Asianet Suvarna News Asianet Suvarna News

'ನಾನೀಗ ಬದಲಾಗಿದ್ದೇನೆ..' ಭಾರತೀಯರ ಕ್ಷಮೆ ಕೋರಿದ ಪಾಕಿಸ್ತಾನದ ನಿರೂಪಕಿ ಜೈನಾಬ್‌ ಅಬ್ಬಾಸ್‌!

ಭಾರತ ವಿರೋಧಿ ಹಾಗೂ ಹಿಂದು ವಿರೋಧಿ ಟ್ವೀಟ್‌ ಮಾಡಿ ಭಾರತದಿಂದ ಗಡಿಪಾರಾಗಿರುವ ಪಾಕಿಸ್ತಾನದ ಕ್ರೀಡಾ ನಿರೂಪಕಿ ಜೈನಾಬ್‌ ಅಬ್ಬಾಸ್‌ ತಮ್ಮ ಹಳೆಯ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಭಾರತೀಯರ ಕ್ಷಮೆ ಯಾಚಿಸಿದ್ದಾರೆ.
 

Pakistan journalist Zainab Abbas apologises for old social media posts World Cup 2023 san
Author
First Published Oct 13, 2023, 6:55 PM IST

ನವದೆಹಲಿ (ಅ.13): ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಟಿವಿ ವಾಹಿನಿ ಪರವಾಗಿ ಕೆಲಸ ಮಾಡಲು ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಕ್ರೀಡಾ ನಿರೂಪಕಿ ಜೈನಾಬ್‌ ಅಬ್ಬಾಸ್‌ರನ್ನು ಭಾರತ ಗಡಿ ಪಾರು ಮಾಡಿತ್ತು. 10 ವರ್ಷಗಳ ಹಿಂದ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಭಾರತ ವಿರೋಧಿ ಹಾಗೂ ಹಿಂದೂ ಧರ್ಮದ ವಿರುದ್ಧವಾಗಿ ಅವರು ಮಾಡಿದ್ದ ಟ್ವೀಟ್‌ಗಳ ವಿರುದ್ಧ ವಕೀಲ ವಿನೀತ್‌ ಜಿಂದಾಲ್‌ ಸೈಬರ್‌ ಕ್ರೈಮ್‌ಗೆ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಭಾರತಕ್ಕೆ ಆಗಮಿಸಿದ್ದ ಅವರನ್ನು ಗಡಿಪಾರು ಮಾಡಲಾಗಿದೆ ಎಂದು ಅವರ ಕೆಲಸ ಮಾಡಲು ಪಾಕಿಸ್ತಾನದ ಟಾಮಾ ಟಿವಿಯೇ ತನ್ನ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿತ್ತು. ಬಳಿಕ ಈ ಟ್ವೀಟ್‌ಅನ್ನು ಅಳಿಸಿ ಹಾಕಿ, ಜೈನಾಬ್‌ ವೈಯಕ್ತಿಕ ಕಾರಣದಿಂದ ಭಾರತದಿಂದ ಹೊರಟಿದ್ದು, ಪ್ರಸ್ತುತ ದುಬೈನಲ್ಲಿದ್ದಾರೆ ಎಂದು ತಿಳಿಸಿದ್ದರು. ಇದರ ನಡುವೆ ಜೈನಾಬ್‌ ಅಬ್ಬಾಸ್‌ ಗುರುವಾರ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, 10 ವರ್ಷಗಳ ಹಿಂದೆ ತಾವು ಮಾಡಿದ್ದ ಟ್ವೀಟ್‌ಗೆ ಭಾರತೀಯ ಕ್ಷಮೆ ಯಾಚಿಸಿದ್ದಾರೆ. ತಮ್ಮ ಪೋಸ್ಟ್‌ನಿಂದ ಉಂಟಾದ ನೋವಿಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳ ಹಿಂದೆ ಮಾಡಿದ್ದ ಹಿಂದು ವಿರೋಧಿ ಹಾಗೂ ಭಾರತ ವಿರೋಧಿ ಟ್ವೀಟ್‌ಗಳು ಇಂದು ತನ್ನ ಮೌಲ್ಯಗಳನ್ನು ಪ್ರತಿನಿಧಿಸೋದಿಲ್ಲ ಎಂದು ಅವರು ಹೇಳಿದ್ದಾರೆ.

