ಕರಾಚಿ(ಫೆ.21): ಇದೇ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನದ ಕ್ರಿಕೆಟಿಗರಿಗೆ, ಅಭಿಮಾನಿಗಳಿಗೆ ವೀಸಾ ನೀಡುವುದಾಗಿ ಲಿಖಿತ ಭರವಸೆ ನೀಡದಿದ್ದರೆ, ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವಂತೆ ಒತ್ತಡ ಹೇರಲಿದ್ದೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಹ್ಸಾನ್ ಮಣಿ ಹೇಳಿದ್ದಾರೆ.

ಪಾಕಿಸ್ತಾನಿಯರಿಗೆ ವೀಸಾ ನೀಡುವ ಬಗ್ಗೆ ಎಷ್ಟೇ ಕೇಳಿದರೂ ಭಾರತ ಉತ್ತರಿಸುತ್ತಿಲ್ಲ ಎಂದು ಎಹ್ಸಾನ್ ಮಣಿ ಆರೋಪಿಸಿದ್ದಾರೆ. ನಾವು ಬರೀ ಆಟಗಾರರಿಗಷ್ಟೇ ವೀಸಾ ಬಯಸುತ್ತಿಲ್ಲ, ನಮ್ಮ ಅಭಿಮಾನಿಗಳಿಗೆ, ಅಧಿಕಾರಿಗಳಿಗೆ ಹಾಗೂ ಪಾಕಿಸ್ತಾನದ ಪತ್ರಕರ್ತರಿಗೂ ವೀಸಾ ಒದಗಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ಮಣಿ ಹೇಳಿದ್ದಾರೆ.

ಏಪ್ರಿಲ್‌ನಿಂದ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತು..!
 
ಮಾರ್ಚ್‌ ತಿಂಗಳಾಂತ್ಯದ ಒಳಗಾಗಿ ಭಾರತವು ನಮಗೆ ವೀಸಾ ನೀಡುವ ಕುರಿತಂತೆ ಲಿಖಿತ ಭರವಸೆ ನೀಡಬೇಕು. ಆಗ ನಮ್ಮ ನಿಲುವೇನಿರಬೇಕು ಎಂದು ತೀರ್ಮಾನವಾಗಲಿದೆ. ಒಂದು ವೇಳೆ ಭಾರತ ವೀಸಾ ನೀಡದೇ ಇದ್ದ ಪಕ್ಷದಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ತಟಸ್ಥ ರಾಷ್ಟ್ರವಾದ ಯುಎಇಗೆ ಸ್ಥಳಾಂತರಿಸಲು ಐಸಿಸಿ ಮೇಲೆ ನಾವು ಒತ್ತಡ ಹೇರಲಿದ್ದೇವೆ ಎಂದು ಮಣಿ ಹೇಳಿದ್ದಾರೆ.

ಈ ವರ್ಷ ಏಷ್ಯಾಕಪ್‌ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮಣಿ, ಶ್ರೀಲಂಕಾ ಈ ಬಾರಿ ಏಷ್ಯಾಕಪ್‌ ಆಯೋಜಿಸಿದ್ದು, ಟಿ20 ಮಾದರಿಯಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಜರುಗಲಿದೆ ಎಂದು ಹೇಳಿದ್ದಾರೆ.