ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ ನಂತರ, ಭಾರತೀಯ ಆಟಗಾರರ ಸಂಭ್ರಮಾಚರಣೆಯನ್ನು ಮೋಹಿತ್ ಉಲ್ವಾ ಸಮರ್ಥಿಸಿಕೊಂಡಿದ್ದಾರೆ. ಪಾಕಿಸ್ತಾನದ ಅತಿಯಾದ ಆತ್ಮವಿಶ್ವಾಸ ಮತ್ತು ಗುಂಪು ಹಂತದ ಸೋಲಿನ ಪ್ರತೀಕಾರವೇ ಈ ಸ್ಮರಣೀಯ ಗೆಲುವಿಗೆ ಕಾರಣ ಎಂದು ಅವರು ವಿವರಿಸಿದ್ದಾರೆ.

ನವದೆಹಲಿ (ನ.18): ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಅವಿಸ್ಮರಣೀಯ ಜಯ ತಂದುಕೊಟ್ಟ ಯುವ ಆಟಗಾರ ಮೋಹಿತ್ ಉಲ್ವಾ (Mohit Ulva), ಪಂದ್ಯದ ನಂತರ ಭಾರತೀಯ ಆಟಗಾರರು ನಡೆಸಿದ ಆಕ್ರಮಣಕಾರಿ ಸಂಭ್ರಮಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಗುಂಪು ಹಂತದಲ್ಲಿ ನಮ್ಮನ್ನು ಸೋಲಿಸಿದಾಗ ಪಾಕಿಸ್ತಾನದ ಸಂಭ್ರಮಾಚರಣೆ ಅತಿಯಾಗಿತ್ತು. ನಾವು ಮತ್ತೆ ಫೈನಲ್‌ನಲ್ಲಿ ಭೇಟಿಯಾಗುತ್ತೇವೆ ಎಂಬುದನ್ನು ಅವರು ಮರೆತಿದ್ದರು' ಎಂದು ಮೋಹಿತ್ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಮೋಹಿತ್ ಉಲ್ವಾ ತಮ್ಮ ಕ್ರಿಕೆಟ್ ಪಯಣ ಆರಂಭಿಸಿದ್ದು ಒಬ್ಬ ಬೌಲರ್ ಆಗಿ. ಮೊದಲಿಗೆ ಆಫ್-ಸ್ಪಿನ್ನರ್ ಆಗಿ, ನಂತರ ವೇಗದ ಬೌಲರ್ ಆಗಿ. ದೇಶದಲ್ಲಿ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳ ಕೊರತೆಯಿರುವುದರಿಂದ ಭಾರತ ತಂಡಕ್ಕೆ ಆಯ್ಕೆಯಾಗುವ ಹಾದಿ ಸುಗಮವಾಗಲಿ ಎಂಬ ಉದ್ದೇಶದಿಂದ ಅವರ ಕೋಚ್ ಮಹೇಂದ್ರಸಿನ್ಹ ಚೌಹಾಣ್ ಬ್ಯಾಟಿಂಗ್ ಮಾಡುವಂತೆ ಸೂಚಿಸಿದ್ದರು. ಆದರೆ, ಮೋಹಿತ್‌ಗೆ ಅಂತಹ ವೃತ್ತಿಜೀವನದ ಲೆಕ್ಕಾಚಾರಗಳಲ್ಲಿ ಆಸಕ್ತಿ ಇರಲಿಲ್ಲ.

ಸದ್ಯ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ತಮ್ಮ ರಾಜ್ಯ ತಂಡ ಸೌರಾಷ್ಟ್ರ ಪರ ಆಡಲು ಇಂದೋರ್‌ನಲ್ಲಿರುವ 18 ವರ್ಷದ ಮೋಹಿತ್, ಮಾಧ್ಯಮಗಳ ಜೊತೆ ಮಾತನಾಡುತ್ತಾ, ನಾನು ಯಾವಾಗಲೂ ಬಯಸಿದ್ದು ವಿರಾಟ್ ಕೊಹ್ಲಿ ಅವರಂತೆ ಬ್ಯಾಟಿಂಗ್ ಮಾಡಬೇಕು ಎಂಬುದೊಂದೇ. ಅವರೇ ನನ್ನ ಆರಾಧ್ಯ ದೈವ ಎಂದಿದ್ದಾರೆ.

ಕೊಹ್ಲಿ ಶೈಲಿಯ ಚೇಸಿಂಗ್: 252/8 ರಿಂದ ಗೆಲುವಿನ ದಡಕ್ಕೆ!

