Asianet Suvarna News Asianet Suvarna News

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡ: ರಜತ್‌ ಪಾಟಿದಾರ್‌, ಮುಖೇಶ್‌ ಕುಮಾರ್‌ ಹೊಸಮುಖ!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್‌ ಇಂಡಿಯಾವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಪ್ರಕಟಿಸಿದೆ. ಬ್ಯಾಟ್ಸ್‌ಮನ್‌ ರಜತ್‌ ಪಾಟಿದಾರ್‌ ಹಾಗೂ ವೇಗಿ ಮುಖೇಶ್‌ ಕುಮಾರ್‌ ತಂಡದಲ್ಲಿ ಸ್ಥಾನ ಪಡೆದಿರುವ ಹೊಸಮುಖಗಳಾಗಿವೆ.
 

ODI series against South Africa Batter Rajat Patidar and seamer Mukesh Kumar get maiden India call up san
Author
First Published Oct 2, 2022, 6:41 PM IST

ಮುಂಬೈ (ಅ. 2): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಭಾನುವಾರ ಪ್ರಕಟಿಸಿದೆ. ಶಿಖರ್‌ ಧವನ್‌ ತಂಡಕ್ಕೆ ನಾಯಕರಾಗಿದ್ದರೆ, ಶ್ರೇಯಸ್‌ ಅಯ್ಯರ್‌ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ. ಬ್ಯಾಟ್ಸ್‌ಮನ್‌ ರಜತ್‌ ಪಾಟಿದಾರ್‌ ಹಾಗೂ ವೇಗಿ ಮುಖೇಶ್‌ ಕುಮಾರ್‌ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ.ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಅಕ್ಟೋಬರ್‌ 6 ರಂದು ಆರಂಭವಾಗಲಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತದ ಮೀಸಲು ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರಾದ ಶ್ರೇಯಸ್‌ ಅಯ್ಯರ್‌, ರವಿ ಬಿಷ್ಣೋಯ್‌ ಹಾಗೂ ದೀಪಕ್‌ ಚಹರ್ ಕೂಡ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಶಹಬಾಜ್‌ ಅಹ್ಮದ್‌ಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಜಿಂಬಾಬ್ವೆ ಪ್ರವಾಸದಲ್ಲಿ ವಾಷಿಂಗ್ಟನ್‌ ಸುಂದರ್‌ ಸ್ಥಾನವನ್ನು ತುಂಬಿದ್ದ ಶಹಬಾಜ್‌ ಅಹ್ಮದ್‌, ಇಡೀ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಪ್ರವಾಸಿ ನ್ಯೂಜಿಲೆಂಡ್‌ ಎ ತಂಡದ ವಿರುದ್ಧ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿಯಲ್ಲಿ ರಜತ್‌ ಪಾಟಿದಾರ್‌ ತೋರಿದ ಅದ್ಭುತ ಪ್ರದರ್ಶನಕ್ಕೆ ಉಡುಗೊರೆಯಾಗಿ ಅವರಿಗೆ ಟೀಮ್‌ ಇಂಡಿಯಾದ ಕರೆ ಸಿಕ್ಕಿದೆ.

ನ್ಯೂಜಿಲೆಂಡ್‌ ಎ ವಿರುದ್ಧದ ಮೊದಲ ಪಂದ್ಯದಲ್ಲಿ 176 ರನ್‌ ಸಿಡಿಸಿದ್ದ ರಜತ್‌ ಪಾಟಿದಾರ್‌ (Rajath Patidar), ಮೂರನೇ ಪಂದ್ಯದಲ್ಲಿ ಅಝೇಯ 109 ರನ್ ಬಾರಿಸಿದ್ದರು. ಅದಲ್ಲದೆ, ಮಧ್ಯಪ್ರದೇಶ ತಂಡದ ರಣಜಿ ಟ್ರೋಫಿ ಗೆಲುವಿನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ 122 ರನ್‌ ಬಾರಿಸುವ ಮೂಲಕ ರಜತ್‌ ಗಮನಸೆಳೆದಿದ್ದರು.ವೇಗಿ ಆವೇಶ್‌ ಖಾನ್‌ (Avesh Khan) ಕೂಡ ತಂಡಕ್ಕೆ ಮರಳಿದ್ದಾರೆ. ಅನಾರೋಗ್ಯದ ಕಾರಣಕ್ಕಾಗಿ ಟೀಮ್‌ ಇಂಡಿಯಾದ (Team India) ಏಷ್ಯಾ ಕಪ್‌ (Asia Cup) ಅಭಿಯಾನವನ್ನು ಇವರು ಅರ್ಧದಲ್ಲಿಯೇ ತೊರೆದಿದ್ದರು.

