Asianet Suvarna News Asianet Suvarna News

ಬೆಂಗಳೂರಿನಲ್ಲಿ ಅಜ್ಜಿಯಿಂದ ದೃಷ್ಟಿ ತೆಗಿಸಿಕೊಂಡು ಜೈ ಶ್ರೀರಾಮ್ ಎಂದ ರಚಿನ್ ರವೀಂದ್ರ..! ವಿಡಿಯೋ ವೈರಲ್

ಇದೀಗ ಸ್ವತಃ ರಚಿನ್ ರವೀಂದ್ರ ತಮ್ಮ ಅಜ್ಜಿ ದೃಷ್ಟಿ ತೆಗಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, 'ಜಯ್ ಶ್ರೀರಾಮ್' ಓಂ, ಇಂತಹ ಅದ್ಭುತ ಕುಟುಂಬವನ್ನು ಪಡೆದ ನಾನೇ ಸೌಭಾಗ್ಯವಂತ. ಅಜ್ಜ-ಅಜ್ಜಿಯರು ದೇವರಿದ್ದಂತೆ, ಅವರ ಆಶೀರ್ವಾದ ಹಾಗೂ ನೆನಪುಗಳು ಎಂದೆಂದಿಗೂ ನಮ್ಮ ಜತೆಯಿರುತ್ತದೆ" ಎಂದು ರಚಿನ್ ಬರೆದುಕೊಂಡಿದ್ದಾರೆ. 

Rachin Ravindra Visits Grandparents In Bengaluru Gets Nazar Utarna Ritual Done Video Goes Viral kvn
Author
First Published Nov 10, 2023, 11:52 AM IST

ಬೆಂಗಳೂರು(ನ.11): ನ್ಯೂಜಿಲೆಂಡ್ ಪ್ರತಿಭಾನ್ವಿತ ಕ್ರಿಕೆಟಿಗ ರಚಿನ್ ರವೀಂದ್ರ, ಭಾರತದಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ. ಬೆಂಗಳೂರು ಮೂಲದ ಕಿವೀಸ್ ಸ್ಟಾರ್ ಆಲ್ರೌಂಡರ್ ರಚಿನ್ ರವೀಂದ್ರ, ಗುರುವಾರ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಎದುರು ಅದ್ಭುತ ಆಟದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಪಂದ್ಯ ಮುಕ್ತಾಯದ ಬಳಿಕ ರಚಿನ್ ರವೀಂದ್ರ, ಬೆಂಗಳೂರಿನಲ್ಲೇ ಇರುವ ತಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಮೊಮ್ಮಗ ರಚಿನ್ ರವೀಂದ್ರ ಅವರನ್ನು ಮನೆಯಲ್ಲಿ ಕೂರಿಸಿ ಅಜ್ಜಿ ದೃಷ್ಟಿ ತೆಗೆದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಇನ್ನು ಇದೀಗ ಸ್ವತಃ ರಚಿನ್ ರವೀಂದ್ರ ತಮ್ಮ ಅಜ್ಜಿ ದೃಷ್ಟಿ ತೆಗಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, 'ಜಯ್ ಶ್ರೀರಾಮ್' ಓಂ, ಇಂತಹ ಅದ್ಭುತ ಕುಟುಂಬವನ್ನು ಪಡೆದ ನಾನೇ ಸೌಭಾಗ್ಯವಂತ. ಅಜ್ಜ-ಅಜ್ಜಿಯರು ದೇವರಿದ್ದಂತೆ, ಅವರ ಆಶೀರ್ವಾದ ಹಾಗೂ ನೆನಪುಗಳು ಎಂದೆಂದಿಗೂ ನಮ್ಮ ಜತೆಯಿರುತ್ತದೆ" ಎಂದು ರಚಿನ್ ಬರೆದುಕೊಂಡಿದ್ದಾರೆ. 

Timed Out Call ಏಂಜೆಲೋ ಮ್ಯಾಥ್ಯೂಸ್‌ ಕಾಲೆಳೆದ ವಿಲಿಯಮ್ಸನ್‌, ಬೌಲ್ಟ್‌..!