ಕೊಹ್ಲಿಯವರ ಆಕರ್ಷಕ ಕವರ್ ಡ್ರೈವ್‌ಗಳು, ಮಣಿಕಟ್ಟಿನ ಫ್ಲಿಕ್‌ಗಳು ಮತ್ತು ಅಸಾಧ್ಯ ಎನಿಸುವ ರನ್ ಚೇಸ್‌ಗಳನ್ನು ನೋಡುತ್ತಾ ಬೆಳೆದ ಮೋಹಿತ್, ಶನಿವಾರ ಒಮಾನ್‌ನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಅಂತಹದ್ದೇ ಒಂದು ಇನ್ನಿಂಗ್ಸ್ ಕಟ್ಟಿದರು. ಪಾಕಿಸ್ತಾನ ವಿರುದ್ಧ ಭಾರತಕ್ಕೆ 51 ಎಸೆತಗಳಲ್ಲಿ 86 ರನ್‌ಗಳ ಅಗತ್ಯವಿದ್ದಾಗ 252 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿ ನಿಂತ ಮೋಹಿತ್, ಕೇವಲ 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿ ಭಾರತಕ್ಕೆ ಸ್ಮರಣೀಯ ಜಯ ತಂದುಕೊಟ್ಟರು.

ಗೆಲುವಿನ ನಂತರ ಭಾರತೀಯ ಆಟಗಾರರ ವರ್ತನೆ ಕ್ರೀಡಾಸ್ಫೂರ್ತಿಯ ಎಲ್ಲೆ ಮೀರಿದೆ ಎಂದು ಕೆಲವರು ಟೀಕಿಸಿದರೆ, ಜೂನಿಯರ್ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಶರತ್ ಶ್ರೀಧರನ್ ಅವರಂತಹವರು, ಗುಂಪು ಹಂತದಲ್ಲಿ ಭಾರತವನ್ನು ಸೋಲಿಸಿದ ಬಳಿಕ ಪಾಕಿಸ್ತಾನ ನಡೆಸಿದ್ದ ಪ್ರಚೋದನಕಾರಿ ಸಂಭ್ರಮಾಚರಣೆಯನ್ನು ಮರೆಯುವಂತಿಲ್ಲ ಎಂದಿದ್ದಾರೆ.

ನವೆಂಬರ್ 8ರ ಸೋಲು ಮತ್ತು ನವೆಂಬರ್ 14ರ ಚಾಂಪಿಯನ್ ಪ್ರತಿಜ್ಞೆ!

ತಮ್ಮ ಆರಾಧ್ಯ ದೈವ ಕೊಹ್ಲಿಯವರ 'ನೀವು ಎದುರಾಳಿಗೆ ತಿರುಗೇಟು ನೀಡಿದರೆ, ಅದನ್ನು ಸ್ವೀಕರಿಸಲೂ ಸಿದ್ಧರಿರಬೇಕು' ಎಂಬ ಮಾತಿನಂತೆ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿತೇ ಎಂಬ ಪ್ರಶ್ನೆಗೆ ಮೋಹಿತ್ ಉತ್ತರಿಸುತ್ತಾ, ;ಅವರನ್ನು ಅವಮಾನಿಸುವ ಯಾವುದೇ ಉದ್ದೇಶ ನಮಗಿರಲಿಲ್ಲ. ಆ ಸಂಭ್ರಮಾಚರಣೆ ನಮ್ಮ ಸಂತೋಷವನ್ನು ವ್ಯಕ್ತಪಡಿಸುವ ರೀತಿಯಾಗಿತ್ತು' ಎಂದಿದ್ದಾರೆ. ಇದರ ಹಿಂದಿನ ಹಿನ್ನೆಲೆಯನ್ನು ಬಿಚ್ಚಿಟ್ಟ ಮೋಹಿತ್, ನವೆಂಬರ್ 8ರಂದು ಟೂರ್ನಿಯ ಪ್ರಾಥಮಿಕ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 3 ವಿಕೆಟ್‌ಗಳಿಂದ ಸೋತ ಘಟನೆಯನ್ನು ಸ್ಮರಿಸಿದರು.

