ಅಂಡರ್ 19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತೀಯ ಆಟಗಾರರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಐಸಿಸಿಗೆ ಅಧಿಕೃತ ದೂರು ನೀಡಲು ನಿರ್ಧರಿಸಿದೆ. ಪಾಕ್ ತಂಡದ ಕೋಚ್ ಸರ್ಫರಾಜ್ ಅಹ್ಮದ್ ಅವರ ಆರೋಪದ ಬೆನ್ನಲ್ಲೇ ನಖ್ವಿ ಈ ಕ್ರಮವನ್ನು ಖಚಿತಪಡಿಸಿದ್ದಾರೆ. 

ದುಬೈ: ಅಂಡರ್ 19 ಏಷ್ಯಾಕಪ್ ಫೈನಲ್ ವೇಳೆ ಪಾಕಿಸ್ತಾನಿ ಆಟಗಾರರೊಂದಿಗೆ ಅನುಚಿತವಾಗಿ ವರ್ತಿಸಿದ ಭಾರತೀಯ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮತ್ತು ಗೃಹ ಸಚಿವ ಮೊಹ್ಸಿನ್ ನಖ್ವಿ ಐಸಿಸಿಗೆ ದೂರು ನೀಡಲಿದ್ದಾರೆ. ಪಂದ್ಯದ ವೇಳೆ ಭಾರತೀಯ ಆಟಗಾರರ ವರ್ತನೆ ಸಭ್ಯವಾಗಿರಲಿಲ್ಲ ಎಂದು ಪಾಕ್ ತಂಡದ ಕೋಚ್ ಆಗಿದ್ದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನಖ್ವಿ, ಭಾರತೀಯ ಆಟಗಾರರ ಕೆಟ್ಟ ವರ್ತನೆ ವಿರುದ್ಧ ಐಸಿಸಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಭಾರತೀಯ ಆಟಗಾರರ ವಿರುದ್ಧ ಐಸಿಸಿಗೆ ಅಧಿಕೃತವಾಗಿ ದೂರು ನೀಡಲಾಗುವುದು ಮತ್ತು ರಾಜಕೀಯ ಹಾಗೂ ಕ್ರೀಡೆಯನ್ನು ಪ್ರತ್ಯೇಕವಾಗಿ ನೋಡಬೇಕು ಎಂದು ನಖ್ವಿ ಹೇಳಿದರು.

