ಪಹಲ್ಗಾಂ ನರಮೇಧದ ನಂತರ ಪಾಕಿಸ್ತಾನ ತಂಡದೊಂದಿಗೆ ಹಸ್ತಲಾಘವ ಮಾಡದಿರುವ ಬಿಸಿಸಿಐ ನಿರ್ಧಾರಕ್ಕೆ ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಪ್ರತಿಕ್ರಿಯಿಸಿದ್ದಾರೆ. ಭಾರತ ಕೈಕುಲುಕಲು ಬಯಸದಿದ್ದರೆ ನಮಗೂ ಆಸಕ್ತಿಯಿಲ್ಲ ಎಂದು ಅವರು ಹೇಳಿದ್ದಾರೆ.

ಇಸ್ಲಾಮಾಬಾದ್‌: ಪಹಲ್ಗಾಂ ನರಮೇಧ ಬಳಿಕ ಪಾಕಿಸ್ತಾನ ಕ್ರಿಕೆಟ್‌ ತಂಡದ ಜೊತೆ ಹಸ್ತಲಾಘವ ಮಾಡದಿರಲು ಬಿಸಿಸಿಐ ನಿರ್ಧರಿಸುವುದರ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಮುಖ್ಯಸ್ಥ ಹಾಗೂ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್‌ ನಖ್ವಿ ಪ್ರತಿಕ್ರಿಯಿಸಿದ್ದು, ‘ನಾವೇನೂ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ. ಮಾಧ್ಯಮಗಳಲ್ಲಿ ಮಾತನಾಡಿರುವ ನಖ್ವಿ, ‘ಭಾರತ ಹ್ಯಾಂಡ್‌ ಶೇಕ್‌ ಮಾಡದಿರಲು ಬಯಸಿದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರೊಂದಿಗೆ ಕೈ ಕುಲುಕುವುದಕ್ಕೆ ನಮಗೂ ಆಸಕ್ತಿಯಿಲ್ಲ. ಮುಂಬರುವ ಟೂರ್ನಿಗಳಲ್ಲೂ ಭಾರತ ನೋ ಹ್ಯಾಂಡ್‌ಶೇಕ್‌ ಮುಂದುವರೆಸಿದರೆ ನಾವು ಕೂಡ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ’ ಎಂದಿದ್ದಾರೆ.

ಕಳೆದ ಏಷ್ಯಾಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನಿ ಆಟಗಾರರು, ಸಿಬ್ಬಂದಿ ಹಾಗೂ ಅಧಿಕಾರಿಗಳ ಜತೆ ಹ್ಯಾಂಡ್‌ ಶೇಕ್‌ ಮಾಡದಿರಲು ನಿರ್ಧರಿಸಿತ್ತು. ಚಾಂಪಿಯನ್‌ ಆದ ಬಳಿಕವೂ ಭಾರತ, ಏಷ್ಯಾ ಕ್ರಿಕೆಟ್‌ ಸಂಸ್ಥೆ (ಎಸಿಸಿ) ಮುಖ್ಯಸ್ಥರೂ ಆಗಿರುವ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ತಮ್ಮಿಂದಲೇ ಟ್ರೋಫಿ ಸ್ವೀಕರಿಸುವಂತೆ ಹಟ ಹಿಡಿದಿದ್ದ ನಖ್ವಿ, ಟ್ರೋಫಿಯನ್ನು ಎಸಿಸಿ ಕಚೇರಿಗೆ ಸ್ಥಳಾಂತರಿಸಿದ್ದರು. ಟ್ರೋಫಿ ಇನ್ನೂ ಅಲ್ಲೇ ಇದ್ದು, ಭಾರತ ಚಾಂಪಿಯನ್‌ ಆಗಿ 3 ತಿಂಗಳು ಕಳೆದರೂ, ಇನ್ನೂ ಟ್ರೋಫಿ ತಂಡದ ಕೈಸೇರಿಲ್ಲ.

ಕಿವೀಸ್‌ ವಿರುದ್ಧ ಏಕದಿನ ಸರಣಿಗೆ ಕಿಶನ್‌ ಆಯ್ಕೆ?

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ಜ.11ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಇಶಾನ್‌ ಕಿಶನ್‌ರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ಮುಕ್ತಾಯಗೊಂಡ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಜಾರ್ಖಂಡ್‌ ಪರ ಮಿಂಚಿದ್ದ ಕಿಶನ್‌, ಸದ್ಯ ನಡೆಯುತ್ತಿರುವ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲೂ ಆಕರ್ಷಕ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ, ಆಯ್ಕೆ ಸಮಿತಿ ರಿಷಭ್‌ ಪಂತ್‌ ಬದಲು ಕಿಶನ್‌ರನ್ನು ಪರಿಗಣಿಸುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಬಿಸಿಸಿಐ ಕೇಂದ್ರ ಗುತ್ತಿಗೆ: ಕೊಹ್ಲಿ, ರೋಹಿತ್‌ಗೆ ಹಿಂಬಡ್ತಿ?

ನವದೆಹಲಿ: 2026-27ರ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿ ಸದ್ಯದಲ್ಲೇ ಪ್ರಕಟಗೊಳ್ಳಲಿದ್ದು, ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಹಿಂಬಡ್ತಿ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಇಬ್ಬರು ಈಗಾಗಲೇ ಟೆಸ್ಟ್‌, ಟಿ20 ಮಾದರಿಯಿಂದ ನಿವೃತ್ತಿಯಾಗಿರುವ ಕಾರಣ, ಅವರನ್ನು ‘ಎ+’ ದರ್ಜೆಯಿಂದ ಕೈಬಿಡಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಬ್ಬರಿಗೂ ‘ಎ’ ಅಥವಾ ‘ಬಿ’ ದರ್ಜೆಯಲ್ಲಿ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ಇದೇ ವೇಳೆ ಟೆಸ್ಟ್‌, ಏಕದಿನ ತಂಡದ ನಾಯಕ ಶುಭ್‌ಮನ್‌ ಗಿಲ್‌ಗೆ ‘ಎ+’ ದರ್ಜೆಗೆ ಬಡ್ತಿ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು, ಹಿರಿಯ ವೇಗಿ ಮೊಹಮದ್‌ ಶಮಿಯನ್ನು ಗುತ್ತಿಗೆ ಪಟ್ಟಿಯಿಂದಲೇ ಬಿಡಲಾಗುವುದು ಎಂದೂ ಹೇಳಲಾಗುತ್ತಿದೆ.