ಆ ಸೋಲಿನ ನಂತರ ನಾವೆಲ್ಲರೂ ತೀವ್ರ ಬೇಸರಗೊಂಡಿದ್ದೆವು. ಅದು ಬಹಳ ನಿಕಟ ಪಂದ್ಯವಾಗಿತ್ತು. ಆಗ ನಮ್ಮ ಬೌಲಿಂಗ್ ಕೋಚ್ ವಿಆರ್‌ವಿ ಸಿಂಗ್ (VRV Singh) ನಮ್ಮೆಲ್ಲರನ್ನೂ ಒಟ್ಟುಗೂಡಿಸಿ, ಕೋಚ್‌ಗಳಿಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ. ನಮ್ಮ ಆಟಗಾರರ ಸಾಮರ್ಥ್ಯ ನಮಗೆ ತಿಳಿದಿದೆ, ಟ್ರೋಫಿ ಗೆಲ್ಲುವಷ್ಟು ನೀವು ಸಮರ್ಥರಿದ್ದೀರಿ ಎಂದು ಧೈರ್ಯ ತುಂಬಿದರು. ಅದೇ ದಿನ ಇಡೀ ತಂಡ ಒಂದು ಪ್ರತಿಜ್ಞೆ ಮಾಡಿತು. ನಾವು 14ರಂದು ಮತ್ತೆ ಇದೇ ಮೈದಾನಕ್ಕೆ ಬರುತ್ತೇವೆ, ಮತ್ತು ಅಂದು ಚಾಂಪಿಯನ್‌ಗಳಾಗಿ ಮರಳುತ್ತೇವೆ ಎಂದು ಶಪಥ ಮಾಡಿದ್ದೆವು ಎಂದಿದ್ದಾರೆ.

ಸಹಜವಾಗಿಯೇ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಕಾವು ಹೆಚ್ಚಿರುತ್ತದೆ. ಟೂರ್ನಿಯ ಆರಂಭದಲ್ಲಿ ಅವರು ನಮ್ಮನ್ನು ಸೋಲಿಸಿದಾಗ ಅವರ ಸಂಭ್ರಮ ಅತಿಯಾಗಿತ್ತು. ಬಹುಶಃ ಅದು ಕೇವಲ ಗುಂಪು ಹಂತದ ಪಂದ್ಯ, ತಾವು ಇನ್ನೂ ಟ್ರೋಫಿ ಗೆದ್ದಿಲ್ಲ ಎಂಬುದನ್ನು ಅವರು ಮರೆತಿದ್ದರು. ನಾವು ಮತ್ತೆ ಭೇಟಿಯಾಗುತ್ತೇವೆ ಎಂಬುದನ್ನು ಅವರು ಮರೆತಿದ್ದರು. ಆ ಸೋಲು ನಮ್ಮಲ್ಲಿ ಟ್ರೋಫಿಯ ಹಸಿವನ್ನು ಹೆಚ್ಚಿಸಿತು. ಹೀಗಾಗಿ ಕನಸು ನನಸಾದಾಗ ನಾವು ಸಂಭ್ರಮಿಸಿದ ರೀತಿ ಸಂಪೂರ್ಣ ಸಹಜವಾಗಿತ್ತು ಎಂದು ಮೋಹಿತ್ ಮುಕ್ತವಾಗಿ ಮಾತನಾಡಿದ್ದಾರೆ.

338 ರನ್‌ಗಳ ಬೃಹತ್ ಗುರಿ: ಕೋಚ್ ಯರೇ ಗೌಡ್ ತುಂಬಿದ ಆತ್ಮವಿಶ್ವಾಸ!

338 ರನ್‌ಗಳ ಗುರಿ ಅಸಾಧ್ಯ ಎನಿಸಿದರೂ ತಂಡದ ಆತ್ಮವಿಶ್ವಾಸ ಕುಗ್ಗಿರಲಿಲ್ಲ ಎಂದು ಮೋಹಿತ್ ವಿವರಿಸಿದರು. 'ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಎಂದಿಗೂ ಅನುಮಾನವಿರಲಿಲ್ಲ. ಇನ್ನಿಂಗ್ಸ್ ವಿರಾಮದಲ್ಲೂ ನಾವೆಲ್ಲರೂ ಗುರಿ ತಲುಪುವ ವಿಶ್ವಾಸದಲ್ಲಿದ್ದೆವು. ನಮ್ಮ ಕೋಚ್ ಯರೇ ಗೌಡ್ ಸರ್ (Yere Goud) ಅವರು, 'ನಾವು 11ನೇ ಕ್ರಮಾಂಕದವರೆಗೂ ಬ್ಯಾಟ್ ಮಾಡುತ್ತೇವೆ ಮತ್ತು ಪಿಚ್ ಕೂಡ ನಮಗೆ ಪೂರಕವಾಗಿದೆ, ಹಾಗಾಗಿ ನಾವೇ ಚಾಂಪಿಯನ್ ಆಗುತ್ತೇವೆ' ಎಂದು ಹೇಳಿದ್ದರು.

