ಎಂಎಸ್ ಧೋನಿ 2005ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಅಜೇಯ 183 ರನ್ ಗಳಿಸಿದ್ದರು. ವಿಕೆಟ್ ಕೀಪರ್ ಆಗಿ ಅವರು ನಿರ್ಮಿಸಿದ ಈ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು 21 ವರ್ಷಗಳಾದರೂ ಯಾರೂ ಮುರಿದಿಲ್ಲ. ಕ್ವಿಂಟನ್ ಡಿ ಕಾಕ್ ಮತ್ತು ಲಿಟನ್ ದಾಸ್ ಅವರಂತಹ ಆಟಗಾರರು ಹತ್ತಿರ ಬಂದರೂ ಈ ದಾಖಲೆ ಮುರಿಯಲು ವಿಫಲರಾಗಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಆದರೆ ಅವರ ಸಾಧನೆಗಳು ಮಾತ್ರ ಇಂದಿಗೂ ಕಣ್ಮುಂದೆಯೇ ಇವೆ. ಕಳೆದ 21 ವರ್ಷಗಳಿಂದ ಅಂತಹ ಒಂದು ದಾಖಲೆಯನ್ನ ಇವತ್ತಿಗೂ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.
ಅಕ್ಟೋಬರ್ 31, 2005 ರಂದು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡಿದರು. ಜೈಪುರದಲ್ಲಿ ನಡೆದ ಆ ಪಂದ್ಯದಲ್ಲಿ.. ಶ್ರೀಲಂಕಾ ಭಾರತಕ್ಕೆ 299 ರನ್ಗಳ ಬೃಹತ್ ಗುರಿ ನೀಡಿತು. ಧೋನಿ ಚೇಸಿಂಗ್ನಲ್ಲಿ ಅದ್ಭುತವಾಗಿ ಆಡಿದರು. 145 ಎಸೆತಗಳಲ್ಲಿ 183 ರನ್ಗಳೊಂದಿಗೆ ಅಜೇಯರಾಗಿ ಉಳಿದರು. ಈ ಇನ್ನಿಂಗ್ಸ್ನಲ್ಲಿ 15 ಬೌಂಡರಿಗಳು ಮತ್ತು 10 ಸಿಕ್ಸರ್ಗಳು ಸೇರಿದ್ದವು. ಧೋನಿ ಅವರ ಈ ಆಟದ ಪರಿಣಾಮ ಟೀಂ ಇಂಡಿಯಾ ಸುಲಭವಾಗಿ ಗೆಲುವು ಸಾಧಿಸಿತು.
ವಿಕೆಟ್ ಕೀಪರ್ ಆಗಿ ಅತ್ಯಧಿಕ ಸ್ಕೋರ್
ಧೋನಿ ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ಕೀಪರ್ ಆಗಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ಸೃಷ್ಟಿಸಿದರು. ಅಂದಿನಿಂದ.. ಯಾವುದೇ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಈ ಸ್ಕೋರ್ ಮೀರಿಸಲು ಸಾಧ್ಯವಾಗಿಲ್ಲ. ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾದ ಅನೇಕ ಆಟಗಾರರು 183 ರನ್ಗಳನ್ನು ತಲುಪಲು ಪ್ರಯತ್ನಿಸಿದ್ದಾರೆ. ಆದರೆ ಅವರೆಲ್ಲ ವಿಫಲರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ಕೀಪರ್ ಕ್ವಿಂಟನ್ ಡಿ ಕಾಕ್ ಧೋನಿಯ ದಾಖಲೆಗೆ ಹತ್ತಿರವಾದ ಆಟಗಾರ. 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು 178 ರನ್ ಗಳಿಸಿದರು. ಹೀಗಿದ್ದೂ ಅವರಿಗೆ ಧೋನಿಯ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಗಲಿಲ್ಲ.
ಲಿಟನ್ ದಾಸ್
ಬಾಂಗ್ಲಾದೇಶದ ವಿಕೆಟ್ ಕೀಪರ್ ಲಿಟನ್ ದಾಸ್ 2020 ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ 176 ರನ್ ಗಳಿಸಿದರು. ಧೋನಿ ಅವರ ಸ್ಕೋರ್ ಸರಿಗಟ್ಟಲು ಆಗಲಿಲ್ಲ. ಜೊತೆಗೆ.. ಜೆಎಸ್ ಮಲ್ಹೋತ್ರಾ 173 ರನ್ ಗಳಿಸಿ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್ಕ್ರಿಸ್ಟ್ 172 ರನ್ ಗಳಿಸಿ ಈ ಪಟ್ಟಿಯಲ್ಲಿದ್ದಾರೆ. ಅನೇಕ ಆಟಗಾರರು ಇಂತಹ ಬೃಹತ್ ಇನ್ನಿಂಗ್ಸ್ ಆಡಿದರೂ ಧೋನಿಯ 183 ರನ್ ದಾಖಲೆ ಹಾಗೆಯೇ ಉಳಿದುಕೊಂಡಿದೆ.
ಧೋನಿಗಿಂತ ಮೊದಲು.. ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಆಡಮ್ ಗಿಲ್ಕ್ರಿಸ್ಟ್ ಹೊಂದಿದ್ದರು. ಅವರು 2004ರಲ್ಲಿ ಜಿಂಬಾಬ್ವೆ ವಿರುದ್ಧ 172 ರನ್ ಗಳಿಸಿದರು. 2005ರಲ್ಲಿ ಧೋನಿ ಪಾಕಿಸ್ತಾನ ವಿರುದ್ಧ 148 ರನ್ ಗಳಿಸುವ ಮೂಲಕ ಗಿಲ್ಕ್ರಿಸ್ಟ್ ದಾಖಲೆಯ ಹತ್ತಿರ ಬಂದರು. ಅದೇ ವರ್ಷ ಶ್ರೀಲಂಕಾ ವಿರುದ್ಧ 183 ರನ್ ಗಳಿಸುವ ಮೂಲಕ ಆ ದಾಖಲೆಯನ್ನ ಮುರಿದರು.






