2026ರ ಐಪಿಎಲ್‌ನಲ್ಲಿ ಪ್ಲೇಆಫ್ ಪ್ರವೇಶಿಸಲು ವಿಫಲವಾದ ಪಂಜಾಬ್ ಕಿಂಗ್ಸ್, 2027ರ ಹರಾಜಿಗೂ ಮುನ್ನ ತಂಡದಲ್ಲಿ ಮಹತ್ತರ ಬದಲಾವಣೆ ಮಾಡಲು ಮುಂದಾಗಿದೆ. ಕಳಪೆ ಫಾರ್ಮ್‌ನಿಂದಾಗಿ ಮಾರ್ಕಸ್ ಸ್ಟೊಯಿನಿಸ್ ಸೇರಿದಂತೆ ಐವರು ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡುವ ಸಾಧ್ಯತೆಯಿದೆ.

ನವದೆಹಲಿ: 2025ರ ಐಪಿಎಲ್‌ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ, ಕಪ್ ಗೆಲ್ಲಲು ಮುಗ್ಗರಿಸಿದ್ದ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ (PBKS), 2026ರ ಆವೃತ್ತಿಯಲ್ಲಿ ಪ್ಲೇಆಫ್‌ ಪ್ರವೇಶಿಸುವಲ್ಲಿ ವಿಫಲವಾಗಿದೆ. ಹತ್ತು ತಂಡಗಳ ಟೂರ್ನಿಯಲ್ಲಿ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪಂಜಾಬ್‌, ದ್ವಿತೀಯಾರ್ಧದಲ್ಲಿ ಹಿನ್ನಡೆ ಅನುಭವಿಸಿ ಟೂರ್ನಿಯಿಂದ ಲೀಗ್ ಹಂತದಲ್ಲೇ ಹೊರಬಿದ್ದಿತ್ತು.

ಹೀಗಾಗಿ, ಮುಂದಿನ ಐಪಿಎಲ್‌ ಆವೃತ್ತಿಯಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡುವ ಗುರಿ ಪಂಜಾಬ್‌ ಕಿಂಗ್ಸ್‌ ತಂಡದ್ದಾಗಿದೆ. ಐಪಿಎಲ್‌ 2027ರ ಹರಾಜಿಗೂ ಮುನ್ನ ತಂಡದ ಸಂಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹರಾಜಿಗೂ ಮುನ್ನ ಪಂಜಾಬ್‌ ಕಿಂಗ್ಸ್‌ ತಂಡ ಈ ಐವರು ಆಟಗಾರರನ್ನು ತಂಡದಿಂದ ರಿಲೀಸ್ ಮಾಡುವ ಸಾಧ್ಯತೆಯಿದೆ.

1. ಮಾರ್ಕಸ್‌ ಸ್ಟೊಯಿನಿಸ್‌

ಆಸ್ಟ್ರೇಲಿಯಾದ ಆಲ್‌ರೌಂಡರ್‌ ಮಾರ್ಕಸ್‌ ಸ್ಟೊಯಿನಿಸ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ತಂಡವು ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ₹11 ಕೋಟಿಗೆ ಖರೀದಿಸಿತ್ತು. ಆದರೆ, ತಂಡದ ಪರ ಆಡಿದ 26 ಪಂದ್ಯಗಳಲ್ಲಿ ಅವರು 376 ರನ್‌ ಗಳಿಸಿದ್ದು, ಕೇವಲ ಮೂರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಇನ್ನೊಂದೆಡೆ, ಇದೇ ರೀತಿಯ ಪಾತ್ರ ನಿರ್ವಹಿಸಬಲ್ಲ ಅಜ್ಮತುಲ್ಲಾ ಒಮರ್‌ಝೈ ಪಂಜಾಬ್‌ ತಂಡದಲ್ಲಿದ್ದಾರೆ. ಹೀಗಾಗಿ, ತಂಡದ ಸಂಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಸ್ಟೊಯಿನಿಸ್‌ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

