ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಸೀನಿಯರ್ ವುಮೆನ್ಸ್ ಟಿ20 ಟ್ರೋಫಿ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ 71 ರನ್ ಗಳ ಹೊರತಾಗಿಯೂ ದೆಹಲಿ ವಿರುದ್ಧ ಕರ್ನಾಟಕ 5 ವಿಕೆಟ್ ಗಳ ಸೋಲು ಕಂಡಿತು.

ಅಹ್ಮದಾಬಾದ್: ಗುಜರಾತ್‌ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ Senior Women's T20 ಟ್ರೋಫಿಯಲ್ಲಿ ಕರ್ನಾಟಕ ಪರ ಅಬ್ಬರಿಸಿ ಬೊಬ್ಬರಿದಿದ್ದಾರೆ. ಶ್ರೇಯಾಂಕ್ ಪಾಟೀಲ್ ಆಟದ ಹೊರತಾಗಿಯೂ ಕರ್ನಾಟ ದೆಹಲಿ ತಂಡದ ವಿರುದ್ಧ ಸೋಲನ್ನ ಅನುಭವಿಸಿದೆ.

ಹೇಗಿತ್ತು ಆರ್ಭಟ?

ಶ್ರೇಯಾಂಕಾ ಪಾಟೀಲ್ ಇವತ್ತಿನ ಪಂದ್ಯದಲ್ಲಿ ಅಕ್ಷರಶಃ ಡೆಲ್ಲಿ ವಿರುದ್ಧ ರೊಚ್ಚಿಗೆದ್ದು ಆಡಿದ್ದಾರೆ. 7ನೇ ಆರ್ಡರ್‍‌ನಲ್ಲಿ ಬ್ಯಾಟಿಂಗ್‌ಗೆ ಬಂದಾಗ ಕರ್ನಾಟಕ ತಂಡವು ಹೀನಾಯ ಸ್ಥಿತಿಯಲ್ಲಿತ್ತು. ಒಟ್ಟು 29 ಬಾಲ್ ಎದುರಿಸಿದ ಶ್ರೇಯಾಂಕಾ, 244.83 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಒಟ್ಟು ಐದು ಸಿಕ್ಸರ್, ಏಳು ಬೌಂಡರಿಯೊಂದಿಗೆ ಒಟ್ಟು 71 ರನ್‌ಗಳಿಸಿ ನಾಟೌಟ್ ಆಗಿ ಉಳಿದರು. ಅವರ 71 ರನ್‌ಗಳ ಕಾಣಿಕೆಯಿಂದಾಗಿ ಕರ್ನಾಟಕ ತಂಡ 175 ರನ್‌ಗಳಿಸಿ ನಿಟ್ಟುಸಿರು ಬಿಟ್ಟಿತು. ಇನ್ನು, ಬೌಲಿಗ್‌ನಲ್ಲೂ ಕಮಾಲ್ ಮಾಡಿದ್ದ ಅವರು, ಎದುರಾಳಿಯ ಎರಡು ವಿಕೆಟ್ ಪಡೆದರು. ಆದರೆ 42 ರನ್‌ಗಳನ್ನ ನೀಡಿ ಕೊಂಚ ದುಬಾರಿ ಆದರು.

ಸೋತ ಕರ್ನಾಟಕ

ಸೀನಿಯರ್ ವುಮೆನ್ಸ್ ಟಿ20 ಟ್ರೋಫಿಯಲ್ಲಿ ಇವತ್ತು ದೆಹಲಿ ಹಾಗೂ ಕರ್ನಾಟಕ ತಂಡಗಳು ಮುಖಾಮುಖಿ ಆಗಿದ್ದವು. ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ತಂಡವು 20 ಓವರ್‍‌ನಲ್ಲಿ 8 ವಿಕೆಟ್ ಕಳೆದುಕೊಡು 175 ರನ್‌ಗಳಿಸಿತ್ತು. ಕರ್ನಾಟಕ ತಂಡದ ಪರವಾಗಿ ಶ್ರೇಯಾಂಕ ಪಾಟೀಲ್ ಹೊರತುಪಡಿಸಿ ಸೌಮ್ಯ ವರ್ಮಾ 27, ಶುಭ ಸತೀಶ್ 21 ರನ್‌ಗಳ ಕಾಣಿಕೆ ನೀಡಿದರು. ಜೊತೆಗೆ ವೃಂದಾ ದಿನೇಶ್ 16 ರನ್ ಬಾರಿಸಿದರೆ, ತೇಜಸ್ವಿನಿ ಅವರು 19 ರನ್‌ ಚಚ್ಚಿದರು. ಇದರೊಂದಿಗೆ ಕರ್ನಾಟಕ ಎದುರಾಳಿ ದೆಹಲಿ ತಂಡಕ್ಕೆ 176 ರನ್‌ಗಳ ಟಾರ್ಗೆಟ್ ನೀಡಿತು.

ಕರ್ನಾಟಕ ನೀಡಿದ್ದ 176 ರನ್‌ಗಳ ಬೆನ್ನಟ್ಟಿದ್ದ ಡೆಲ್ಲಿ ತಂಡ ಕರ್ನಾಟಕ ಬೌಲರ್‍‌ಗಳಿಗೆ ಖಡಕ್ ಉತ್ತರ ನೀಡುತ್ತ ಹೋದರು. ತನಿಶಾ ಸಿಂಗ್ ಹಾಗೂ ಶ್ವೇತಾ ಶರಾವತ್ ಜವಾಬ್ದಾರಿಯುತವಾಗ ಬ್ಯಾಟ್ ಬೀಸಿದರು. ಕ್ರೀಸ್ ಕಚ್ಚಿ ನಿಂತ ಇಬ್ಬರು ಬ್ಯಾಟರ್‍‌ಗಳು ತಂಡಕ್ಕೆ ಅಮೋಘ ಪಾಲುಗಾರಿಕೆಯನ್ನ ನೀಡಿದರು. ಶ್ವೇತಾ ಅವರು 32 ಬಾಲ್‌ನಲ್ಲಿ 52 ರನ್‌ಗಳನ್ನ ಚಚ್ಚಿದರೆ, ತನೀಶ್ ಸಿಂಗ್ 46 ಬಾಲ್‌ನಲ್ಲಿ 77 ರನ್‌ಗಳಿಸಿ ನಾಟೌಟ್ ಆಗಿ ಉಳಿದರು. ವಿಶೇಷ ಅಂದರೆ ಇವರು 13 ಬೌಂಡರಿಗಳನ್ನ ಚಚ್ಚಿದರು.

ಅಂತಿಮವಾಗಿ ಐದು ವಿಕೆಟ್ ಕಳೆದುಕೊಂಡ ದೆಹಲಿ ತಂಡವು 17ನೇ ಓವರ್‍‌ನಲ್ಲಿ 176 ರನ್‌ಗಳಿಸಿ ಗೆಲುವಿನ ದಡ ಮುಟ್ಟಿತು. ಇನ್ನು, ಕರ್ನಾಟಕ ಪರ ಶ್ರೇಯಾಂಕ ಪಾಟೀಲ್ 2 ವಿಕೆಟ್ ಪಡೆದರೆ.. ಮೋನಿಕಾ ಪಟೇಲ್ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರು ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.