ ಜೊತೆ ಆರ್‌ಸಿಬಿಗೆ ಕೈಕೊಟ್ಟ ಬ್ಯಾಟಿಂಗ್

ಇನ್ನು ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಟಿಮ್ ಡೇವಿಡ್ ಚೊಚ್ಚಲ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಟಿಮ್ ಡೇವಿಡ್ ಕೇವಲ 26 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 50 ರನ್ ಸಿಡಿಸಿದರು.

ಪಂಜಾಬ್ ಕಿಂಗ್ಸ್ ಪರ ಅರ್ಶದೀಪ್ ಸಿಂಗ್, ಮಾರ್ಕೊ ಯಾನ್ಸೆನ್, ಯುಜುವೇಂದ್ರ ಚಹಲ್ ಹಾಗೂ ಹರ್ಪ್ರೀತ್ ಬ್ರಾರ್ ತಲಾ ಎರಡು ವಿಕೆಟ್ ಪಡೆದರೆ, ಕ್ಸೇವಿಯರ್ ಬರ್ಟೆಲ್ಟ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.