ಆಸ್ಟ್ರೇಲಿಯಾದ ಕ್ರಿಕೆಟಿಗ ಉಸ್ಮಾನ್ ಖವಾಜಾ ತಮ್ಮ ಆತ್ಮಚರಿತ್ರೆಯಲ್ಲಿ ಸ್ಯಾಂಡ್‌ಪೇಪರ್ ಗೇಟ್ ವಿವಾದದ ಬಗ್ಗೆ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಹಿಂದಿನ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡವು ಚೆಂಡನ್ನು ವಿರೂಪಗೊಳಿಸಿತ್ತು ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರು(ನ.11): 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ವೇಳೆ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವನ್ನು ತೀವ್ರ ವಿವಾದಕ್ಕೆ ಸಿಲುಕಿಸಿದ್ದ ಸ್ಯಾಂಡ್‌ಪೇಪರ್‌ ಗೇಟ್‌ ಪ್ರಕರಣದ ಬಗ್ಗೆ ಮಾಜಿ ಕ್ರಿಕೆಟಿಗ ಉಸ್ಮಾನ್‌ ಖವಾಜಾ ಮತ್ತೊಂದು ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಆತ್ಮಚರಿತ್ರೆ 'ಸಬ್ರ್‌' (Sabr) ಪುಸ್ತಕದಲ್ಲಿ ಈ ವಿವಾದದ ಹಿಂದಿನ ಘಟನೆಗಳನ್ನು ವಿವರಿಸಿರುವ ಅವರು, ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳಲ್ಲೂ ಆಸ್ಟ್ರೇಲಿಯಾ ತಂಡ ಚೆಂಡನ್ನು ವಿರೂಪಗೊಳಿಸುವ ಮೂಲಕ ಅಕ್ರಮ ಎಸಗಿತ್ತು ಎಂದು ಆರೋಪಿಸಿದ್ದಾರೆ.

2018ರ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕ್ಯಾಮರೂನ್‌ ಬ್ಯಾಂಕ್ರಾಫ್ಟ್‌ ಚೆಂಡಿನ ಮೇಲ್ಮೈಯನ್ನು ಸ್ಯಾಂಡ್‌ಪೇಪರ್‌ನಿಂದ ಉಜ್ಜಿ ಅದರ ಸ್ವರೂಪ ಬದಲಾಯಿಸಲು ಯತ್ನಿಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಪ್ರಕರಣದ ಬಳಿಕ ಬ್ಯಾಂಕ್ರಾಫ್ಟ್‌, ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರನ್ನು ಅಮಾನತುಗೊಳಿಸಲಾಗಿತ್ತು.

ಇದೀಗ ಖವಾಜಾ ತಮ್ಮ ಪುಸ್ತಕದಲ್ಲಿ ಈ ವಿವಾದದ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ. ಸ್ಯಾಂಡ್‌ಪೇಪರ್‌ ಬಳಸಿ ಚೆಂಡನ್ನು ವಿರೂಪಗೊಳಿಸಿದ ಘಟನೆ ಕೇಪ್‌ಟೌನ್‌ ಟೆಸ್ಟ್‌ನಲ್ಲಿ ಮಾತ್ರ ನಡೆದಿರಲಿಲ್ಲ. ಅದಕ್ಕೂ ಹಿಂದಿನ ಪೋರ್ಟ್‌ ಎಲಿಜಬೆತ್‌ ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾ ತಂಡ ಇದೇ ರೀತಿಯ ಕೃತ್ಯ ಎಸಗಿತ್ತು ಎಂದು ಅವರು ಹೇಳಿದ್ದಾರೆ.

“ಚೆಂಡು ಎಷ್ಟೊಂದು ಚಲಿಸುತ್ತಿತ್ತೆಂದರೆ, ಒಂದು ವಿಕೆಟ್‌ ಬಿದ್ದ ಬಳಿಕ ಬೌಲರ್‌ಗಳಲ್ಲೊಬ್ಬರು ತಂಡದ ಆಟಗಾರರ ಗುಂಪಿನಲ್ಲಿ, 'ಗೆಳೆಯರೇ, ಚೆಂಡು ಈಗ ಅತಿಯಾಗಿ ಚಲಿಸುತ್ತಿದೆ. ಇದಕ್ಕೆ ಇನ್ಯಾವುದೇ ಕೆಲಸ ಮಾಡಬೇಡಿ. ಇದು ಎಷ್ಟು ಚಲಿಸುತ್ತಿದೆ ಎಂದರೆ ನಂಬುವುದಕ್ಕೂ ಕಷ್ಟ' ಎಂದು ಹೇಳಿದರು. ನಮ್ಮಲ್ಲಿ ಹೆಚ್ಚಿನವರು ನಕ್ಕರು. (ನಾವು ಅದಕ್ಕೆ ಮತ್ತೇನಾದರೂ ಮಾಡಲು ಯೋಜಿಸಿರಲಿಲ್ಲ. ವಿರಾಮದ ಬಳಿಕವೇ ಚೆಂಡಿಗೆ ಅಗತ್ಯಕ್ಕಿಂತ ಹೆಚ್ಚಿನ ಹಾನಿ ಮಾಡಲಾಗಿತ್ತು.)

