World Cup 2023: ನಿರೂಪಣೆಗಾಗಿ ಬಂದಿದ್ದ ಪಾಕ್ ಸುಂದರಿ ಭಾರತದಿಂದ ಗಡಿಪಾರು!
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ಗಾಗಿ ಪಾಕಿಸ್ತಾನದಿಂದ ಬಂದಿದ್ದ ಕ್ರೀಡಾ ನಿರೂಪಕಿಯನ್ನು ದೇಶದಿಂದ ಗಡಿಪಾರು ಮಾಡಲಾಗಿದೆ. 10 ವರ್ಷಗಳ ಹಿಂದಿನ ಟ್ವೀಟ್‌ಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಪಾಕಿಸ್ತಾನದ ಸುಂದರ ಕ್ರೀಡಾ ನಿರೂಪಕಿ ಜೈನಾಬ್ ಅಬ್ಬಾಸ್, 2023ರ ಕ್ರಿಕೆಟ್ ಏಕದಿನ ವಿಶ್ವಕಪ್ ಟೂರ್ನಿಯ ನಿರೂಪಣೆಗಾಗಿ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು.
ಈಗ ಬಂದಿರುವ ಮಾಹಿತಿಯ ಪ್ರಕಾರ ಇವರನ್ನು ಭಾರತದಿಂದ ಗಡಿಪಾರು ಮಾಡಲಾಗಿದೆ. ಇದನ್ನು ಸ್ವತಃ ಅವರು ಪ್ರತಿನಿಧಿಸುವ ಟಿವಿ ವಾಹಿನಿಯೇ ತಿಳಿಸಿದೆ.
ಅಂದಾಜು 10 ವರ್ಷಗಳ ಹಿಂದೆ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಿರುವ ಟ್ವೀಟ್‌ಗಳೇ ಅವರಿಗೆ ಈ ಬಾರಿ ಹಿನ್ನಡೆಯಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಸಾಮಾ ಟಿವಿ ಕೂಡ ಇದನ್ನು ಖಚಿತಪಡಿಸಿದೆ. ಹಳೆಯ ಟ್ವೀಟ್‌ಗಳ ಕುರಿತಾಗಿ ಅವರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಯಲ್ಲಿ ಭಾರತದಿಂದ ಅವರನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದೆ.
ಭಾರತ ಹಾಗೂ ಹಿಂದೂ ಧರ್ಮದ ಕುರಿತಾಗಿ ಅಂದಾಜು 10 ವರ್ಷಗಳ ಹಿಂದೆ ಜೈನಾಬ್ ಅಬ್ಬಾಸ್ ಟ್ವೀಟ್ ಮಾಡಿದ್ದರು. ಈ ಕುರಿತಾಗಿ ಸೈಬರ್ ಕ್ರೈಮ್‌ನಲ್ಲಿ ದೂರು ದಾಖಲಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ ಆಕೆ ಮಾಡಿರುವ ಟ್ವೀಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಲಾಗಿದೆ. ಹಾಗಿದ್ದರೂ, ಅಂದು ತಮ್ಮ ಟ್ವೀಟ್‌ನಲ್ಲಿ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.
ಭಾರತ ಮಾತ್ರವಲ್ಲದೆ, ಹಿಂದೂ ಧರ್ಮ ಭಾರತದಲ್ಲಿ ಪೂಜೆ ಮಾಡುವ ದೇವರು ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಜೈನಾಬ್ ಟ್ವೀಟ್ ಮಾಡಿದ್ದರು.
ಈ ಕುರಿತಾಗಿ ವಕೀಲ ವಿನೀತ್ ಜಿಂದಾಲ್, ಜೈನಾಬ್ ಅಬ್ಬಾಸ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಅವರನ್ನು ದೇಶದಿಂದ ಗಡಿಪಾರು ಮಾಡಲಾಗಿದೆ ಎಂದು ವರದಿಯಾಗಿದೆ.