ಸರ್ಫರಾಜ್ ಖಾನ್ ವಿಡಿಯೋ ಕ್ಲಿಪ್ ವೈರಲ್

ಅಂಡರ್ 19 ಏಷ್ಯಾಕಪ್ ಫೈನಲ್ ವೇಳೆ ಭಾರತೀಯ ಆಟಗಾರರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ಸರ್ಫರಾಜ್ ಅಹ್ಮದ್ ಪಾಕ್ ಆಟಗಾರರಿಗೆ ಸೂಚನೆ ನೀಡುತ್ತಿರುವ ಆಡಿಯೋ ಕ್ಲಿಪ್‌ಗಳು ಹೊರಬಿದ್ದಿದ್ದವು. ಕಡೆಗಣಿಸುವವರನ್ನು ಮರಳಿ ಕಡೆಗಣಿಸಬೇಡಿ ಮತ್ತು ಆಟದ ಘನತೆಯನ್ನು ಮೀರಿ ವರ್ತಿಸಬೇಡಿ ಎಂದು ಸರ್ಫರಾಜ್ ಪಾಕ್ ಆಟಗಾರರಿಗೆ ಹೇಳುತ್ತಿರುವ ಆಡಿಯೋ ಕ್ಲಿಪ್‌ಗಳು ಬಹಿರಂಗಗೊಂಡಿದ್ದವು. ಇದರ ಸತ್ಯಾಸತ್ಯತೆ ಖಚಿತವಾಗಿಲ್ಲದಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಆಡಿಯೋ ತನ್ನದೇ ಎಂದು ಸರ್ಫರಾಜ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದರು. ನಾನು ಈ ಹಿಂದೆ ಭಾರತ ತಂಡದ ವಿರುದ್ಧ ಆಡಿದ್ದೇನೆ. ಆದರೆ ಆಗ ಅವರು ಆಟವನ್ನು ಗೌರವಿಸುತ್ತಿದ್ದರು. ಆದರೆ ಈಗ ಹೊರಗಿನಿಂದ ಆಟ ನೋಡಿದಾಗ, ಈ ತಂಡವು ಆಟವನ್ನು ಗೌರವಿಸುತ್ತಿಲ್ಲ ಎಂದು ನನಗೆ ಅನಿಸಿತು. ಮೈದಾನದಲ್ಲಿ ಭಾರತೀಯ ಆಟಗಾರರ ವರ್ತನೆ ಹಲವು ಬಾರಿ ಅನೈತಿಕವಾಗಿತ್ತು. ಮೈದಾನದಲ್ಲಿ ಭಾರತೀಯ ಆಟಗಾರರು ತೋರಿದ ಹಲವು ಭಾವನಾತ್ಮಕ ಪ್ರದರ್ಶನಗಳನ್ನು ನೀವೂ ಟಿವಿಯಲ್ಲಿ ನೋಡಿರಬಹುದು. ಆದರೆ ನಾವು ಆಟದ ಘನತೆಗೆ ತಕ್ಕಂತೆ ಮಾತ್ರ ವಿಜಯವನ್ನು ಆಚರಿಸಿದ್ದೇವೆ ಎಂದು ಸರ್ಫರಾಜ್ ಹೇಳಿದ್ದರು.

Scroll to load tweet…

ಇದೇ ವೇಳೆ, ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲಿನ ನಂತರ, ಸೋಲಿನ ಬಗ್ಗೆ ಕೋಚ್ ಮತ್ತು ನಾಯಕನಿಂದ ಬಿಸಿಸಿಐ ವಿವರಣೆ ಕೇಳಲಿದೆ ಎಂಬ ವರದಿಗಳು ಹೊರಬಂದಿದ್ದವು. ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಕೆಲವು ಭಾರತೀಯ ಆಟಗಾರರ ಅತಿರೇಕದ ವರ್ತನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. ಭಾನುವಾರ ಅಬುಧಾಬಿಯಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು 191 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಆರಂಭಿಕ ಆಟಗಾರ ಸಮೀರ್ ಮಿನ್ಹಾಸ್ ಅವರ ಶತಕದ ನೆರವಿನಿಂದ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿದರೆ, ಭಾರತ 26.2 ಓವರ್‌ಗಳಲ್ಲಿ 156 ರನ್‌ಗಳಿಗೆ ಆಲೌಟ್ ಆಯಿತು.

ಅಂಡರ್-19 ಏಷ್ಯಾಕಪ್ ಲೀಗ್ ಹಂತದಲ್ಲಿ ಭಾರತ ತಂಡವು ಪಾಕಿಸ್ತಾನ ಎದುರು ಭರ್ಜರಿ ಜಯ ಸಾಧಿಸಿತ್ತು. ಲೀಗ್ ಹಂತದಿಂದ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಆಯುಷ್ ಮಾಥ್ರೆ ನೇತೃತ್ವದ ಭಾರತ ಯುವ ಪಡೆ, ಫೈನಲ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸಿತ್ತು. ಬೌಲಿಂಗ್‌ನಲ್ಲಿ ದೊಡ್ಡ ಮೊತ್ತವನ್ನು ಬಿಟ್ಟುಕೊಟ್ಟ ಭಾರತ ತಂಡವು, ಬ್ಯಾಟಿಂಗ್‌ನಲ್ಲೂ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ, ಅಂತಿಮವಾಗಿ ಕೇವಲ 156 ರನ್‌ಗಳಿಗೆ ಸರ್ವಪತನ ಕಂಡಿತು.