2. ನೆಹಾಲ್‌ ವಧೇರಾ

ನೆಹಾಲ್‌ ವಧೇರಾ ಅವರನ್ನು ಪಂಜಾಬ್‌ ಕಿಂಗ್ಸ್‌ ತಂಡವು ಮೆಗಾ ಹರಾಜಿನಲ್ಲಿ ₹4.20 ಕೋಟಿಗೆ ಖರೀದಿಸಿತ್ತು. ಆದರೆ, ಐಪಿಎಲ್‌ 2026ರಲ್ಲಿ ಎಂಟು ಪಂದ್ಯಗಳಿಂದ ಕೇವಲ 65 ರನ್‌ ಗಳಿಸಲಷ್ಟೇ ಅವರು ಶಕ್ತರಾಗಿದ್ದರು. ಕಳಪೆ ಫಾರ್ಮ್‌ನಿಂದಾಗಿ ತಂಡದಿಂದ ಹೊರಗುಳಿದಿದ್ದ ವಧೇರಾ ಅವರನ್ನು ಮುಂದಿನ ಆವೃತ್ತಿಗೂ ಉಳಿಸಿಕೊಳ್ಳುದು ಬಹುತೇಕ ಅನುಮಾನ. ಹೀಗಾಗಿ, ಹರಾಜಿಗೂ ಮುನ್ನ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

3. ಲಾಕಿ ಫರ್ಗ್ಯೂಸನ್‌

ನ್ಯೂಜಿಲೆಂಡ್‌ನ ವೇಗದ ಬೌಲರ್‌ ಲಾಕಿ ಫರ್ಗ್ಯೂಸನ್‌ ಕಳೆದ ಎರಡು ಐಪಿಎಲ್‌ ಆವೃತ್ತಿಗಳಲ್ಲಿ ಪಂಜಾಬ್‌ ಕಿಂಗ್ಸ್‌ ಪರ ಕೇವಲ ಏಳು ಪಂದ್ಯಗಳಲ್ಲಿ ಆಡಿದ್ದಾರೆ. 2025ರಲ್ಲಿ ಗಾಯದ ಸಮಸ್ಯೆ ಹಾಗೂ 2026ರಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಅವರು ಹೆಚ್ಚಿನ ಪಂದ್ಯಗಳಿಗೆ ಲಭ್ಯವಾಗಿರಲಿಲ್ಲ. ಆಡಿದ ಏಳು ಪಂದ್ಯಗಳಲ್ಲಿ ಅವರು ಆರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದು, ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಹೀಗಾಗಿ, ಮುಂದಿನ ಸೀಸನ್‌ಗೂ ಮುನ್ನ ಫರ್ಗ್ಯೂಸನ್‌ ಅವರನ್ನು ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ.

4. ಮುಶೀರ್‌ ಖಾನ್‌

ಯುವ ಭಾರತೀಯ ಬ್ಯಾಟರ್‌ ಮುಶೀರ್‌ ಖಾನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ತಂಡವು ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ₹30 ಲಕ್ಷಕ್ಕೆ ಖರೀದಿಸಿತ್ತು. ಆದರೆ, ಕಳೆದ ಎರಡು ಸೀಸನ್‌ಗಳಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ತಂಡದ ಪರ ಅವರು ಆಡಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರ. ಆಡುವ ಹನ್ನೊಂದರ ಬಳಗದಲ್ಲಿ ಹೆಚ್ಚಿನ ಅವಕಾಶ ಸಿಗದಿರುವುದು ಯುವ ಆಟಗಾರನ ಬೆಳವಣಿಗೆಗೆ ಅಡ್ಡಿಯಾಗಬಹುದು. ಹೀಗಾಗಿ, ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶಕ್ಕಾಗಿ ಮುಶೀರ್‌ ಖಾನ್‌ ಕೂಡ ತಂಡದಿಂದ ಹೊರಬಂದು ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುವ ನಿರೀಕ್ಷೆಯಿದೆ.