ಅತಿಥಿ ದೇವೋ ಭವ ನಮ್ಮ ದೇಶ ಮತ್ತು ಹಿಂದೂ ಧರ್ಮವನ್ನು ಗೌರವಿಸುವವರಿಗೆ ಮಾತ್ರ. ಆದರೆ ನಮ್ಮ ಭೂಮಿಯಲ್ಲಿ ಭಾರತೀಯ ವಿರೋಧಿಗಳಿಗೆ ಸ್ವಾಗತವಿಲ್ಲ ಎಂದು ವಿನೀತ್ ಜಿಂದಾಲ್ ಹೇಳಿದ್ದಾರೆ.
ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕಟ್ ಸಮಿತಿ ಕೂಡ ಏನೂ ಮಾಡುವ ಹಾಗೆ ಇಲ್ಲ. ಇದು ಎರಡು ದೇಶಗಳ ನಡುವಿನ ವಿಷಯವಾಗಿರುವ ಕಾರಣ, ಐಸಿಸಿ ಇದರಲ್ಲಿ ತಲೆಹಾಕುವುದಿಲ್ಲ.
ಇದೇ ಕಾರಣಕ್ಕಾಗಿ ಐಸಿಸಿ ಈವರೆಗೂ ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಸರಣಿಯ ಕುರಿತಾಗಿ ಎರಡೂ ದೇಶಗಳಿಗೆ ಯಾವುದೇ ಒತ್ತಾಯ ಮಾಡಿಲ್ಲ.
ಪಾಕಿಸ್ತಾನದ ಸಾಮಾ ಟಿವಿ ಮೊದಲಿಗೆ ಮಾಡಿದ್ದ ಟ್ವೀಟ್‌ನಲ್ಲಿ ಜೈನಾಬ್ ಅಬ್ಬಾಸ್ ಅವರನ್ನು ಭಾರತದಿಂದ ಗಡಿಪಾರು ಮಾಡಲಾಗಿದೆ ಎಂದು ಟ್ವೀಟ್ ಮಾಡಿತ್ತು,
ಕೆಲ ಹೊತ್ತಿನ ಬಳಿಕ ಟ್ವೀಟ್ ಅನ್ನು ಡಿಲೀಟ್ ಮಾಡಿದಿ ಟಿವಿ ಚಾನೆಲ್, ಭದ್ರತಾ ಕಾರಣಗಳಿಂದಾಗಿ ಜೈನಾಬ್ ಅಬ್ಬಾಸ್ ಭಾರತವನ್ನು ತೊರೆದು ದುಬೈಗೆ ವಾಪಾಸಾಗಿದ್ದಾರೆ ಎಂದು ಮತ್ತೊಂದು ಪೋಸ್ಟ್ ಮಾಡಿದೆ.
ಭಾರತಕ್ಕೆ ಹೊರಡುವ ಮೊದಲು, ಎರಡೂ ದೇಶಗಳ ವ್ಯತಿರಿಕ್ತ ನಂಬಿಕೆಗಳ ಹೊರತಾಗಿಯೂ ಭಾರತದ ಸಂಸ್ಕೃತಿಯನ್ನು ಅನ್ವೇಷಿಸುವ ಬಗ್ಗೆ ಅತ್ಯಂತ ಉತ್ಸುಕಳಾಗಿರುವುದಾಗಿ ಜೈನಾಬ್ ಬರೆದುಕೊಂಡಿದ್ದರು ಮತ್ತು ಮುಂದಿನ 6 ವಾರಗಳಿಗಾಗಿ ಎದುರು ನೋಡುತ್ತಿರುವುದಾಗಿ ಟ್ವೀಟ್ ಮಾಡಿದ್ದರು.
ಆದರೆ, 35 ವರ್ಷದ ಜೈನಾಬ್ ಅಬ್ಬಾಸ್ ಅವರ ಈ ಆಸೆ ಕಮರಿಹೋಗಿದೆ. 10 ವರ್ಷದ ಹಿಂದೆ ಭಾರತ ವಿರೋಧಿ ಟ್ವೀಟ್ ಮಾಡಿದ್ದು ಅವರಿಗೆ ಮುಳುವಾಗಿ ಪರಿಣಮಿಸಿದೆ.
ಜೈನಾಬ್ ಅಬ್ಬಾಸ್ ಈಗಾಗಲೇ ಹಲವು ಐಸಿಸಿ ಟೂರ್ನಿಗಳು ಹಾಗೂ ಪಾಕಿಸ್ತಾನದ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.