ತಾರಾ ಆಟಗಾರರು ಮತ್ತೆ ಕೈಕೊಟ್ಟಿದ್ದರಿಂದ ಬುಲ್ಸ್‌ ತನ್ನ ತವರು ಕಂಠೀರವ ಕ್ರೀಡಾಂಗಣದಲ್ಲೂ ಗೆಲುವಿನಿಂದ ವಂಚಿತವಾಯಿತು. ಆರಂಭದಲ್ಲೇ ಪ್ರಾಬಲ್ಯ ಮೆರೆದ ಡೆಲ್ಲಿ, ಯಾವ ಕ್ಷಣದಲ್ಲೂ ಬುಲ್ಸ್‌ಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ. ಮೊದಲಾರ್ಧದಲ್ಲಿ ಬುಲ್ಸ್‌ 11-17 ಅಂಕಗಳಿಂದ ಹಿನ್ನಡೆಗೊಳಗಾಯಿತು.

ಬೆಂಗಳೂರು(ಡಿ.09): ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ಗೆ ಈ ಬಾರಿ ತವರಲ್ಲೂ ಅದೃಷ್ಟ ಕೈಕೊಟ್ಟಿದೆ. 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬುಲ್ಸ್‌ ಶುಕ್ರವಾರ ದಬಾಂಗ್ ಡೆಲ್ಲಿ ವಿರುದ್ಧ 31-38 ಅಂಕಗಳಿಂದ ಪರಾಭವಗೊಂಡಿತು. ಇದು ಟೂರ್ನಿಯಲ್ಲಿ ಬುಲ್ಸ್‌ ಸೇನೆಗೆ ಎದುರಾದ ಹ್ಯಾಟ್ರಿಕ್‌ ಸೋಲು. ಅತ್ತ ಡೆಲ್ಲಿ ಟೂರ್ನಿಯ ಮೊದಲ ಜಯ ದಾಖಲಿಸಿತು.

Add Asianetnews Kannada as a Preferred SourcegooglePreferred

ತಾರಾ ಆಟಗಾರರು ಮತ್ತೆ ಕೈಕೊಟ್ಟಿದ್ದರಿಂದ ಬುಲ್ಸ್‌ ತನ್ನ ತವರು ಕಂಠೀರವ ಕ್ರೀಡಾಂಗಣದಲ್ಲೂ ಗೆಲುವಿನಿಂದ ವಂಚಿತವಾಯಿತು. ಆರಂಭದಲ್ಲೇ ಪ್ರಾಬಲ್ಯ ಮೆರೆದ ಡೆಲ್ಲಿ, ಯಾವ ಕ್ಷಣದಲ್ಲೂ ಬುಲ್ಸ್‌ಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ. ಮೊದಲಾರ್ಧದಲ್ಲಿ ಬುಲ್ಸ್‌ 11-17 ಅಂಕಗಳಿಂದ ಹಿನ್ನಡೆಗೊಳಗಾಯಿತು.

ಆದರೆ ದ್ವಿತೀಯಾರ್ಧದ ಆರಂಭದಲ್ಲೇ ತಿರುಗಿಬಿದ್ದ ಬುಲ್ಸ್‌ ಆಟಗಾರರು, ಮೊದಲ 4 ನಿಮಿಷಗಳಲ್ಲಿ ಅಂಕವನ್ನು 20-20ರಲ್ಲಿ ಸಮಬಲಗೊಳಿಸಿದರು. ಆದರೆ ಬುಲ್ಸ್‌ ಆಲೌಟಾ ಆಗುವುದರೊಂದಿಗೆ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಡೆಲ್ಲಿ, ಆ ಬಳಿಕ ಹಿಂದಿರುಗಿ ನೋಡಲಿಲ್ಲ. ಭರತ್‌ ಮಿಂಚಿನ ವೇಗದಲ್ಲಿ ಅಂಕಗಳನ್ನು ಗಳಿಸಿದರೂ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಅವರು 12 ಅಂಕ ಗಳಿಸಿದರು. ಡೆಲ್ಲಿಯ ನವೀನ್‌ 12, ಆಶು ಮಲಿಕ್‌ 8 ರೈಡ್‌ ಅಂಕ ಸಂಪಾದಿಸಿ ತಂಡವನ್ನು ಗೆಲ್ಲಿಸಿದರು.