'ಅಂದು ಮಾಡಿದ್ದ ಟ್ವೀಟ್‌ ಇಂದು ನನ್ನ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ ಅಥವಾ ಇಂದು ವ್ಯಕ್ತಿಯಾಗಿ ನಾನು ಯಾರು ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ" ಎಂದು ಅಬ್ಬಾಸ್‌ ಬರೆದುಕೊಂಡಿದ್ದಾರೆ. ನಾನು ಬರೆದ ಭಾಷೆಗೆ ಹಾಗೂ ಅಂಥ ವಿಚಾರಗಳಿಗೆ ಇಂದು ಯಾವುದೇ ಸ್ಥಳವಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಅಂದಿನ ನನ್ನ ಟ್ವೀಟ್‌ನಿಂದ ಮನನೊಂದಿರುವ ಯಾರಿಗಾದರೂ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ' ಎಂದು ಅವರು ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ತಾವು ಮಾಡಿದ್ದ ವಿವಾದಾತ್ಮಕ ಟ್ವೀಟ್‌ಗಳ ಕಾರಣಕ್ಕಾಗಿ ಜೈನಾಬ್‌ ಅಬ್ಬಾಸ್‌ ಅವರನ್ನು ಭಾರತದಿಂದ ಗಡಿಪಾರು ಮಾಡಲಾಗಿದೆ ಎಂದು ಹೇಳಲಾಗಿತ್ತು. ಭಾರತಕ್ಕೆ ಬರುತ್ತಿರುವ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲ ಬೇಡಿಕೆಗಳು ಬಂದಿದ್ದವು. ಈಕೆಯ ಬಂಧನ ಕೋರಿ ವಕೀಲರೊಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು.
ಆದರೆ, ಗುರುವಾರ ಟ್ವೀಟ್‌ ಮಾಡಿದ ಜೈನಾಬ್‌, ಭಾರತದಿಂದ ತಮ್ಮನ್ನು ಗಡಿಪಾರು ಮಾಡಲಾಗಿದೆ ಎನ್ನುವ ಸುದ್ದಿಯನ್ನು ನಿರಾಕರಿಸಿದರು. ಆದರೆ, ಭದ್ರತಾ ಕಾರಣದಿಂದಾಗಿ ತಾವು ಭಾರತವನ್ನು ತೊರೆದಿದ್ದಾಗಿ ತಿಳಿಸಿದ್ದಾರೆ. 'ಭಾರತದಿಂದ ಹೊರಹೋಗುವಂತೆ ನನಗೆ ಹೇಳಿರಲಿಲ್ಲ ಅಥವಾ ನನ್ನನ್ನೂ ಗಡಿಪಾರು ಮಾಡಲಾಗಿರಲಿಲ್ಲ. ಆದರೆ, ಆನ್‌ಲೈನ್‌ನಲ್ಲಿ ನನ್ನ ಕುರಿತಾಗಿ ಬರುತ್ತಿದ್ದ ಪ್ರತಿಕ್ರಿಯೆಗಳಿಂದ ಭಯಭೀತಳಾಗಿದ್ದೆ' ಎಂದು ಬರೆದಿದ್ದಾರೆ.