ರಚಿನ್ ರವೀಂದ್ರ ಅವರ ಇಡೀ ಕುಟುಂಬದ ಮೂಲ ಕರ್ನಾಟಕದ ಬೆಂಗಳೂರು. ಸಾಫ್ಟ್‌ವೇರ್‌ ಆರ್ಕಿಟೆಕ್ಟ್‌ ಆಗಿದ್ದ ರಚಿನ್‌ ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ, 1990ರಲ್ಲಿ ನ್ಯೂಜಿಲೆಂಡ್‌ಗೆ ವಲಸೆ ಹೋಗುವ ಮುನ್ನ ಬೆಂಗಳೂರಿನಲ್ಲಿ ಕ್ಲಬ್‌ ಕ್ರಿಕೆಟರ್‌ ಆಗಿದ್ದರು. ಇನ್ನು ರಚಿನ್‌ ರವೀಂದ್ರ ಅವರ ಅಜ್ಜ ಬಾಲಕೃಷ್ಣ ಅಡಿಗ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಬಯಾಲಜಿ ಪ್ರಾಧ್ಯಾಪಕರಾಗಿದ್ದರು.  ಇನ್ನೂ ವಿಶೇಷವೆಂದರೆ, ರಚಿನ್‌ ಎನ್ನುವ ಹೆಸರಿನಲ್ಲೂ ಕ್ರಿಕೆಟ್‌ನ ಅಂಶವಿದೆ. ರಚಿನ್‌ ರವೀಂದ್ರ ಅವರ ತಂದೆ ಕ್ರಿಕೆಟ್‌ ಆಸಕ್ತರಾಗಿದ್ದರಿಂದ, ಭಾರತ ಎರಡು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ರಾಹುಲ್‌ ದ್ರಾವಿಡ್‌ ಹಾಗೂ ಸಚಿನ್‌ ತೆಂಡುಲ್ಕರ್‌ ಅವರ ಹೆಸರು ಸೇರಿಸಿ ರಚಿನ್‌ ಎನ್ನುವ ಹೆಸರನ್ನಿಟ್ಟಿದ್ದರು.

23 ವರ್ಷದ ಬೆಂಗಳೂರು ಮೂಲದ ಪ್ರತಿಭಾನ್ವಿತ ಆಲ್ರೌಂಡರ್ ರಚಿನ್ ರವೀಂದ್ರ, ಶ್ರೀಲಂಕಾ ಎದುರಿನ ಪಂದ್ಯಕ್ಕೂ ಮುನ್ನ 8 ಇನಿಂಗ್ಸ್‌ಗಳನ್ನಾಡಿ 523 ರನ್ ಬಾರಿಸಿದ್ದರು. ಈ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕ್ವಿಂಟನ್ ಡಿ ಕಾಕ್(550) ಹಾಗೂ ವಿರಾಟ್ ಕೊಹ್ಲಿ(543) ಬಳಿಕ ಮೂರನೇ ಸ್ಥಾನದಲ್ಲಿದ್ದರು. ಇದೀಗ ಈ ಇಬ್ಬರನ್ನು ಹಿಂದಿಕ್ಕಿರುವ ರಚಿನ್ ರವೀಂದ್ರ 565 ರನ್‌ಗಳೊಂದಿಗೆ ಅಗ್ರಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಲಂಕಾ ವಿರುದ ಗೆದ್ದ ನ್ಯೂಜಿಲೆಂಡ್, ಪಾಕಿಸ್ತಾನದ ಸೆಮೀಸ್ ದಾರಿ ಬಹುತೇಕ ಬಂದ್!

ಚೊಚ್ಚಲ ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಸಾಧಕ:

ಈ ವಿಶ್ವಕಪ್ ಟೂರ್ನಿಗೂ ಮುನ್ನ ಆಟಗಾರನೊಬ್ಬ ಚೊಚ್ಚಲ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಜಾನಿ ಬೇರ್‌ಸ್ಟೋವ್ ಹೆಸರಿನಲ್ಲಿತ್ತು. ಇಂಗ್ಲೆಂಡ್ ಸ್ಪೋಟಕ ಆರಂಭಿಕ ಬ್ಯಾಟರ್ ಬೇರ್‌ಸ್ಟೋವ್ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 532 ರನ್ ಬಾರಿಸಿದ್ದರು. ಆ ಅಪರೂಪದ ದಾಖಲೆ ಇದೀಗ ರಚಿನ್ ರವೀಂದ್ರ ಪಾಲಾಗಿದೆ. 

25 ವರ್ಷ ತುಂಬುವುದರೊಳಗಾಗಿ ಒಂದು ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಸಾಧಕ:

ಇನ್ನು ಏಕದಿನ ವಿಶ್ವಕಪ್ ಇತಿಹಾಸದಲ್ಲಿ 25 ವರ್ಷ ತುಂಬುವುದರೊಳಗಾಗಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿತ್ತು. ಮುಂಬೈಕರ್ 1996ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 523 ರನ್ ಬಾರಿಸಿದ್ದರು. ಆಗ ಸಚಿನ್ 25 ವರ್ಷಕ್ಕಿಂತ ಚಿಕ್ಕವರಾಗಿದ್ದರು. ಇದೀಗ ಆ ದಾಖಲೆ ಕೂಡಾ ಬೆಂಗಳೂರು ಮೂಲದ ರಚಿನ್ ರವೀಂದ್ರ ಪಾಲಾಗಿದೆ.
 

Follow Us:
Download App:
  • android
  • ios