Pro Kabaddi League: ಗೆಲುವಿನ ಖಾತೆ ತೆರೆದ ಪಾಟ್ನಾ, ಯೋಧಾಸ್‌..!

ಮತ್ತೆ ಕೈಕೊಟ್ಟ ಸ್ಟಾರ್ಸ್‌

ಬುಲ್ಸ್‌ಗೆ ಈ ಪಂದ್ಯದಲ್ಲೂ ತಾರಾ ಆಟಗಾರರು ಕೈಕೊಟ್ಟರು. ವಿಕಾಸ್‌ 7 ರೈಡ್‌ಗಳಲ್ಲಿ ಕೇವಲ ಒಂದೂ ಅಂಕ ಗಳಿಸಲಿಲ್ಲ. ನೀರಜ್‌ 4 ರೈಡ್‌ಗಳಲ್ಲಿ 1 ಅಂಕ ಪಡೆದರು. ಡಿಫೆಂಡರ್‌ಗಳೂ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಸೌರಭ್‌ 2, ಅನುಭವಿ ಸುರ್ಜೀತ್‌ ಕೇವಲ 1 ಅಂಕ ಗಳಿಸಿದ್ದು ತಂಡಕ್ಕೆ ಮುಳುವಾಯಿತು.

ಪುಣೆಗೆ ಸತತ ಎರಡನೇ ಜಯ

ಶುಕ್ರವಾರ ನಡೆದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ದ ಪುಣೇರಿ ಪಲ್ಟನ್ 43-32 ಅಂಕಗಳಿಂದ ಜಯಭೇರಿ ಬಾರಿಸಿತು. ಪುಣೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದರೆ, ಮುಂಬೈ 3 ಪಂದ್ಯಗಳಲ್ಲಿ ಎರಡನೇ ಸೋಲನುಭವಿಸಿತು. ಮೊದಲಾರ್ಧದಲ್ಲೇ 21-13 ರಿಂದ ಮುನ್ನಡೆ ಸಾಧಿಸಿದ್ದ ಪುಣೆ ಕೊನೆಯವರೆಗೂ ಪಂದ್ಯದ ಮೇಲಿನ ಹಿಡಿತ ಸಡಿಲಗೊಳಿಸದೆ ಜಯ ತನ್ನದಾಗಿಸಿಕೊಂಡಿತು. ಯುವ ಆಟಗಾರ ಮೋಹಿತ್ 3 ಟ್ಯಾಕಲ್ ಸೇರಿ ಒಟ್ಟು 12 ಅಂಕ ಸಂಪಾದಿಸಿ ಪುಣೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮುಂಬಾದ ಪ್ರಣಯ್ 5 ರೈಡ್ ಅಂಕ ಸಂಪಾದಿಸಿದರು.

ಆ್ಯಂಕರ್ ಮದ್ವೆಯಾದ ಜಸ್ಪ್ರೀತ್ ಬುಮ್ರಾ ಮಡದಿ ಮಿಸ್ ಇಂಡಿಯಾ ಫೈನಲಿಸ್ಟ್!

ಇಂದು ಬುಲ್ಸ್‌ -ಹರ್ಯಾಣ ಕದನ

ಬೆಂಗಳೂರು ಬುಲ್ಸ್ ತಂಡ ಟೂರ್ನಿಯ 4ನೇ ಪಂದ್ಯದಲ್ಲಿ ಶನಿವಾರ ಹರ್ಯಾಣ ಸ್ಟೀಲರ್ಸ್‌ ವಿರುದ್ದ ಸೆಣಸಾಡಲಿದ್ದು, ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ಹರ್ಯಾಣ ಆರಂಭಿಕ ಪಂದ್ಯದಲ್ಲಿ ಸೋಲನನ್ನುಭವಿಸಿದ್ದು, ಮೊದಲ ಜಯದ ಕಾತರದಲ್ಲಿದೆ.

ಇಂದಿನ ಪಂದ್ಯಗಳು

ಬೆಂಗಳೂರು-ಹರ್ಯಾಣ, ರಾತ್ರಿ 8ಕ್ಕೆ

ಯೋಧಾಸ್‌-ಟೈಟಾನ್ಸ್‌, ರಾತ್ರಿ 9ಕ್ಕೆ