ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನಿಂದಾಗಿ ಟೀಂ ಇಂಡಿಯಾದ ಟಿ20 ವಿಶ್ವಕಪ್ ಸೆಮಿಫೈನಲ್ ಆಸೆ ಕಠಿಣವಾಗಿದೆ. ಸೆಮಿಫೈನಲ್ ಪ್ರವೇಶಿಸಲು ಭಾರತವು ತನ್ನ ಮುಂದಿನ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಲೇಬೇಕು.  ಇದರ ಜತೆಗೆ ಅದೃಷ್ಟ ಕೂಡಾ ಸೂರ್ಯಕುಮಾರ್ ಯಾದವ್ ಪಡೆಯ ಕೈಹಿಡಿಯಬೇಕಿದೆ.

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನ ನಂತರ, ಟೀಂ ಇಂಡಿಯಾದ ಟಿ20 ವಿಶ್ವಕಪ್ ಸೆಮಿಫೈನಲ್ ಕನಸು ಡೋಲಾಯಮಾನವಾಗಿದೆ. ಸೆಮಿ ಪ್ರವೇಶಿಸಲು ಭಾರತದ ಮುಂದಿರುವ ದಾರಿಗಳೇನು? ಯಾವೆಲ್ಲಾ ತಂಡದ ಸೋಲು-ಗೆಲುವುಗಳು ಭಾರತದ ಸೆಮಿಫೈನಲ್ ಭವಿಷ್ಯ ನಿರ್ಧರಿಸಲಿದೆ ಎನ್ನುವುದನ್ನು ನೋಡೋಣ ಬನ್ನಿ.

Add Asianetnews Kannada as a Preferred SourcegooglePreferred

ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾದ ಸೆಮಿಫೈನಲ್ ಆಸೆಗಳು ತೂಗುಯ್ಯಾಲೆಯಲ್ಲಿವೆ. ಅಹಮದಾಬಾದ್‌ನಲ್ಲಿ ಭಾರತ ನೀಡಿದ ಪ್ರದರ್ಶನ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಹಾಗಾದರೆ, ಭಾರತ ಸೆಮಿಫೈನಲ್ ತಲುಪಲು ಏನು ಮಾಡಬೇಕು? ಆ ಸಾಧ್ಯತೆಗಳನ್ನು ನೋಡೋಣ. ಟಿ20 ವಿಶ್ವಕಪ್‌ನ ಸೂಪರ್ 8ರ ಮೊದಲ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಸೋಲು ತಂಡದ ಸೆಮಿಫೈನಲ್ ಆಸೆಗೆ ದೊಡ್ಡ ಹೊಡೆತ ನೀಡಿದೆ. ಈ ದೊಡ್ಡ ಅಂತರದ ಸೋಲು ಟೀಂ ಇಂಡಿಯಾ ನೆಟ್‌ ರನ್‌ರೇಟ್‌ ಪಾತಾಳಕ್ಕೆ ಕುಸಿಯುವಂತೆ ಮಾಡಿದೆ. ಸೂಪರ್ 8ರ ಉಳಿದ ಎರಡು ಪಂದ್ಯಗಳಲ್ಲಿ ಭಾರತವು ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕು. ಈ ಎರಡರಲ್ಲಿ ಒಂದರಲ್ಲಿ ಸೋತರೂ ಹಾಲಿ ಚಾಂಪಿಯನ್ನರ ಸೆಮಿಫೈನಲ್ ಕನಸು ಅಧಿಕೃತವಾಗಿ ಭಗ್ನವಾಗಲಿದೆ.

ಈಗ ಟೀಂ ಇಂಡಿಯಾಗೆ ಕೇವಲ ಗೆಲುವು ಸಾಕಾಗುವುದಿಲ್ಲ!

ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಅನುಭವಿಸಿದ್ದು ಟಿ20 ವಿಶ್ವಕಪ್ ಇತಿಹಾಸದಲ್ಲೇ ತನ್ನ ಅತ್ಯಂತ ದೊಡ್ಡ ಸೋಲು. 76 ರನ್‌ಗಳ ಈ ಹೀನಾಯ ಸೋಲಿನಿಂದಾಗಿ ಭಾರತದ ನೆಟ್ ರನ್‌ರೇಟ್ -3.80ಕ್ಕೆ ಕುಸಿದಿದೆ. ಹೀಗಾಗಿ, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಕೇವಲ ಗೆದ್ದರೆ ಸಾಲದು. ನೆಟ್ ರನ್‌ರೇಟ್ ಸುಧಾರಿಸಲು ದೊಡ್ಡ ಅಂತರದ ಗೆಲುವುಗಳೇ ಬೇಕು.

ಅದೃಷ್ಟ ಕೂಡಾ ಕೈಹಿಡಿಯಬೇಕಿದೆ!

ಭಾರತ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ, ವೆಸ್ಟ್ ಇಂಡೀಸ್-ಜಿಂಬಾಬ್ವೆ ಪಂದ್ಯ ಸೇರಿದಂತೆ ಗುಂಪಿನ ಇತರ ಪಂದ್ಯಗಳ ಫಲಿತಾಂಶಗಳೂ ನಿರ್ಣಾಯಕವಾಗಲಿವೆ. ನಾಲ್ಕು ತಂಡಗಳ ಗುಂಪಿನಿಂದ ಕೇವಲ ಎರಡು ತಂಡಗಳು ಮಾತ್ರ ಸೆಮಿಫೈನಲ್‌ಗೆ ಹೋಗುತ್ತವೆ. ಅಂಕಗಳು ಸಮವಾದರೆ, ನೆಟ್ ರನ್‌ರೇಟ್ ನಿರ್ಣಾಯಕ ಪಾತ್ರ ವಹಿಸುತ್ತದೆ.

ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಮುಂದೆ ಈಗ ಎರಡು ಅಗ್ನಿಪರೀಕ್ಷೆಗಳಿವೆ. ಮೊದಲನೆಯದು ಜಿಂಬಾಬ್ವೆ ವಿರುದ್ಧ. ಈ ಪಂದ್ಯವು ಗುರುವಾರ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾವನ್ನು ಸೋಲಿಸಿ ಜಿಂಬಾಬ್ವೆ ಸೂಪರ್ 8ಕ್ಕೆ ಬಂದಿರುವುದರಿಂದ, ಈ ಆಫ್ರಿಕನ್ ತಂಡವನ್ನು ಭಾರತ ಹಗುರವಾಗಿ ಪರಿಗಣಿಸುವಂತಿಲ್ಲ. ಇನ್ನು ಜಿಂಬಾಬ್ವೆಯನ್ನು ಮಣಿಸಿದರೆ, ಭಾರತಕ್ಕೆ ಮುಂದಿನ ಎದುರಾಳಿ ವೆಸ್ಟ್ ಇಂಡೀಸ್. ಭಾನುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ-ವೆಸ್ಟ್ ಇಂಡೀಸ್ ಸೂಪರ್-8 ಪಂದ್ಯ ನಡೆಯಲಿದೆ. ಜಿಂಬಾಬ್ವೆ ವಿರುದ್ಧ ಗೆದ್ದರೆ, ಭಾರತಕ್ಕೆ ಇದು ನಾಕೌಟ್ ಪಂದ್ಯದಂತೆಯೇ ಇರುತ್ತದೆ. ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಬಂದಿರುವ ವಿಂಡೀಸ್ ತಂಡವನ್ನು ಸೋಲಿಸುವುದು ಭಾರತಕ್ಕೆ ಕಠಿಣ ಸವಾಲಾಗಲಿದೆ.

