ಉಸ್ಮಾನ್ ಖವಾಜಾ ಅವರ ಆತ್ಮಕಥೆಯಲ್ಲಿ ಮಾಡಿರುವ ಬಾಲ್ ಟ್ಯಾಂಪರಿಂಗ್ ಆರೋಪಗಳನ್ನು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. 2018ರ ವಿವಾದದ ಬಗ್ಗೆ ತಂಡದ ಎಲ್ಲರಿಗೂ ತಿಳಿದಿತ್ತು ಎಂಬುದು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಿಡ್ನಿ(ನ.13): 2018ರ ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ತಮಗೆ ಯಾವುದೇ ಪಾತ್ರವಿಲ್ಲ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸ್ಪಷ್ಟಪಡಿಸಿದ್ದಾರೆ. ಮಾಜಿ ಸಹ ಆಟಗಾರ ಉಸ್ಮಾನ್ ಖವಾಜಾ ತಮ್ಮ ಆತ್ಮಕಥೆಯಲ್ಲಿ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ಕಮಿನ್ಸ್ ಹೇಳಿದ್ದಾರೆ. ತಂಡದ ಎಲ್ಲರಿಗೂ ಈ ಬಗ್ಗೆ ತಿಳಿದಿತ್ತು ಎಂಬ ವಾದ ಶೇಕಡಾ 100ರಷ್ಟು ತಪ್ಪು ಎಂದು ಆಸ್ಟ್ರೇಲಿಯಾ ನಾಯಕ ತಿಳಿಸಿದ್ದಾರೆ.
ಖವಾಜಾ ತಮ್ಮ ಸ್ನೇಹಿತ ಹೌದು, ಆದರೆ ಸ್ನೇಹಿತರು ಈ ರೀತಿ ಹಗುರವಾಗಿ ಮಾತನಾಡಬಾರದು ಎಂದು ಕಮಿನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖವಾಜಾ ಅವರ ಹೇಳಿಕೆಗಳು ಮಾನಹಾನಿಕರವಾಗಿವೆ ಎಂದ ಅವರು, ಆದರೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗಂಭೀರ ಆರೋಪ ಮಾಡಿದ್ದ ಖವಾಜಾ
ಈ ವಾರ ಬಿಡುಗಡೆಯಾದ ತಮ್ಮ ಆತ್ಮಕಥೆಯಲ್ಲಿ ಬಾಲ್ ಟ್ಯಾಂಪರಿಂಗ್ ಬಗ್ಗೆ ತಂಡದ ಎಲ್ಲರಿಗೂ ತಿಳಿದಿತ್ತು ಎಂದು ಖವಾಜಾ ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಸಿಡ್ನಿಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆದ ಪ್ಯಾಟ್ ಕಮಿನ್ಸ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಈ ಆರೋಪ ಸಂಪೂರ್ಣ ಆಧಾರರಹಿತ ಎಂದು ಕಮಿನ್ಸ್ ಹೇಳಿದ್ದಾರೆ. ಮೈದಾನಕ್ಕೆ ಸ್ಯಾಂಡ್ಪೇಪರ್ ತೆಗೆದುಕೊಂಡು ಹೋಗುವ ಬಗ್ಗೆ ತಂಡಕ್ಕೆ ತಿಳಿದಿತ್ತು ಎಂಬ ವಾದ ಶೇಕಡಾ 100ರಷ್ಟು ತಪ್ಪು. ತಾನೇ ಇದರ ರೂವಾರಿ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಮಿನ್ಸ್ ಹೇಳಿದ್ದಾರೆ. ಸ್ಯಾಂಡ್ಪೇಪರ್ ಬಳಸುವಾಗ ಎಚ್ಚರಿಕೆಯಿಂದಿರಲು ಕ್ಯಾಮರೂನ್ ಬ್ಯಾನ್ಕ್ರಾಫ್ಟ್ಗೆ ತಾನು ಹೇಳಿದ್ದೆ ಎಂಬ ಖವಾಜಾ ಅವರ ಹೇಳಿಕೆ ತನಗೆ ಆಘಾತ ತಂದಿದೆ ಎಂದು ಕಮಿನ್ಸ್ ಹೇಳಿದ್ದಾರೆ.