ಇನ್ನು ಮಧ್ಯಪ್ರದೇಶದ (Madhya Pradesh) ವೇಗಿ ಮುಖೇಶ್‌ ಕುಮಾರ್‌ (Mukesh Kumar) ಕೂಡ, ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಉರುಳಿಸಿ ಮಿಂಚಿದ್ದರು. ಅಲ್ಲದೆ, ಮೂರು ಪಂದ್ಯಗಳ ಸರಣಿಯಲ್ಲಿ 21.78ರ ಸರಾಸರಿಯಲ್ಲಿ 9 ವಿಕೆಟ್‌ ಉರುಳಿಸುವ ಮೂಲಕ ಸರಣಿಯಲ್ಲಿ ಗರಿಷ್ಠ ವಿಕೆಟ್‌ ಉರುಳಿಸಿದ ಬೌಲರ್‌ ಎನಿಸಿಕೊಂಡಿದ್ದರು. ಅದಲ್ಲದೆ, ರಣಜಿ ಟ್ರೋಫಿ ಸೆಮಿಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್‌ಗೆ 4 ವಿಕೆಟ್‌ ವಿಕೆಟ್‌ ಉರುಳಿಸಿದ್ದಲ್ಲದೆ, ಹಾಲಿ ನಡೆಯುತ್ತಿರುವ ಇರಾನಿ ಕಪ್‌ ಟೂರ್ನಿಯಲ್ಲಿ 4 ವಿಕೆಟ್‌ ಉರುಳಿಸಿದ್ದಾರೆ. 

ಗುಜರಾತ್ ಜೈಂಟ್ಸ್ ತಂಡದ ಜತೆ ಗರ್ಬಾ ಡ್ಯಾನ್ಸ್‌ ಮಾಡಿದ ವಿರೇಂದ್ರ ಸೆಹ್ವಾಗ್, ಕ್ರಿಸ್‌ ಗೇಲ್..! ವಿಡಿಯೋ ವೈರಲ್‌

ಈ ವರ್ಷದ ಆರಂಭದಲ್ಲಿ ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ಪ್ರವಾಸದ ಸೀಮಿತ ಓವರ್‌ಗಳ ಸರಣಿಯ ತಂಡದಲ್ಲಿ ರಾಹುಲ್‌ ತ್ರಿಪಾಠಿ (Rahul Tripati) ಸ್ಥಾನ ಪಡೆದಿದ್ದರು. ಆದರೆ, ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ನ್ಯೂಜಿಲೆಂಡ್‌ ಎ ತಂಡದ ವಿರುದ್ಧ ಚೆನ್ನೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನೀರಸ ನಿರ್ವಹಣೆ ತೋರಿಯೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗುರುವಾರ ಲಕ್ನೋದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದರೆ, 2ನೇ ಪಂದ್ಯ ಅಕ್ಟೋಬರ್‌ 9 ರ ಭಾನುವಾರದಂದು ಚೆನ್ನೈನಲ್ಲಿ ನಡೆಯಲಿದೆ. ಆ ಬಳಿಕ ಅಂತಿಮ ಪಂದ್ಯಕ್ಕಾಗಿ ಎರಡೂ ತಂಡಗಳು ಅಕ್ಟೋಬರ್‌ 11 ರಂದು ನವದೆಹಲಿಗೆ ಪ್ರಯಾಣಿಸಲಿವೆ.

Road Safety World Series: ದಿಗ್ಗಜರ ರೀತಿಯಲ್ಲೇ ಆಡಿ ರೋಡ್ ಸೇಫ್ಟಿ ಟ್ರೋಫಿ ಗೆದ್ದ ಇಂಡಿಯಾ ಲೆಜೆಂಡ್ಸ್‌..!

ಭಾರತ ತಂಡ: ಶಿಖರ್ ಧವನ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್ , ಅವೇಶ್ ಖಾನ್, ಮೊಹಮ್ಮದ್. ಸಿರಾಜ್, ದೀಪಕ್ ಚಹಾರ್.

Follow Us:
Download App:
  • android
  • ios