ಬಿಸಿಸಿಐ ಸೂಚನೆಯಂತೆ, ಭಾರತ-ಬಾಂಗ್ಲಾದೇಶ ರಾಜತಾಂತ್ರಿಕ ಸಂಘರ್ಷದ ಹಿನ್ನೆಲೆಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ವೇಗಿ ಮುಸ್ತಫಿಜುರ್ ರಹಮಾನ್ ಅವರನ್ನು ಕೈಬಿಟ್ಟಿದೆ. ಈ ನಿರ್ಧಾರವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಟೀಕಿಸಿದೆ. ಈ ಬಗ್ಗೆ ಎಡಗೈ ವೇಗಿ ಮೊದಲ ಸಲ ಪ್ರತಿಕ್ರಿಯಿಸಿದ್ದಾರೆ.
ಕೋಲ್ಕತಾ: ಬಿಸಿಸಿಐ ಸೂಚನೆಯ ನಂತರ, ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರಹಮಾನ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಐಪಿಎಲ್ ಫ್ರಾಂಚೈಸಿ ಕೋಲ್ಕತಾ ನೈಟ್ ರೈಡರ್ಸ್ ಪ್ರಕಟಿಸಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ, ಆಟಗಾರನನ್ನು ತಂಡದಿಂದ ಕೈಬಿಡುವಂತೆ ಭಾರತೀಯ ಕ್ರಿಕೆಟ್ ಮಂಡಳಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಸೂಚನೆ ನೀಡಿತ್ತು. ಅದರಂತೆ, ಆಟಗಾರನನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಕೋಲ್ಕತಾ ತಂಡದ ಆಡಳಿತ ಮಂಡಳಿ ಅಧಿಕೃತವಾಗಿ ತಿಳಿಸಿದೆ.
ಕೊನೆಗೂ ಮೌನ ಮುರಿದ ಮುಸ್ತಫಿಜುರ್ ರಹಮಾನ್
ತಂಡದಿಂದ ಕೈಬಿಟ್ಟ ನಂತರ ಮುಸ್ತಫಿಜುರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಅವರು ನನ್ನನ್ನು ಕೈಬಿಟ್ಟರೆ ನಾನೇನು ಮಾಡಲು ಸಾಧ್ಯ?' ಎಂದು ಬಾಂಗ್ಲಾದೇಶದ ಕ್ರೀಡಾ ಮಾಧ್ಯಮವೊಂದಕ್ಕೆ ಮುಸ್ತಫಿಜುರ್ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ಬಿಸಿಸಿಐ ನಿರ್ಧಾರವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಟೀಕಿಸಿದೆ. ಈ ರೀತಿಯ ಅನುಭವ ಹಿಂದೆಂದೂ ಆಗಿಲ್ಲ, ಆಟಗಾರರ ಘನತೆ ಮತ್ತು ಸುರಕ್ಷತೆಯೇ ನಮ್ಮ ಆದ್ಯತೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕೆಲವರನ್ನು ಪ್ರತ್ಯೇಕಿಸುವ ಆಲೋಚನೆಗಳಿಂದ ಹಿಂದೆ ಸರಿಯಬೇಕು ಎಂದು ಬಿಸಿಬಿ ಸ್ಪಷ್ಟಪಡಿಸಿದೆ.
ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮುಸ್ತಫಿಜುರ್ ರಹಮಾನ್ ಅವರನ್ನು 9.2 ಕೋಟಿ ರೂ.ಗೆ ಖರೀದಿಸಿತ್ತು. ಐಪಿಎಲ್‌ನಲ್ಲಿ ಬಾಂಗ್ಲಾದೇಶದ ಆಟಗಾರನೊಬ್ಬನಿಗೆ ಸಿಕ್ಕ ಅತಿ ಹೆಚ್ಚು ಮೊತ್ತ ಇದಾಗಿತ್ತು. ಆಟಗಾರನನ್ನು ಕೈಬಿಟ್ಟ ಕಾರಣ, ಅಗತ್ಯವಿದ್ದರೆ ಬದಲಿ ಆಟಗಾರನನ್ನು ಸೇರಿಸಿಕೊಳ್ಳಲು ಕೋಲ್ಕತಾಗೆ ಅವಕಾಶ ನೀಡುವುದಾಗಿ ಬಿಸಿಸಿಐ ತಿಳಿಸಿತ್ತು. ಐಪಿಎಲ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಭಾರತದ ಬಾಂಗ್ಲಾದೇಶ ಪ್ರವಾಸವೂ ಅನಿಶ್ಚಿತತೆಯಲ್ಲಿದೆ.