5. ಬೆನ್‌ ಡ್ವಾರ್ಶುಯಿಸ್‌

ಆಸ್ಟ್ರೇಲಿಯಾದ ವೇಗದ ಬೌಲರ್‌ ಬೆನ್‌ ಡ್ವಾರ್ಶುಯಿಸ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ತಂಡವು ಕಳೆದ ವರ್ಷದ ಹರಾಜಿನಲ್ಲಿ ₹4.40 ಕೋಟಿಗೆ ಖರೀದಿಸಿತ್ತು. ಆದರೆ, ಐಪಿಎಲ್‌ 2026ರಲ್ಲಿ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಆ ಪಂದ್ಯದಲ್ಲಿ ಅವರು ಒಂದು ವಿಕೆಟ್‌ ಪಡೆದಿದ್ದರು. ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಮಾರ್ಕೊ ಯಾನ್ಸನ್‌ ಮತ್ತು ಕ್ಸೇವಿಯರ್‌ ಬಾರ್ಟ್ಲೆಟ್‌ ಅವರಂತಹ ವಿದೇಶಿ ವೇಗದ ಬೌಲರ್‌ಗಳಿದ್ದಾರೆ. ಜೊತೆಗೆ ಅಜ್ಮತುಲ್ಲಾ ಒಮರ್‌ಝೈ ಅವರಂತಹ ಆಲ್‌ರೌಂಡರ್‌ ಕೂಡ ತಂಡದಲ್ಲಿದ್ದಾರೆ. ಹೀಗಾಗಿ, ವಿದೇಶಿ ಆಟಗಾರರ ಸಂಯೋಜನೆಯನ್ನು ಬದಲಿಸುವ ಉದ್ದೇಶದಿಂದ ಡ್ವಾರ್ಶುಯಿಸ್‌ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಐಪಿಎಲ್‌ 2027ಕ್ಕೂ ಮುನ್ನ ಪಂಜಾಬ್‌ ತಂಡದಲ್ಲಿ ಬದಲಾವಣೆ?

2025ರ ಆವೃತ್ತಿಯಲ್ಲಿ ಫೈನಲ್‌ ತಲುಪಿದ್ದ ಪಂಜಾಬ್‌ ಕಿಂಗ್ಸ್‌, 2026ರಲ್ಲಿ ಪ್ಲೇಆಫ್‌ ಪ್ರವೇಶಿಸಲು ವಿಫಲವಾಗಿದೆ. ಮುಂದಿನ ಸೀಸನ್‌ನಲ್ಲಿ ಮತ್ತೆ ಪ್ರಶಸ್ತಿ ರೇಸ್‌ಗೆ ಮರಳಬೇಕಾದರೆ ತಂಡದ ದುರ್ಬಲತೆಗಳನ್ನು ಸರಿಪಡಿಸುವುದು ಮುಖ್ಯವಾಗಲಿದೆ. ಆದರೆ, ಮಾರ್ಕಸ್‌ ಸ್ಟೊಯಿನಿಸ್‌, ನೆಹಾಲ್‌ ವಧೇರಾ, ಲಾಕಿ ಫರ್ಗ್ಯೂಸನ್‌, ಮುಶೀರ್‌ ಖಾನ್‌ ಮತ್ತು ಬೆನ್‌ ಡ್ವಾರ್ಶುಯಿಸ್‌ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದು ಸದ್ಯಕ್ಕೆ ನಿರೀಕ್ಷೆ ಮಾತ್ರ. ಅಂತಿಮ ನಿರ್ಧಾರವನ್ನು ಫ್ರಾಂಚೈಸಿ ಹರಾಜಿಗೂ ಮುನ್ನ ಅಧಿಕೃತವಾಗಿ ಘೋಷಿಸಲಿದೆ. ಅಂದಹಾಗೆ 2027ರ ಐಪಿಎಲ್ ಹರಾಜಿಗೂ ಮುನ್ನ ನವೆಂಬರ್ 15ರೊಳಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ರೀಟೈನ್ ಹಾಗೂ ರಿಲೀಸ್ ಆಟಗಾರರ ಹೆಸರು ಘೋಷಿಸಬೇಕಿದೆ.