ದಕ್ಷಿಣ ಆಫ್ರಿಕಾಕ್ಕೆ ಸ್ವಲ್ಪ ಸುಲಭ

ಭಾರತವನ್ನು ಸೋಲಿಸಿ ದಕ್ಷಿಣ ಆಫ್ರಿಕಾ ಮುನ್ನಡೆ ಸಾಧಿಸಿದ್ದರೂ, ಅವರೂ ಕೂಡ ಸೆಮಿಫೈನಲ್ ಸ್ಥಾನವನ್ನು ಇನ್ನೂ ಖಚಿತಪಡಿಸಿಕೊಂಡಿಲ್ಲ. ಆದರೆ, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮುಂದಿನ 2 ಪಂದ್ಯಗಳಲ್ಲಿ ಒಂದರಲ್ಲಿ ಸೋತರೂ ಸೆಮಿ ತಲುಪುವ ಅವಕಾಶ ಅವರಿಗಿದೆ. ಭಾರತದ ವಿರುದ್ಧದ ಭರ್ಜರಿ ಗೆಲುವಿನಿಂದಾಗಿ ಉತ್ತಮ ನೆಟ್ ರನ್‌ರೇಟ್ ಹೊಂದಿರುವುದು ದಕ್ಷಿಣ ಆಫ್ರಿಕಾಕ್ಕೆ ಪ್ಲಸ್ ಪಾಯಿಂಟ್.

ದಕ್ಷಿಣ ಆಫ್ರಿಕಾ ಸೋತರೆ ಭಾರತಕ್ಕೆ ಕಷ್ಟ

ಮುಂದಿನ ಪಂದ್ಯಗಳಲ್ಲಿ ಜಿಂಬಾಬ್ವೆ ಅಥವಾ ವೆಸ್ಟ್ ಇಂಡೀಸ್ ತಂಡಗಳು ದಕ್ಷಿಣ ಆಫ್ರಿಕಾವನ್ನು ಸೋಲಿಸಿದರೆ, ಭಾರತದ ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದೆ. ಹಾಗಾಗಿ, ಮುಂಬರುವ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು ವಿಂಡೀಸ್ ಮತ್ತು ಜಿಂಬಾಬ್ವೆಯನ್ನು ಸೋಲಿಸಲಿ ಎಂದು ಭಾರತ ಬಯಸುತ್ತದೆ. ಇದರಿಂದ ಭಾರತಕ್ಕೆ ನೆಟ್ ರನ್‌ರೇಟ್‌ನ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.

ನೆಟ್ ರನ್‌ರೇಟ್ ಸಮವಾದರೆ ಯಾರು ಸೆಮಿಗೆ?

ಸೂಪರ್ 8ರ ಒಂದು ಗುಂಪಿನಿಂದ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ತಂಡಗಳ ಅಂಕಗಳು ಸಮವಾದರೆ, ಹೆಚ್ಚು ಪಂದ್ಯ ಗೆದ್ದ ತಂಡ ಮೊದಲು ಸೆಮಿಫೈನಲ್ ಪ್ರವೇಶಿಸುತ್ತದೆ. ಅಂಕಗಳು ಮತ್ತು ಗೆಲುವುಗಳು ಎರಡೂ ಸಮವಾದರೆ, ಉತ್ತಮ ನೆಟ್ ರನ್‌ರೇಟ್ ಹೊಂದಿರುವ ತಂಡ ಸೆಮಿಫೈನಲ್‌ಗೆ ಹೋಗುತ್ತದೆ. ನೆಟ್ ರನ್‌ರೇಟ್ ಕೂಡ ಸಮವಾದರೆ, ಮುಖಾಮುಖಿ ಪಂದ್ಯದಲ್ಲಿ ಗೆದ್ದ ತಂಡವು ಮುಂದೆ ಸಾಗುತ್ತದೆ.

ಸದ್ಯಕ್ಕೆ ಟೀಂ ಇಂಡಿಯಾದ ಗುರಿ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡವನ್ನು ಭಾರೀ ಅಂತರದಿಂದ ಮಣಿಸಬೇಕು ಹಾಗೂ ಅದೃಷ್ಟ ಕೂಡಾ ಕೈಹಿಡಿದರಷ್ಟೇ ಟೀಂ ಇಂಡಿಯಾ, ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಲು ಸಾಧ್ಯವಾಗಲಿದೆ.