ಬಹುನಿರೀಕ್ಷಿತ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ತಂಡವು ಬಹಿಷ್ಕರಿಸಿದೆ ಎಂದು ಪಾಕ್ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಈ ನಿರ್ಧಾರದಿಂದ ಭಾರತಕ್ಕೆ ವಾಕ್‌ಓವರ್ ಸಿಗಲಿದ್ದು, ಐಸಿಸಿ ಹಾಗೂ ಪ್ರಸಾರಕರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ.
Pakistan Boycotts India Match in ICC T20 World Cup : ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಪಾಕಿಸ್ತಾನ ತಂಡವು ಭಾರತ ಎದುರಿನ ಪಂದ್ಯವನ್ನು ಬಾಯ್ಕಾಟ್ ಮಾಡಿದೆ. ಈ ಮೂಲಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ.
ಹೌದು, ಪಾಕಿಸ್ತಾನ ಸರ್ಕಾರದ ಅಧಿಕಾರಿಗಳು ಅಧಿಕೃತವಾಗಿ ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದೆ. ಆದರೆ ಫೆಬ್ರವರಿ 15ರಂದು ಕೊಲಂಬೋದಲ್ಲಿ ನಿಗದಿಯಾಗಿದ್ದ ಭಾರತ ಎದುರಿನ ಪಂದ್ಯವನ್ನು ಪಾಕಿಸ್ತಾನ ತಂಡವು ಬಾಯ್ಕಾಟ್ ಮಾಡಿದೆ ಎಂದು ತಿಳಿಸಿದೆ. 'ಪಾಕಿಸ್ತಾನ ತಂಡವು ಫೆಬ್ರವರಿ 15ರಂದು ಭಾರತ ವಿರುದ್ದ ಕ್ರಿಕೆಟ್ ಆಡಲು ಮೈದಾನಕ್ಕಿಳಿಯುವುದಿಲ್ಲ' ಎಂದು ಎಕ್ಸ್ ಮೂಲಕ ಘೋಷಿಸಿದೆ. ಆದರೆ ಪಾಕಿಸ್ತಾನ ತಂಡವು ಯಾವ ಕಾರಣಕ್ಕಾಗಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರಿನ ಮ್ಯಾಚ್ ಬಾಯ್ಕಾಟ್ ಮಾಡಿದೆ ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿಲ್ಲ.
ಪಾಕ್ ಆಡದಿದ್ದರೆ ಏನಾಗುತ್ತೆ?
1. ಪಾಕ್ ತಂಡ ಭಾರತ ವಿರುದ್ಧ ಆಡದಿದ್ದರೆ ಅದನ್ನು ವಾಕ್‌ಓವರ್ ಎಂದು ಪರಿಗಣಿಸಿ, ಭಾರತಕ್ಕೆ 2 ಅಂಕ ನೀಡಲಾಗುತ್ತದೆ.
2. ಹೀಗಾದರೆ ಪಾಕ್‌ಗೆ ಗುಂಪು ಹಂತದಲ್ಲಿ ಇನ್ನುಳಿದ ಎಲ್ಲಾ 3 ಪಂದ್ಯಗಳಲ್ಲೂ ಗೆಲ್ಲಲೇಬೇಕಾಗುತ್ತದೆ. ಹೀಗಾದರೆ ಮಾತ್ರ ಕ್ವಾರ್ಟರ್ ಫೈನಲ್‌ಗೇರಬಹುದು.
3. ಇನ್ನು, ಆರ್ಥಿಕವಾಗಿ ಐಸಿಸಿಗೆ ಭಾರತ-ಪಾಕ್ ಪಂದ್ಯ ಅನಿವಾರ್ಯ. ಪಾಕ್ ಆಡದಿದ್ದರೆ ಐಸಿಸಿ, ಬ್ರಾಡ್‌ಕಾಸ್ಟರ್‌ಗಳಿಗೆ ಭಾರೀ ನಷ್ಟವಾಗಲಿದೆ.
ಐಸಿಸಿಗೆ ನಷ್ಟವಾದ್ರೆ ಪಾಕ್‌ಗೂ ಸಂಕಷ್ಟ
ಭಾರತ-ಪಾಕ್ ಪಂದ್ಯ ಆರ್ಥಿಕವಾಗಿ ಐಸಿಸಿಗೆ ಬಹಳ ಪ್ರಾಮುಖ್ಯವಾದದ್ದು. ಈ ಪಂದ್ಯದ ಪ್ರಸಾರದಿಂದಲೇ ಬಹುಕೋಟಿ ಲಾಭ ಸಿಗಲಿದೆ. ಪ್ರಾಯೋಜಕರು, ಪ್ರಸಾರಕರು, ಜಾಹೀರಾತುದಾರರಿಗೂ ವಿಶ್ವಕಪ್‌ನಲ್ಲೇ ಈ ಪಂದ್ಯ ಹೆಚ್ಚು ಮಹತ್ವದ್ದು. ಒಂದು ವೇಳೆ ಪಾಕ್ ತಂಡ ಭಾರತ ವಿರುದ್ಧ ಆಡದಿದ್ದರೆ ಐಸಿಸಿಗೆ ಆರ್ಥಿಕ ನಷ್ಟವಾಗುವುದು ಖಚಿತ. ಪ್ರಸಾರಕರಿಗೂ ಇದರಿಂದ ನಷ್ಟ ಉಂಟಾಗಲಿದೆ. ಹಾಗಾಗಿ ಐಸಿಸಿ ಕೂಡ ಪಿಸಿಬಿ ಮೇಲೆ ಹಲವು ನಿರ್ಬಂಧ ಹೇರಬಹುದು. ವಾರ್ಷಿಕವಾಗಿ ನೀಡುವ ಲಾಭಾಂಶದಲ್ಲೂ ಪಾಕಿಸ್ತಾನಕ್ಕೆ ಹಣ ಕಡಿತಗೊಳಿಸುವ ಸಾಧ್ಯತೆ ಇದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವೇಳಾಪಟ್ಟಿ ಹೀಗಿದೆ:
ಫೆಬ್ರವರಿ 07: ಪಾಕಿಸ್ತಾನ-ನೆದರ್‌ಲೆಂಡ್ಸ್
ಫೆಬ್ರವರಿ 10: ಪಾಕಿಸ್ತಾನ - ಯುಎಸ್‌ಎ
ಫೆಬ್ರವರಿ 15: ಪಾಕಿಸ್ತಾನ- ಭಾರತ
ಫೆಬ್ರವರಿ 18: ಪಾಕಿಸ್ತಾನ- ನಮೀಬಿಯಾ