ಸುರಕ್ಷತೆಗೆ ಯಾವುದೇ ತಕ್ಷಣದ ಬೆದರಿಕೆ ಇಲ್ಲದಿದ್ದರೂ, ನನ್ನ ಕುಟುಂಬ ಮತ್ತು ಗಡಿಯ ಎರಡೂ ಕಡೆಯ ಸ್ನೇಹಿತರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅಬ್ಬಾಸ್ ಹೇಳಿದರು. "ಏನು ಸಂಭವಿಸಿದೆ ಎಂಬುದನ್ನು ಪ್ರತಿಬಿಂಬಿಸಲು ನನಗೆ ಸ್ವಲ್ಪ ಸ್ಥಳ ಮತ್ತು ಸಮಯ ಬೇಕಿತ್ತು' ಎಂದು ಬರೆದಿದ್ದಾರೆ. ಭಾರತದಲ್ಲಿ ಉಳಿದಿಕೊಂಡಿದ್ದ ಅಲ್ಪ ಸಮಯದಲ್ಲಿ ಎಲ್ಲರೊಂದಿಗಿನ ದೈನಂದಿನ ಸಂವಹನವು ಸುಗಮವಾಗಿ ಸಾಗಿತ್ತು. ನಾನು ನಿರೀಕ್ಷೆ ಮಾಡಿದಂತೆ ಯಾವುದೇ ಸಮಸ್ಯೆಗಳೂ ಉದ್ಭವಿಸಿರಲಿಲ್ಲ ಎಂದು ಹೇಳಿದ್ದಾರೆ. ಅಬ್ಬಾಸ್ ಭಾರತವನ್ನು ತೊರೆದಿದ್ದಾರೆ ಎಂಬ ವರದಿಗಳು ಸೋಮವಾರ ಹೊರಬಿದ್ದಿವೆ ಆದರೆ ಈ ಕ್ರಮದ ಹಿಂದಿನ ಕಾರಣದ ಬಗ್ಗೆ ಯಾವುದೇ ಅಧಿಕೃತ ಮಾತುಗಳು ಬಂದಿಲ್ಲ. ಭಾರತ ಮತ್ತು ಹಿಂದೂಗಳ ವಿರುದ್ಧ ತನ್ನ ಹಳೆಯ ಟ್ವೀಟ್‌ಗಳ ಮೇಲೆ ಗಲಾಟೆ ಭುಗಿಲೆದ್ದ ನಂತರ ಜೈನಾಬ್‌ ಅವರನ್ನು ಭಾರತದಿಂದ ಗಡಿಪಾರು ಮಾಡಲಾಗಿತ್ತು. ಆಕೆಯನ್ನು ಗಡಿಪಾರು ಮಾಡುವ ಕೆಲವು ದಿನಗಳ ಮೊದಲು, ವಕೀಲರೊಬ್ಬರು ಅಬ್ಬಾಸ್ ವಿರುದ್ಧ ಅಧಿಕೃತ ದೂರನ್ನು ದಾಖಲಿಸಿದರು ಮತ್ತು ಅವರ ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಕಾಮೆಂಟ್‌ಗಳಿಗಾಗಿ ಅವರನ್ನು ಬಂಧಿಸುವಂತೆ ಅಧಿಕಾರಿಗಳನ್ನು ಒತ್ತಾಯ ಮಾಡಿದ್ದರು.

 

World Cup 2023: ನಿರೂಪಣೆಗಾಗಿ ಬಂದಿದ್ದ ಪಾಕ್‌ ಸುಂದರಿ ಭಾರತದಿಂದ ಗಡಿಪಾರು!

"ಹಿಂದೂ ನಂಬಿಕೆ ಮತ್ತು ನಂಬಿಕೆಗಳಿಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮತ್ತು ಭಾರತ ವಿರೋಧಿ ಹೇಳಿಕೆಗಳಿಗಾಗಿ" ಐಟಿ ಕಾಯಿದೆಯ ಸೆಕ್ಷನ್ 153A, 295, 506, 121 IPC ಮತ್ತು ಸೆಕ್ಷನ್ 67 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ವಕೀಲ ವಿನೀತ್‌ ಜಿಂದಾಲ್ ತನ್ನ ದೂರಿನಲ್ಲಿ ದೆಹಲಿ ಪೊಲೀಸರಿಗೆ ವಿನಂತಿ ಮಾಡಿದ್ದರು. ಈ ನಡುವೆ ಶನಿವಾರ (ಅಕ್ಟೋಬರ್ 14) ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ವರದಿ ಮಾಡಲು ಪಾಕಿಸ್ತಾನದ ಪತ್ರಕರ್ತರು ಭಾರತಕ್ಕೆ ಪ್ರಯಾಣಿಸಲು ಇನ್ನೂ ವೀಸಾಗಾಗಿ ಕಾಯುತ್ತಿದ್ದಾರೆ.

ಕೆ.ಎಲ್.ರಾಹುಲ್ ಆಟಕ್ಕೆ ಮನಸೋತ ಪಾಕ್ ಆ್ಯಂಕರ್ ?

Pakistan journalist Zainab Abbas apologises for old social media posts World Cup 2023 san

Follow Us:
Download App:
  • android
  • ios