ಈಗ ನಿಮ್ಮ ಮನಸ್ಸಿನಲ್ಲಿ ಏನು ಪ್ರಶ್ನೆ ಮೂಡುತ್ತಿದೆ ಎಂಬುದು ನನಗೆ ಗೊತ್ತು. 'ನಿಮ್ಮನ್ನು ಪೋರ್ಟ್‌ ಎಲಿಜಬೆತ್‌ನಲ್ಲಿ ಅಲ್ಲ, ಕೇಪ್‌ಟೌನ್‌ನಲ್ಲಿ ಹಿಡಿದಿದ್ದಲ್ಲವೇ?' ಹೌದು, ಆದರೆ ಅದಕ್ಕೂ ಹಿಂದಿನ ಪಂದ್ಯದಲ್ಲಿ ನಾವು ಹಾಗೆ ಮಾಡಿರಲಿಲ್ಲ ಎಂದು ಯಾರು ಹೇಳಿದರು?” ಎಂದು ಖವಾಜಾ ತಮ್ಮ ಆತ್ಮಚರಿತ್ರೆ 'ಸಬ್ರ್‌'ನಲ್ಲಿ ಬರೆದಿದ್ದಾರೆ.

ಬ್ಯಾಂಕ್ರಾಫ್ಟ್‌ಗೆ ಎಚ್ಚರಿಕೆ ನೀಡಿದ್ದೆ ಎಂದ ಖವಾಜಾ

ಇದಲ್ಲದೆ, ಚೆಂಡು ವಿರೂಪಗೊಳಿಸುವ ವಿಚಾರ ತಂಡದ ಬಹುತೇಕ ಆಟಗಾರರಿಗೆ ತಿಳಿದಿತ್ತು ಎಂದು ಖವಾಜಾ ಹೇಳಿದ್ದಾರೆ. ಅಲ್ಲದೆ, ಕ್ಯಾಮರೂನ್‌ ಬ್ಯಾಂಕ್ರಾಫ್ಟ್‌ ಮೈದಾನದಲ್ಲಿ ಇಂತಹ ಕೆಲಸ ಮಾಡುವಾಗ ಕ್ಯಾಮೆರಾಗಳ ಕಣ್ಗಾವಲು ಇರುತ್ತದೆ ಎಂಬುದನ್ನು ತಾನು ಮೊದಲೇ ಎಚ್ಚರಿಸಿದ್ದಾಗಿಯೂ ಅವರು ತಿಳಿಸಿದ್ದಾರೆ.

“ವಿರಾಮದ ನಂತರದ ಸೆಷನ್‌ನಲ್ಲಿ ನಾವು ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್‌ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆವು. ವಿರಾಮದ ಬಳಿಕ ಮೈದಾನಕ್ಕೆ ಬಂದ ಬ್ಯಾಂಕ್ರಾಫ್ಟ್‌, ಅಂಪೈರ್‌ಗಳು ಮೈದಾನದಲ್ಲೇ ಬಿಟ್ಟಿದ್ದ ಚೆಂಡನ್ನು ತೆಗೆದುಕೊಂಡು ಅದನ್ನು ಕೆಲವು ಬಾರಿ ತಿರುಗಿಸಿ ಉಜ್ಜಿದ್ದ. ಆ ಬಳಿಕ ಚೆಂಡು ಅದ್ಭುತವಾಗಿ ಕಾಣುತ್ತಿತ್ತು. ಹೊಳೆಯುವ ಭಾಗ ಹೊಳೆಯುತ್ತಿತ್ತು. ಸ್ಯಾಂಡ್‌ಪೇಪರ್‌ನಿಂದಾಗಿ ಇನ್ನೊಂದು ಭಾಗ ತುಂಬಾ ಒರಟಾಗಿ ಮತ್ತು ಒಣಗಿತ್ತು.

ಆ ಸೆಷನ್‌ನಲ್ಲಿ ಗಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ನನಗೆ ಚೆಂಡು ಬಂದಾಗಲೆಲ್ಲಾ ಅದನ್ನು ನೋಡುತ್ತಿದ್ದೆ. 'ವಾವ್‌, ನನಗೂ ಈ ಚೆಂಡಿನಿಂದ ರಿವರ್ಸ್‌ ಸ್ವಿಂಗ್‌ ಮಾಡಬಹುದು' ಎಂದುಕೊಳ್ಳುತ್ತಿದ್ದೆ. ಅಷ್ಟೊಂದು ವಿಚಿತ್ರವಾಗಿ ಚೆಂಡು ಬದಲಾಗಿತ್ತು. ಬಳಿಕ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್‌ ಮಾಡಿದರು. ಚೆಂಡನ್ನು ತೀವ್ರವಾಗಿ ರಿವರ್ಸ್‌ ಸ್ವಿಂಗ್‌ ಮಾಡಿಸಿದರು. ಕೇವಲ 28 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದೆವು” ಎಂದು ಖವಾಜಾ ವಿವರಿಸಿದ್ದಾರೆ.

2018ರ ಸ್ಯಾಂಡ್‌ಪೇಪರ್‌ ಗೇಟ್‌ ಪ್ರಕರಣ ಆಸ್ಟ್ರೇಲಿಯಾ ಕ್ರಿಕೆಟ್‌ನ ಅತ್ಯಂತ ವಿವಾದಾತ್ಮಕ ಅಧ್ಯಾಯಗಳಲ್ಲಿ ಒಂದಾಗಿದೆ. ಇದೀಗ ಖವಾಜಾ ಅವರ ಆತ್ಮಚರಿತ್ರೆಯಲ್ಲಿ ಹೊರಬಂದಿರುವ ಈ ಹೊಸ ಹೇಳಿಕೆಗಳು ಆ ಪ್ರಕರಣದ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿವೆ.