2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಣಸಾಡಲಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಭಾರತವನ್ನೇ ಫೇವರಿಟ್ ಎಂದು ಕರೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳ ಬಲದಿಂದ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಹಮದಾಬಾದ್ (ಮಾ.7): ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2026ರ ಟಿ20 ವಿಶ್ವಕಪ್‌ನ ಮಹಾಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 8, ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್ ಈ ಪಂದ್ಯದ ಕುರಿತು ತಮ್ಮ ಪ್ರೆಡಿಕ್ಶನ್‌ಅನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾರು ಬೆಸ್ಟ್? ಡಿವಿಲಿಯರ್ಸ್ ಪ್ರಕಾರ ಭಾರತವೇ ಫೇವರಿಟ್!

"ಪ್ರಸ್ತುತ ಫಾರ್ಮ್ ಮತ್ತು ತವರಿನ ಪರಿಸ್ಥಿತಿಯನ್ನು ಗಮನಿಸಿದರೆ, ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಗಲು ಸುವರ್ಣಾವಕಾಶವಿದೆ," ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ನ್ಯೂಜಿಲೆಂಡ್ ತಂಡದ ಬಗ್ಗೆ ಮಾತನಾಡಿದ ಅವರು, "ಭಾರತದಂತಹ ಪ್ರಬಲ ತಂಡದ ವಿರುದ್ಧ ಕಿವೀಸ್ ಗೆಲ್ಲುವ ಸಾಧ್ಯತೆ ತುಂಬಾ ಕಡಿಮೆ ಇದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನ್ಯೂಜಿಲೆಂಡ್ ಗೆಲ್ಲುವ ಸಾಧ್ಯತೆ ಕೇವಲ ಶೇ. 10 ರಿಂದ 20 ರಷ್ಟು ಮಾತ್ರ ಇದೆ. ಭಾರತವನ್ನು ಸೋಲಿಸಬೇಕಾದರೆ ಅವರು ತಮ್ಮ ಜೀವನದ ಅತ್ಯುತ್ತಮ ಕ್ರಿಕೆಟ್ ಆಡಬೇಕಾಗುತ್ತದೆ," ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಒಂದು ವೇಳೆ ಭಾರತ ಈ ಪಂದ್ಯವನ್ನು ಸೋತರೆ ಅದು ದೊಡ್ಡ ಅನಿರೀಕ್ಷಿತ ಫಲಿತಾಂಶ (Upset) ಎನಿಸಿಕೊಳ್ಳಲಿದೆ. ಡೇಲ್ ಸ್ಟೇನ್ ಕೂಡ ನ್ಯೂಜಿಲೆಂಡ್ ಪರ ಒಲವು ಹೊಂದಿದ್ದಾರೆ, ಆದರೆ ನನ್ನ ಮನಸ್ಸಿನಲ್ಲಿ ಮಾತ್ರ ಭಾರತವೇ ವಿನ್ನರ್ ಆಗಿ ಕಾಣಿಸುತ್ತಿದೆ," ಎಂದಿದ್ದಾರೆ.

ಬುಮ್ರಾ ಭಾರತದ ಅತಿದೊಡ್ಡ ಅಸ್ತ್ರ

ಜಸ್ಪ್ರೀತ್ ಬುಮ್ರಾ ಅವರನ್ನು ಭಾರತ ತಂಡದ ಅತಿದೊಡ್ಡ ಶಕ್ತಿ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಬುಮ್ರಾ ಅವರ ಬೌಲಿಂಗ್ ಮತ್ತು ಒತ್ತಡದ ಸಂದರ್ಭಗಳನ್ನು ನಿಭಾಯಿಸುವ ಕೌಶಲವನ್ನು ಅವರು ಶ್ಲಾಘಿಸಿದರು. "ಪಂದ್ಯದ ಪ್ರತಿ ಕ್ಷಣದ ಬಗ್ಗೆ ಬುಮ್ರಾಗೆ ಉತ್ತಮ ತಿಳುವಳಿಕೆಯಿದೆ. ತಂಡಕ್ಕೆ ಯಾವ ಸಮಯದಲ್ಲಿ ಏನು ಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ ಮತ್ತು ಅವರು ತಮ್ಮ ಕೌಶಲಗಳನ್ನು ನಿಖರವಾಗಿ ಬಳಸುತ್ತಾರೆ. ಬುಮ್ರಾ ಅವರ ಆತ್ಮವಿಶ್ವಾಸ ಮತ್ತು ಯಾರ್ಕರ್ ಎಸೆಯುವ ಸಾಮರ್ಥ್ಯ ಭಾರತಕ್ಕೆ ಪ್ಲಸ್ ಪಾಯಿಂಟ್," ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ಗೆಲುವಿಗೆ ಪವಾಡವೇ ನಡೆಯಬೇಕು!

"ನಾನು ಸಂಪೂರ್ಣವಾಗಿ ಟೀಮ್ ಇಂಡಿಯಾ ಪರವಾಗಿದ್ದೇನೆ. ನನ್ನ ಮನಸ್ಸು ಮತ್ತು ಹೃದಯ ಎಲ್ಲವೂ ಭಾರತದ ವಿಜಯದ ಕಡೆಗೆ ಬೊಟ್ಟು ಮಾಡುತ್ತಿದೆ," ಎಂದು ಡಿವಿಲಿಯರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ಅನ್ನು ತಾಂತ್ರಿಕವಾಗಿ ಸ್ಮಾರ್ಟ್ ತಂಡ ಎಂದು ಬಣ್ಣಿಸಿದ ಅವರು, "ಪರಿಸ್ಥಿತಿಗೆ ತಕ್ಕಂತೆ ತಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳುವಲ್ಲಿ ನ್ಯೂಜಿಲೆಂಡ್ ನಿಪುಣ ತಂಡ. ಆದರೆ ಫೈನಲ್ ಪಂದ್ಯದಲ್ಲಿ ಭಾರತದ ಬಲ ಅದೆಷ್ಟಿದೆಯೆಂದರೆ, ನ್ಯೂಜಿಲೆಂಡ್ ಗೆಲ್ಲಲು ಯಾವುದಾದರೂ ಪವಾಡವೇ ನಡೆಯಬೇಕು," ಎಂದು ಹೇಳಿದ್ದಾರೆ.