Road Safety World Series: ದಿಗ್ಗಜರ ರೀತಿಯಲ್ಲೇ ಆಡಿ ರೋಡ್ ಸೇಫ್ಟಿ ಟ್ರೋಫಿ ಗೆದ್ದ ಇಂಡಿಯಾ ಲೆಜೆಂಡ್ಸ್..!
ಲಂಕಾ ಲೆಜೆಂಡ್ಸ್ ಮಣಿಸಿ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ ಗೆದ್ದ ಇಂಡಿಯಾ ಲೆಜೆಂಡ್ಸ್
ಲಂಕಾ ಲೆಜೆಂಡ್ಸ್ ಎದುರು ಇಂಡಿಯಾ ಲೆಜೆಂಡ್ಸ್‌ಗೆ 33 ರನ್‌ಗಳ ಜಯ
ಏಕಪಕ್ಷೀಯವಾಗಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ ಫೈನಲ್ ಪಂದ್ಯ
ರಾಯ್ಪುರ(ಅ.02): ಸಚಿನ್ ತೆಂಡುಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡವು ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಲ್ಲಿನ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಮೈದಾನದಲ್ಲಿ ಏಕಪಕ್ಷೀಯವಾಗಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು ಬಗ್ಗುಬಡಿದ ಇಂಡಿಯಾ ಲೆಜೆಂಡ್ಸ್ ಲೆಜೆಂಡ್ಸ್ ತಂಡವು ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಮೊದಲು ಬ್ಯಾಟ್ ಮಾಡಿದ ಇಂಡಿಯಾ ಲೆಜೆಂಡ್ಸ್ ತಂಡವು, ನಮನ್ ಓಜಾ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 195 ರನ್‌ಗಳನ್ನು ಕಲೆಹಾಕಿತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್ ತಂಡವು ಕೇವಲ 162 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಇಂಡಿಯಾ ಲೆಜೆಂಡ್ಸ್ ತಂಡವು 33 ರನ್‌ಗಳ ಜಯಬೇರಿ ಬಾರಿಸಿತು. ಅಚ್ಚರಿಯ ಸಂಗತಿಯೆಂದರೆ, ಚೊಚ್ಚಲ ಆವೃತ್ತಿಯ ರೋಡ್ ಸೆಫ್ಟಿ ಫೈನಲ್ ಪಂದ್ಯದಲ್ಲೂ ಇಂಡಿಯಾ ಲೆಜೆಂಡ್ಸ್ ಹಾಗೂ ಶ್ರೀಲಂಕಾ ಲೆಜೆಂಡ್ಸ್ ತಂಡವು ಇದೇ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಆ ಸಂದರ್ಭದಲ್ಲೂ ಇಂಡಿಯಾ ಲೆಜೆಂಡ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿ ಬೀಗಿತ್ತು.
ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಲೆಜೆಂಡ್ಸ್ ತಂಡದ ನಾಯಕ ಸಚಿನ್ ತೆಂಡುಲ್ಕರ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್, ಬ್ಯಾಟಿಂಗ್‌ನಲ್ಲಿ ಜಾದೂ ಮಾಡಲು ಸಾಧ್ಯವಾಗಲಿಲ್ಲ. ಸಚಿನ್ ತೆಂಡುಲ್ಕರ್ ತಾವೆದುರಿಸಿದ ಮೊದಲ ಎಸೆತದಲ್ಲೇ ನುವಾನ್ ಕುಲಸೇಖರ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇದಾದ ಕೆಲ ಹೊತ್ತಿನಲ್ಲೇ ಸುರೇಶ್ ರೈನಾ ವಿಕೆಟ್ ಕಳೆದುಕೊಂಡ ಇಂಡಿಯಾ ಲೆಜೆಂಡ್ಸ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಯಿತು.
Ind vs SA ಟೀಂ ಇಂಡಿಯಾಗಿಂದು ಹರಿಣಗಳೆದುರು ಸರಣಿ ಗೆಲುವಿನ ಗುರಿ
ನಮನ್ ಓಜಾ ಆಕರ್ಷಕ ಶತಕ: ಆರಂಭದಲ್ಲೇ ಸಚಿನ್ ತೆಂಡುಲ್ಕರ್ ಹಾಗೂ ಸುರೇಶ್ ರೈನಾ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಇಂಡಿಯಾ ಲೆಜೆಂಡ್ಸ್ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ನಮನ್ ಓಜಾ ಹಾಗೂ ವಿನಯ್ ಕುಮಾರ್ ಮೂರನೇ ವಿಕೆಟ್‌ಗೆ 90 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಲೆಜೆಂಡ್ಸ್ ಎದುರು ಅಜೇಯ 90 ರನ್ ಚಚ್ಚಿದ್ದ ನಮನ್ ಓಜಾ, ಫೈನಲ್‌ನಲ್ಲಿ ಲಂಕಾ ಎದುರು 15 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 108 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು.
ಮತ್ತೊಂದು ತುದಿಯಲ್ಲಿ ವಿನಯ್ ಕುಮಾರ್ 21 ಎಸೆತಗಳಲ್ಲಿ 31 ರನ್ ಬಾರಿಸಿದರೆ, ಯುವರಾಜ್ ಸಿಂಗ್ 19, ಇರ್ಫಾನ್ ಪಠಾಣ್ 11 ಹಾಗೂ ಸ್ಟುವರ್ಟ್ ಬಿನ್ನಿ 8 ರನ್ ಬಾರಿಸುವ ಮೂಲಕ ಉಪಯುಕ್ತ ರನ್ ಕಾಣಿಕೆ ನೀಡಿದರು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್ ತಂಡಕ್ಕೆ ಕರ್ನಾಟದ ವೇಗಿಗಳಾದ ಅಭಿಮನ್ಯು ಮಿಥುನ್ ಹಾಗೂ ವಿನಯ್ ಕುಮಾರ್ ಶಾಕ್ ನೀಡಿದರು. ಶ್ರೀಲಂಕಾ ಲೆಜೆಂಡ್ಸ್ ಪರ ಇಶಾನ್ ಜಯರತ್ನೆ 51 ರನ್ ಬಾರಿಸಿದರಾದರೂ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ತಿಲಕರತ್ನೆ ದಿಲ್ಷ್ಯಾನ್, ಉಪುಲ್ ತರಂಗಾ, ಸನತ್ ಜಯಸೂರ್ಯ ಅವರಂತ ದಿಗ್ಗಜ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು, ಲಂಕಾ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿತು.
ಇಂಡಿಯಾ ಲೆಜೆಂಡ್ಸ್ ಪರ ವಿನಯ್ ಕುಮಾರ್ 3 ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್ 2 ವಿಕೆಟ್ ಪಡೆದರು. ಇನ್ನು ರಾಜೇಶ್ ಪವಾರ್, ಸ್ಟುವರ್ಟ್ ಬಿನ್ನಿ, ರಾಗಯಲ್ ಶರ್ಮಾ ಹಾಗೂ ಯೂಸುಫ್ ಪಠಾಣ್ ತಲಾ ಒಂದೊಂದು ವಿಕೆಟ್ ಪಡೆದರು.