ಶ್ರೀಲಂಕಾ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರಚಿನ್ ರವೀಂದ್ರ, ಪಂದ್ಯ ಮುಕ್ತಾಯದ ಬಳಿಕ ಬೆಂಗಳೂರು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. "ಬೆಂಗಳೂರು ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ನನ್ನ ಹೃದಯಕ್ಕೆ ಹತ್ತಿರವಾಗಿವೆ. ಮುಂದೆಯೂ ಇಲ್ಲಿ ಮತ್ತಷ್ಟು ಕ್ರಿಕೆಟ್ ಆಡುವ ವಿಶ್ವಾಸವಿದೆ" ಎಂದು ಹೇಳಿದ್ದರು.
ಬೆಂಗಳೂರು(ನ.10): ಬೆಂಗಳೂರು ಮೂಲದ ನ್ಯೂಜಿಲೆಂಡ್ ಪ್ರತಿಭಾನ್ವಿತ ಆಲ್ರೌಂಡರ್ ರಚಿನ್ ರವೀಂದ್ರ, ಹಾಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ರಚಿನ್ ರವೀಂದ್ರ ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಒಲವು ತೋರಿದ್ದಾರೆ. ಈ ಕುರಿತಂತೆ ರಚಿನ್ ರವೀಂದ್ರ ಮಾಡಿದ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದ ರಚಿನ್ ರವೀಂದ್ರ, ಆ ಬಳಿಕವೂ ಸ್ಥಿರ ಪ್ರದರ್ಶನ ತೋರಿ ಮಿಂಚುತ್ತಿದ್ದಾರೆ. ಇದುವರೆಗೂ ನ್ಯೂಜಿಲೆಂಡ್ ಪರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಎಲ್ಲಾ 9 ಪಂದ್ಯಗಳನ್ನಾಡಿ ಮೂರು ಶತಕ ಸಹಿತ 565 ರನ್ ಸಿಡಿಸಿದ್ದಾರೆ. ಇನ್ನು ಕೇವಲ 13 ರನ್ ಬಾರಿಸಿದರೆ, ನ್ಯೂಜಿಲೆಂಡ್ ಪರ ಒಂದು ವಿಶ್ವಕಪ್ ಆವೃತ್ತಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಶ್ರೀಲಂಕಾ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರಚಿನ್ ರವೀಂದ್ರ, ಪಂದ್ಯ ಮುಕ್ತಾಯದ ಬಳಿಕ ಬೆಂಗಳೂರು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. "ಬೆಂಗಳೂರು ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ನನ್ನ ಹೃದಯಕ್ಕೆ ಹತ್ತಿರವಾಗಿವೆ. ಮುಂದೆಯೂ ಇಲ್ಲಿ ಮತ್ತಷ್ಟು ಕ್ರಿಕೆಟ್ ಆಡುವ ವಿಶ್ವಾಸವಿದೆ" ಎಂದು ಹೇಳಿದ್ದರು.
ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಹರಾಜು; ಆಟಗಾರರ ರೀಟೈನ್‌ಗೆ ಡೇಟ್ ಫಿಕ್ಸ್
ರಚಿನ್ ರವೀಂದ್ರ ಆಡಿದ ಮಾತುಗಳನ್ನು ಮುಫಾದ್ದಲ್ ವೊಹ್ರಾ ಎನ್ನುವವರು ಪೋಸ್ಟ್ ಮಾಡಿದ್ದರು. ಇದನ್ನು ರೀಟ್ವೀಟ್ ಮಾಡಿರುವ ರಚಿನ್ ರವೀಂದ್ರ ಹೆಲೋ ಆರ್‌ಸಿಬಿ ಫ್ರಾನ್ಸ್, @IPL ಎಂದು ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ನಾನು ಆರ್‌ಸಿಬಿ ಪರ ಆಡಲು ರೆಡಿ ಎನ್ನುವ ಸುಳಿವನ್ನು ರಚಿನ್ ರವೀಂದ್ರ ಬಿಟ್ಟುಕೊಟ್ಟಿದ್ದಾರೆ.
ರಚಿನ್ ರವೀಂದ್ರ ಈಗಾಗಲೇ ತಾವಾಡುತ್ತಿರುವ ಚೊಚ್ಚಲ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಚೊಚ್ಚಲ ವಿಶ್ವಕಪ್ ಆಡಿ ಅತಿಹೆಚ್ಚು ಶತಕ(03) ಸಿಡಿಸಿದ ಆಟಗಾರ ಎನ್ನುವ ಕೀರ್ತಿಗೆ ರಚಿನ್ ರವೀಂದ್ರ ಪಾತ್ರರಾಗಿದ್ದಾರೆ. ಇನ್ನು 25 ವರ್ಷ ತುಂಬುವುದರೊಳಗಾಗಿ ಒಂದು ವಿಶ್ವಕಪ್ ಆವೃತ್ತಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನ್ನುವ ಹಿರಿಮೆ ಕೂಡಾ ಇದೀಗ ರಚಿನ್ ಪಾಲಾಗಿದೆ. ಈ ಮೊದಲು ಸಚಿನ್ ತೆಂಡುಲ್ಕರ್ 1996ರ ಏಕದಿನ ವಿಶ್ವಕಪ್‌ನಲ್ಲಿ 523 ರನ್ ಬಾರಿಸಿದ್ದರು. ಆದರೆ ಲೀಗ್ ಹಂತದ ಅಂತ್ಯದ ವೇಳೆಗೆ ರಚಿನ್ 565 ರನ್ ಚಚ್ಚಿದ್ದಾರೆ.
ಬೆಂಗಳೂರಿನಲ್ಲಿ ಅಜ್ಜಿಯಿಂದ ದೃಷ್ಟಿ ತೆಗಿಸಿಕೊಂಡು ಜೈ ಶ್ರೀರಾಮ್ ಎಂದ ರಚಿನ್ ರವೀಂದ್ರ..! ವಿಡಿಯೋ ವೈರಲ್
ಇನ್ನು 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ಇದೇ ಮೊದಲ ಬಾರಿಗೆ ಭಾರತದಾಚೆ ನಡೆಯುತ್ತಿದೆ. ಮುಂಬರುವ ಡಿಸೆಂಬರ್ 19ರಂದು ದುಬೈನಲ್ಲಿ ಆಟಗಾರರ ಹರಾಜು ನಡೆಯಲಿದ್ದು, ಈ ಬಾರಿ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳಿಗೆ 100 ಕೋಟಿ ರುಪಾಯಿ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ. ಆಟಗಾರರ ಹರಾಜಿನಲ್ಲಿ ರಚಿನ್ ರವೀಂದ್ರ ಆರ್‌ಸಿಬಿ ತಂಡ ಕೂಡಿಕೊಳ್ಳುತ್ತಾರಾ ಅಥವಾ ಬೇರೆ ತಂಡದ ಪಾಲಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
