ದುಬೈ(ಡಿ.15): 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು 2021ರ ಏಪ್ರಿಲ್‌ನಿಂದ ಆರಂಭವಾಗಲಿದೆ. ಈ ಸಂಬಂಧ ಐಸಿಸಿ ಸೋಮವಾರ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. 

ಕೊರೋನಾ ಕಾರಣದಿಂದಾಗಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ವರ್ಷಗಳ ಕಾಲ ಮುಂದೂಡಿಕೆ ಮಾಡಲಾಗಿತ್ತು. 15 ಸ್ಥಾನಗಳಿಗಾಗಿ 13 ತಿಂಗಳ ಅವಧಿಯಲ್ಲಿ 86 ತಂಡಗಳು 225 ಪಂದ್ಯಗಳಲ್ಲಿ ಪೈಪೋಟಿ ನಡೆಸಲಿವೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮುಂದಿನ ವರ್ಷದ ಏಪ್ರಿಲ್ ನಿಂದ ಅರ್ಹತಾ ಸುತ್ತಿನ ಪಂದ್ಯಗಳು 4 ಹಂತಗಳಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಹಂಗೇರಿ, ರೋಮೇನಿಯಾ ಮತ್ತು ಸರ್ಬಿಯಾ ರಾಷ್ಟ್ರಗಳು ಪುರುಷರ ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಸೆಣಸಲಿವೆ. 

ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿ ಬಗ್ಗೆಯೇ ಹೆಚ್ಚು ಚರ್ಚೆ..!

ಫಿನ್‌ಲೆಂಡ್ ಮೊದಲ ಬಾರಿ ಐಸಿಸಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿದೆ. ಜಪಾನ್ ಮೊದಲ ಬಾರಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ಆತಿಥ್ಯ ನೀಡಲಿದೆ. ಪ್ರಾದೇಶಿಕ ಮಟ್ಟದಲ್ಲಿ 67 ಸಹಾಯಕ ಸದಸ್ಯ ತಂಡಗಳು ಪಾಲ್ಗೊಳ್ಳಲಿವೆ. 2020ರಲ್ಲಿ ಆಸೀಸ್‌ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ 2021ರಲ್ಲಿ ಭಾರತದಲ್ಲಿ ನಡೆಯಲಿದೆ. ಈ ಪಂದ್ಯಾವಳಿಗೆ 16 ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ. ಆಸ್ಟ್ರೇಲಿಯಾ, ಆಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನಮೀಬಿಯಾ, ನೆದರ್ ಲೆಂಡ್, ನ್ಯೂಜಿಲೆಂಡ್, ಓಮನ್, ಪಾಕಿಸ್ತಾನ, ಪಪುವಾ ನ್ಯೂಗಿನಿಯಾ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ಅರ್ಹತೆ ಪಡೆದಿವೆ.