ಕೋಲ್ಕತಾ[ನ.23]: ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ ಹಾಗೂ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ 347 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದ್ದು, ಮೊದಲ ಇನಿಂಗ್ಸ್’ನಲ್ಲಿ ಒಟ್ಟಾರೆ 241 ರನ್’ಗಳ ಭರ್ಜರಿ ಮುನ್ನಡೆ ಪಡೆದಿದೆ.

ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

ಮೊದಲ ದಿನದಾಟದಲ್ಲಿ ಬಾಂಗ್ಲಾದೇಶವನ್ನು ಕೇವಲ 106 ರನ್’ಗಳಿಗೆ ಆಲೌಟ್ ಮಾಡಿ ಇನಿಂಗ್ಸ್ ಆರಂಭಿಸಿದ್ದ ಭಾರತ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿತ್ತು. ಈ ಮೂಲಕ ಒಟ್ಟಾರೆ 68 ರನ್’ಗಳ ಮುನ್ನಡೆ ಸಾಧಿಸಿತ್ತು. ಇನ್ನು ಎರಡನೇ ದಿನದಾಟ ಮುಂದುವರೆಸಿದ ರಹಾನೆ-ಕೊಹ್ಲಿ ಜೋಡಿ 4ನೇ ವಿಕೆಟ್’ಗೆ 99 ರನ್’ಗಳ ಜತೆಯಾಟ ನಿಭಾಯಿಸಿದರು.  ಚುರುಕಿನ ಬ್ಯಾಟಿಂಗ್ ನಡೆಸಿದ ರಹಾನೆ ಕೇವಲ 69 ಎಸೆತಗಳಲ್ಲಿ 7 ಬೌಂಡರಿ ಸಹಿತ 51 ರನ್ ಬಾರಿಸಿ ತೈಜುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಕೊಹ್ಲಿ, ಜಡೇಜಾ ಜತೆ 53 ರನ್’ಗಳ ಜತೆಯಾಟವಾಡಿದರು. ಜಡೇಜಾ ಕೇವಲ 12 ರನ್ ಬಾರಿಸಿ ಅಬು ಜಾಯೆದ್’ಗೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 27ನೇ ಟೆಸ್ಟ್ ಶತಕ ಬಾರಿಸಿ ಮಿಂಚಿದರು. 194 ಎಸೆತಗಳಲ್ಲಿ 18 ಬೌಂಡರಿ ಸಹಿತ 136 ರನ್ ಬಾರಿಸಿ ಎಬಾದತ್ ಹುಸೇನ್’ಗೆ ವಿಕೆಟ್ ಒಪ್ಪಿಸಿದರು. ಅಂದಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ 70ನೇ ಶತಕ ಇದಾಗಿದೆ. ಇನ್ನೊಂದು ಶತಕ ಬಾರಿಸಿದರೆ ರಿಕಿ ಪಾಂಟಿಂಗ್[71] ದಾಖಲೆ ಸರಿಗಟ್ಟಲಿದ್ದಾರೆ.   

ಪಿಂಕ್ ಬಾಲ್ ಟೆಸ್ಟ್; ಶತಕ ಸಿಡಿಸಿ ದಾಖಲೆ ಬರೆದ ವಿರಾಟ್ ಕೊಹ್ಲಿ

ದಿಢೀರ್ ಕುಸಿತ: ಒಂದು ಹಂತದಲ್ಲಿ 300 ರನ್’ವರೆಗೂ ಕೇವಲ 5 ವಿಕೆಟ್ ಕಳೆದುಕೊಂಡಿದ್ದ ಭಾರತ, ನಾಯಕ ವಿರಾಟ್ ಕೊಹ್ಲಿ ವಿಕೆಟ್ ಬೀಳುತ್ತಿದ್ದಂತೆ ದಿಢೀರ್ ಕುಸಿತ ಕಂಡಿತು. ಕೇವಲ 24 ರನ್’ಗಳ ಅಂತರದಲ್ಲಿ ಭಾರತ 4 ವಿಕೆಟ್ ಕಳೆದುಕೊಂಡಿತು. ಅಶ್ವಿನ್ 9 ರನ್ ಬಾರಿಸಿದರೆ, ಉಮೇಶ್ ಹಾಗೂ ಇಶಾಂತ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ವೃದ್ದಿಮಾನ್ ಸಾಹ 17 ಹಾಗೂ ಮೊಹಮ್ಮದ್ ಶಮಿ 10 ರನ್ ಬಾರಿಸಿ ಅಜೇಯರಾಗುಳಿದರು.
ಬಾಂಗ್ಲಾದೇಶ ಪರ ಅಲ್ ಅಮೀನ್ ಹುಸೇನ್ ಹಾಗೂ ಎಬಾದತ್ ಹುಸೇನ್ ತಲಾ ಮೂರು ವಿಕೆಟ್ ಪಡೆದರೆ, ಅಬು ಜಾಯೆದ್ 2 ವಿಕೆಟ್ ಹಾಗೂ ತೈಜುಲ್ ಇಸ್ಲಾಂ ಒಂದು ವಿಕೆಟ್ ಪಡೆದರು.