ಗುಜರಾತ್ ಜೈಂಟ್ಸ್ ತಂಡದ ಜತೆ ಗರ್ಬಾ ಡ್ಯಾನ್ಸ್ ಮಾಡಿದ ವಿರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್..! ವಿಡಿಯೋ ವೈರಲ್
ನವರಾತ್ರಿ ಸಂಭ್ರಮಾಚರಣೆ ವೇಳೆಯಲ್ಲಿ ಭರ್ಜರಿ ಗಾರ್ಬಾ ಡ್ಯಾನ್ಸ್ ಮಾಡಿದ ಕ್ರಿಕೆಟಿಗರು
ಗುಜರಾತ್ ತಂಡದ ಕ್ರಿಸ್ ಗೇಲ್, ನೃತ್ಯಗಾರ್ತಿಯರೊಂದಿಗೆ ಬಿಂದಾಸ್ ಸ್ಟೆಪ್ಸ್
ಗುಜರಾತ್ ಜೈಂಟ್ಸ್ ತಂಡದ ಆಟಗಾರರು ಗರ್ಬಾ ಡ್ಯಾನ್ಸ್‌ಗೆ ಹೆಜ್ಜೆಹಾಕಿರುವ ವಿಡಿಯೋ ವೈರಲ್
ಜೋಧ್‌ಪುರ(ಅ.02): ಸ್ಪೋಟಕ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್, ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹಾಗೂ ಇನ್ನಿತರ ಕ್ರಿಕೆಟಿಗರು ಜೋದ್‌ಪುರದಲ್ಲಿ ಗರ್ಬಾ ಡ್ಯಾನ್ಸ್ ಮಾಡುವ ಮೂಲಕ ಭರ್ಜರಿಯಾಗಿಯೇ ನವರಾತ್ರಿ ಹಬ್ಬವನ್ನು ಆಚರಿಸಿದ್ದಾರೆ. ಅದಾನಿ ಒಡೆತನದ ಗುಜರಾತ್ ಜೈಂಟ್ಸ್ ತಂಡದ ಆಟಗಾರರು ಗರ್ಬಾ ಡ್ಯಾನ್ಸ್‌ಗೆ ಹೆಜ್ಜೆಹಾಕಿರುವ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.
ಭಾರತದಲ್ಲಿ ನವರಾತ್ರಿ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ನವರಾತ್ರಿ ಹಬ್ಬವು ದೇಶದ ದೊಡ್ಡ ಹಬ್ಬಗಳಲ್ಲಿ ಒಂದು ಎನಿಸಿದ್ದು, ದೇಶದ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತದೆ. ಕ್ರಿಕೆಟಿಗರೆಲ್ಲಾ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು, ಸಂಗೀತಕ್ಕೆ ಗಾರ್ಬಾ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಕ್ರಿಕೆಟಿಗರು ಮೈದಾನದಲ್ಲಿ ಸ್ಪೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ಮತ್ತು ಅದ್ಭುತ ಕ್ಷೇತ್ರ ರಕ್ಷಣೆ ಮೂಲಕ ಅಭಿಮಾನಿಗಳನ್ನು ರಂಜಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ಇದೀಗ ನವರಾತ್ರಿ ಸಂದರ್ಭದಲ್ಲಿ ಗಾರ್ಬಾ ನೃತ್ಯದ ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಗುಜರಾತ್ ಜೈಂಟ್ಸ್ ತಂಡವು ಜೋದ್‌ಪುರದಲ್ಲಿದ್ದು, ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದೆ. ವಿರೇಂದ್ರ ಸೆಹ್ವಾಗ್ ನೇತೃತ್ವದ ಗುಜರಾತ್ ಜೈಂಟ್ಸ್ ತಂಡವು ಈಗಾಗಲೇ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದ್ದು, ಸೋಮವಾರ(ಅ.3) ಇಲ್ಲಿನ ಬರ್ಕತುಲ್ಲಾ ಖಾನ್ ಸ್ಟೇಡಿಯಂನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಮಣಿಪಾಲ್ ಟೈಗರ್ಸ್ ತಂಡವನ್ನು ಎದುರಿಸಲಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಗುಜರಾತ್ ಜೈಂಟ್ಸ್ ತಂಡವು 6 ಪಂದ್ಯಗಳನ್ನಾಡಿ 2 ಗೆಲುವು, 3 ಸೋಲು ಸಹಿತ ಒಟ್ಟು 5 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದೆ.
Road Safety World Series: ದಿಗ್ಗಜರ ರೀತಿಯಲ್ಲೇ ಆಡಿ ರೋಡ್ ಸೇಫ್ಟಿ ಟ್ರೋಫಿ ಗೆದ್ದ ಇಂಡಿಯಾ ಲೆಜೆಂಡ್ಸ್..!
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯು ಸೆಪ್ಟೆಂಬರ್ 16ರಿಂದ ಆರಂಭವಾಗಿದ್ದು, ಟೂರ್ನಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್, ಬಿಲ್ವಾರಾ ಕಿಂಗ್ಸ್, ಗುಜರಾತ್ ಜೈಂಟ್ಸ್ ಹಾಗೂ ಮಣಿಪಾಲ್ ಟೈಗರ್ಸ್ ತಂಡಗಳು ಪಾಲ್ಗೊಂಡಿವೆ. ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಬಿಲ್ವಾರಾ ಕಿಂಗ್ಸ್ ತಂಡಗಳು ತಲಾ 3 ಗೆಲುವು ಹಾಗೂ 2 ಸೋಲುಗಳೊಂದಿಗೆ 7 ಅಂಕಗಳ ಸಹಿತ ಮೊದಲೆರಡು ಸ್ಥಾನ ಪಡೆದು ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಗಿಟ್ಟಿಸಿಕೊಂಡಿದೆ. ಇನ್ನು ಗುಜರಾತ್ ಜೈಂಟ್ಸ್ ಹಾಗೂ ಮಣಿಪಾಲ್ ಟೈಗರ್ಸ್ ತಂಡಗಳು ಸೋಮವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಡಲಿವೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವು ಅಕ್ಟೋಬರ್ 05ರಂದು ನಡೆಯಲಿದೆ.
ಗುಜರಾತ್ ಜೈಂಟ್ಸ್ ತಂಡದಲ್ಲಿ ವಿರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್ ಮಾತ್ರವಲ್ಲದೇ ಪಾರ್ಥಿವ್ ಪಟೇಲ್, ಕೆವಿನ್ ಒ ಬ್ರಿಯಾನ್, ಗ್ರೇಮ್ ಸ್ವಾನ್, ರಿಚರ್ಡ್ ಲೆವಿ, ಹಾಗೂ ಅಜಂತ ಮೆಂಡೀಸ್ ಅವರಂತಹ ದಿಗ್ಗಜ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.