ಮುಸ್ತಫಿಜುರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಕ್ಕಾಗಿ ಕೋಲ್ಕತ್ತಾ ತಂಡದ ಸಹ-ಮಾಲೀಕ ಮತ್ತು ಬಾಲಿವುಡ್ ತಾರೆ ಶಾರುಖ್ ಖಾನ್ ವಿರುದ್ಧ ಒಂದು ವರ್ಗದ ಅಭಿಮಾನಿಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಶಾರುಖ್ ಖಾನ್ ವಿರುದ್ಧ ಬಿಜೆಪಿ, ಶಿವಸೇನೆ ನಾಯಕರು ಕಟುವಾಗಿ ಟೀಕಿಸಿದ್ದರು. ಮುಸ್ತಫಿಜುರ್ ಆಡಿದರೆ ಐಪಿಎಲ್ ಪಂದ್ಯಗಳಿಗೆ ಅಡ್ಡಿಪಡಿಸುವುದಾಗಿ ಉಜ್ಜಯಿನಿಯ ಧಾರ್ಮಿಕ ಮುಖಂಡರು ಬೆದರಿಕೆ ಹಾಕಿದ್ದರು.
ಪಾಕ್ ಆಟಗಾರರು ಈಗಾಗಲೇ ಐಪಿಎಲ್‌ನಿಂದ ಬ್ಯಾನ್
2008ರಲ್ಲಿ ಆರಂಭವಾದ ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಮುಂಬೈ ಮೇಲೆ ಪಾಕ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ದರು. ಬಳಿಕ ಪಾಕಿಸ್ತಾನ ಆಟಗಾರರನ್ನು ಬಿಸಿಸಿಐ ಐಪಿಎಲ್‌ನಿಂದ ಬ್ಯಾನ್ ಮಾಡಿತ್ತು. ಇದೀಗ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಬಾಂಗ್ಲಾದೇಶದ ಆಟಗಾರರಿಗೂ ಬಿಸಿಸಿಐ ಐಪಿಎಲ್‌ನಿಂದ ನಿಷೇಧ ಹೇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಅತಂತ್ರ ಸ್ಥಿತಿ ತಲುಪಿದ ಭಾರತ-ಬಾಂಗ್ಲಾದೇಶ ಸರಣಿ
ಎಲ್ಲಾ ಅಂದುಕೊಂಡಂತೆ ಸಾಗಿದ್ದರೇ ಕಳೆದ ವರ್ಷವೇ ಭಾರತ ತಂಡವು ದ್ವಿಪಕ್ಷೀಯ ಸರಣಿಯನ್ನಾಡಲು ಬಾಂಗ್ಲಾದೇಶ ಪ್ರವಾಸ ಮಾಡಬೇಕಿತ್ತು. ಆದರೆ ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ತಲೆದೂರಿದ್ದರಿಂದಾಗಿ ಈ ಪ್ರವಾಸವನ್ನು ಬಿಸಿಸಿಐ ಮುಂದೂಡಿತ್ತು. ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ವೇಳಾಪಟ್ಟಿಯಲ್ಲಿ ಮುಂಬರುವ ಸೆಪ್ಟೆಂಬರ್‌ನಲ್ಲಿ ಭಾರತ ತಂಡವು ಸೀಮಿತ ಓವರ್‌ಗಳ ಸರಣಿಯನ್ನಾಡಲು ಬಾಂಗ್ಲಾದೇಶ ಪ್ರವಾಸ ಮಾಡಲಿದೆ ಎಂದು ತಿಳಿಸಿತ್ತು. ಆದರೆ ಈ ಸರಣಿ ಆಯೋಜನೆಗಳ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ. ಒಂದು ವೇಳೆ ಟೀಂ ಇಂಡಿಯಾ, ಬಾಂಗ್ಲಾದೇಶ ಪ್ರವಾಸ ಮಾಡದೇ ಹೋದರೇ ಬಾಂಗ್ಲಾದೇಶಕ್ಕೆ ಕೋಟ್ಯಾಂತರ ರುಪಾಯಿ ನಷ್ಟವಾಗಲಿದೆ.