ನಮ್ಮ 11ನೇ ಕ್ರಮಾಂಕದ ಆಟಗಾರ ವೆಂಕಟ (Venkata) ಬ್ಯಾಟಿಂಗ್‌ಗೆ ಬಂದಾಗಲೂ ಅವರಿಗೆ ಸ್ಟ್ರೈಕ್ ನೀಡಲು ನನಗೆ ಭಯವಾಗಲಿಲ್ಲ, ಏಕೆಂದರೆ ಅವರು ತಮ್ಮ ರಾಜ್ಯ ತಂಡದ ಪರ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ನಿಜ ಹೇಳಬೇಕೆಂದರೆ, 337 ರನ್ ಗಳಿಸಿದ ನಂತರ ಪಾಕಿಸ್ತಾನ ಅತಿಯಾದ ಆತ್ಮವಿಶ್ವಾಸಕ್ಕೆ (Overconfident) ಒಳಗಾಯಿತು ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿ ಭಾರತಕ್ಕೆ 9ನೇ ಏಷ್ಯಾಕಪ್ ಗೆದ್ದುಕೊಟ್ಟ ಕ್ಷಣ!

ಕಳೆದ ಏಳು ಯೂತ್ ಏಕದಿನ ಪಂದ್ಯಗಳಲ್ಲಿ ಐದನ್ನು ಪಾಕಿಸ್ತಾನ ಗೆದ್ದಿದ್ದ ದಾಖಲೆ ತಲೆಯಲ್ಲಿತ್ತೇ ಎಂಬ ಪ್ರಶ್ನೆಗೆ, ಯಾವುದೇ ಒತ್ತಡವಿರಲಿಲ್ಲ, ಆದರೆ ಪಾಕಿಸ್ತಾನಕ್ಕೆ ಅನುಭವಿ ಆಟಗಾರರ ಬಲವಿತ್ತು. ಆದರೆ ನಮ್ಮ ಕೋಚ್‌ಗಳು ನಮ್ಮ ಮೇಲಿಟ್ಟಿದ್ದ ನಂಬಿಕೆ ಮತ್ತು ದೇವರ ಮೇಲಿನ ಭಕ್ತಿ ಅದನ್ನು ಮೀರಿಸಿತು. 252ಕ್ಕೆ 8 ವಿಕೆಟ್ ಬಿದ್ದಿದ್ದಾಗಲೂ ಡಗೌಟ್‌ನಲ್ಲಿದ್ದ ಒಬ್ಬನೇ ಒಬ್ಬ ಆಟಗಾರನೂ ಪಂದ್ಯ ಮುಗಿಯಿತು ಎಂದು ಭಾವಿಸಿರಲಿಲ್ಲ. ನಾನು ಕ್ರೀಸ್‌ಗೆ ಹೋಗುವ ಮುನ್ನ ಗೌಡ್ ಸರ್, 'ನಿನ್ನ ಮೇಲೆ ನಂಬಿಕೆಯಿಟ್ಟು ನಿನ್ನ ಶಾಟ್‌ಗಳನ್ನು ಆಡು, ನೀನು ಇದನ್ನು ಮಾಡುತ್ತೀಯ ಎಂದು ನನಗೆ ಗೊತ್ತು' ಎಂದಿದ್ದರು" ಎಂದು ಮೋಹಿತ್ ತಿಳಿಸಿದರು.

ಭಾರತಕ್ಕೆ ಗೆಲ್ಲಲು ಕೊನೆಯ ಎಸೆತದಲ್ಲಿ 3 ರನ್‌ಗಳು ಬೇಕಿದ್ದವು. ಲೆಗ್-ಸ್ಪಿನ್ನರ್ ಅಹ್ಮದ್ ಹುಸೇನ್ (Ahmed Hussain) ಎಸೆತದಲ್ಲಿ ಮುಂದೆ ಬಂದು ಬೌಂಡರಿ ಬಾರಿಸಿದ ಮೋಹಿತ್, ಭಾರತಕ್ಕೆ 9ನೇ ಅಂಡರ್-19 ಏಷ್ಯಾಕಪ್ ಕಿರೀಟ ತೊಡಿಸಿದರು. "ಅವರು ಸಾಕಷ್ಟು ವೇಗವಾಗಿ ಬೌಲಿಂಗ್ ಮಾಡುತ್ತಿದ್ದರು, ಹಾಗಾಗಿ ಶಾಟ್‌ಗಳಿಗೆ ಎತ್ತರ ಸಿಗಲು ನಾನು ಮುಂದೆ ಬಂದು ಆಡಬೇಕು ಎಂದು ತಿಳಿದಿತ್ತು. ನನ್ನ ವ್ಯಾಪ್ತಿಯಲ್ಲಿ ಒಂದು ಎಸೆತ ಖಂಡಿತ ಸಿಗುತ್ತದೆ ಎಂದು ನನಗೆ ಗೊತ್ತಿತ್ತು, ಕೊನೆಯ ಎಸೆತ ನಿಖರವಾಗಿ ಹಾಗೆಯೇ ಇತ್ತು" ಎಂದು ಮೋಹಿತ್ ವಿವರಿಸಿದರು.