ಉಸ್ಮಾನ್ ಒಬ್ಬ ಸ್ನೇಹಿತನಾದರೂ, ಸ್ನೇಹಿತರು ಪರಸ್ಪರರ ಜೀವನ ಮತ್ತು ಮರ್ಯಾದೆ ಜೊತೆ ಆಟವಾಡಬಾರದು ಎಂದು ಕಮಿನ್ಸ್ ನೆನಪಿಸಿದ್ದಾರೆ. ಪುಸ್ತಕದಲ್ಲಿರುವ ಕೆಲವು ಹೇಳಿಕೆಗಳು ಮಾನಹಾನಿಕರವಾಗಿವೆ ಎಂದು ತಮಗೆ ಕಾನೂನು ಸಲಹೆ ಸಿಕ್ಕಿದ್ದರೂ, ಖವಾಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಎಂಟು ವರ್ಷಗಳ ಹಿಂದಿನ ಈ ವಿವಾದದಿಂದ ಈಗ ಮುಂದೆ ಹೋಗುವ ಸಮಯ ಬಂದಿದೆ ಎಂದು ಕಮಿನ್ಸ್ ಹೇಳಿದ್ದಾರೆ. ಏಷ್ಯನ್ ಮೂಲದವನೆಂಬ ಕಾರಣಕ್ಕೆ ಆಸ್ಟ್ರೇಲಿಯಾದ ನಾಯಕನನ್ನಾಗಿ ಮಾಡಲಿಲ್ಲ ಎಂಬ ಆರೋಪವೂ ಸುಳ್ಳು ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
2018ರ ಬಾಲ್ ಟ್ಯಾಂಪರಿಂಗ್ ವಿವಾದ
2018ರ ಮಾರ್ಚ್ನಲ್ಲಿ ಕೇಪ್ಟೌನ್ನ ನ್ಯೂಲ್ಯಾಂಡ್ಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದ ವೇಳೆ ಚೆಂಡನ್ನು ವಿರೂಪಗೊಳಿಸಲು ಸ್ಯಾಂಡ್ಪೇಪರ್ ಬಳಸಲಾಗಿತ್ತು. ಕ್ರಿಕೆಟ್ಗೆ ಕಳಂಕ ತಂದಿದ್ದಕ್ಕಾಗಿ ಅಂದಿನ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರನ್ನು ಆಸ್ಟ್ರೇಲಿಯಾ ಒಂದು ವರ್ಷದ ಮಟ್ಟಿಗೆ ನಿಷೇಧಿಸಿತ್ತು. ಚೆಂಡಿನ ಮೇಲೆ ಸ್ಯಾಂಡ್ಪೇಪರ್ ಬಳಸುವಾಗ ಸಿಕ್ಕಿಬಿದ್ದ ಆರಂಭಿಕ ಬ್ಯಾಟರ್ ಕ್ಯಾಮರೂನ್ ಬ್ಯಾನ್ಕ್ರಾಫ್ಟ್ಗೆ ಒಂಬತ್ತು ತಿಂಗಳ ನಿಷೇಧ ವಿಧಿಸಲಾಗಿತ್ತು. ಮೂವರೂ ಶಿಕ್ಷೆಯನ್ನು ಒಪ್ಪಿಕೊಂಡು ನಂತರ ಟೆಸ್ಟ್ ಕ್ರಿಕೆಟ್ಗೆ ಮರಳಿದ್ದರು.
ಸುಮಾರು ಎಂಟು ವರ್ಷಗಳ ಬಳಿಕ ಉಸ್ಮಾನ್ ಖವಾಜಾ ಅವರ ಆತ್ಮಕಥೆಯಲ್ಲಿನ ಆರೋಪಗಳು ಈ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದ್ದು, ಇದೀಗ ಪ್ಯಾಟ್ ಕಮಿನ್ಸ್ ಕೂಡ ತಮ್ಮ ನಿಲುವನ್ನು ಬಹಿರಂಗವಾಗಿ ಸ್ಪಷ್ಟಪಡಿಸಿದ್ದಾರೆ.














